KSRTC-BMTC Strike | ಸಾರಿಗೆ ಮುಷ್ಕರ: ಚೆಂಡು ಈಗ ಸರ್ಕಾರದ ಅಂಗಳದಲ್ಲಿದೆ: ಎಚ್ ವಿ ಅನಂತ ಸುಬ್ಬರಾವ್
ವಿಶೇಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊಟ್ಟಮೊದಲನೆಯದಾಗಿ ಜಾರಿಗೆ ತಂದ ಶಕ್ತಿ ಯೋಜನೆ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ನೌಕರರ ಬಗ್ಗೆ ಸರ್ಕಾರದ ಈ ಅಸಡ್ಡೆ ಧೋರಣೆಯಿಂದ ನಾವು ಬೇಸತ್ತಿದ್ದೇವೆ;
ಸರ್ಕಾರವೇ ವಾಗ್ದಾನ ಮಾಡಿದ್ದ ಬಾಕಿ ವೇತನ ಮತ್ತು ಗ್ರಾಚ್ಯುಟಿ ಸೇರಿದಂತೆ ನಮ್ಮ ಬೇಡಿಕೆಗಳ ವಿಷಯದಲ್ಲಿ ಮುಖ್ಯಮಂತ್ರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ಈಗ ಚೆಂಡು ಸರ್ಕಾರದ ಅಂಗಳದಲ್ಲೇ ಇದೆ ಎಂದು ರಾಜ್ಯ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಚ್ ವಿ ಅನಂತ ಸುಬ್ಬರಾವ್ ಹೇಳಿದ್ದಾರೆ.
ʼದ ಫೆಡರಲ್ ಕರ್ನಾಟಕʼದ ವಿಶೇಷ ಸಂದರ್ಶನದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಬೇಡಿಕೆಗಳನ್ನು ಒಪ್ಪಿ 38 ತಿಂಗಳ ವೇತನ ಬಾಕಿ ಮತ್ತು ಗ್ರಾಚ್ಯುಟಿಯನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಆ ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಸಾರಿಗೆ ನೌಕರರಿಗೆ ನೀಡಬೇಕಾದ ಬಾಕಿ ವೇತನ ಮತ್ತು ಇತರೆ ಬೇಡಿಕೆಗಳ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ ಈ ಧೋರಣೆ ಖಂಡಿಸಿ ನಾವು ಮುಷ್ಕರಕ್ಕೆ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಈ ನಡುವೆ, ಕಳೆದ ತಿಂಗಳು ನಮ್ಮ ಬೇಡಿಕೆ ಮುಂದಿಟ್ಟು ಮುಷ್ಕರಕ್ಕೆ ಮುಂದಾಗಿದ್ದಾಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮೊಂದಿಗೆ ಮಾತುಕತೆ ನಡೆಸಿ, ನವೆಂಬರ್ 30ರ ಒಳಗೆ ಬಾಕಿ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಆಗ ಮುಷ್ಕರವನ್ನು ಕೈಬಿಟ್ಟಿದ್ದೆವು. ಆದರೆ, ಅದಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರದ ಕಡೆಯಿಂದ ಯಾವುದೇ ಪ್ರಕ್ರಿಯೆ ಆಗಿಲ್ಲ. ಪ್ರತಿನಿತ್ಯ ರಾಜ್ಯದಲ್ಲಿ ಒಂದೂವರೆ ಕೋಟಿ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ, ವಿಶೇಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊಟ್ಟಮೊದಲನೆಯದಾಗಿ ಜಾರಿಗೆ ತಂದ ಶಕ್ತಿ ಯೋಜನೆಯ ಯಶಸ್ಸಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವ ನೌಕರರ ಬಗ್ಗೆ ಸರ್ಕಾರದ ಈ ಅಸಡ್ಡೆ ಧೋರಣೆಯಿಂದ ನಾವು ಬೇಸತ್ತಿದ್ದೇವೆ ಎಂದು ಅನಂತ ಸುಬ್ಬರಾವ್ ಹೇಳಿದರು.
ಡಿಸೆಂಬರ್ 9ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, ಅಂದು ಮುಖ್ಯಮಂತ್ರಿಗಳಿಗೆ ಮುಷ್ಕರದ ನೋಟಿಸ್ ನೀಡಲಿದ್ದೇವೆ. ಸರ್ಕಾರಕ್ಕೆ ಆವರೆಗೆ ಸಮಯ ನೀಡಿದ್ದೇವೆ. ಆ ಮುಂಚೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಾತುಕತೆ ನಡೆಸಿ ನಮ್ಮ ಬೇಡಿಕೆ ಈಡೇರಿಸಿದ್ದಲ್ಲಿ ಮಾತ್ರ ಮುಷ್ಕರ ಹಿಂಪಡೆಯಲಾಗುವುದು. ಇಲ್ಲವಾದಲ್ಲಿ, ಮುಷ್ಕರ ಶತಸಿದ್ಧ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದು, 26 ಸಾವಿರ ಬಸ್ಗಳು ಡಿಸೆಂಬರ್ 31ರಿಂದ ರಸ್ತೆಗೆ ಇಳಿಯುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು.
ಸಂಪೂರ್ಣ ಸಂದರ್ಶನ ನೋಡಲು ಇಲ್ಲಿ ಕ್ಲಿಕ್ ಮಾಡಿ...