ಚೀನಾ ಹೊಸ ವೈರಸ್ | ಆತಂಕ ಬೇಡ ಎಚ್ಚರಿಕೆ ಇರಲಿ; ಆರೋಗ್ಯ ಇಲಾಖೆ ಸೂಚನೆ

Update: 2025-01-04 13:31 GMT

ಐದು ವರ್ಷಗಳ ಹಿಂದೆ ಚೀನಾದಲ್ಲಿ ಕಂಡುಬಂದಿದ್ದ ಕೊರೊನಾ ವೈರಸ್ ಮಹಾಮಾರಿಯಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನ ಜೀವ ಕಳೆದುಕೊಂಡರು, ಬದುಕುಳಿದವರ ಜೀವನದ ದಿಕ್ಕೆ ಬದಲಾಗಿ ಹೋಯ್ತು. ಜನರ ಜೀವ ಹಾಗೂ ಜೀವನದೊಂದಿಗೆ ಚೆಲ್ಲಾಟವಾಡಿದ ಕೊರೊನಾ ಭೀತಿಯಿಂದ ಜಗತ್ತು ಹೊರಬರುತ್ತಿರುವ ಸಂದರ್ಭದಲ್ಲಿಯೇ ಇದೀಗ ಮತ್ತೊಂದು ಆತಂಕಕಾರಿ ಸುದ್ದಿ ಚೀನಾದಿಂದ ಬಂದಿದೆ.

ಮತ್ತೊಂದು ಮಹಾಮಾರಿ ವೈರಸ್ ಅಲ್ಲಿ ಕಾಣಿಸಿಕೊಂಡಿದ್ದು, ಜಗತ್ತಿನಾದ್ಯಂತ ಬೇರೆ ಬೇರೆ ರಾಷ್ಟ್ರಗಳು ಅಲರ್ಟ್​ ಆಗಿವೆ. ಚೀನಾ ನೆರೆಯ ರಾಷ್ಟ್ರವಾಗಿರುವುದರಿಂದ ಭಾರತವೂ ಕೂಡ ಸೂಕ್ಷ್ಮವಾಗಿ ಚೀನಾದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೀನಾದಲ್ಲಿ ಹೊಸ ವೈರಸ್‌ ಎಚ್‌ಎಂಪಿವಿ ಸೋಂಕು ಉಲ್ಬಣಗೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತದ ಆರೋಗ್ಯ ಇಲಾಖೆ ದೇಶದ ಎಲ್ಲ ರಾಜ್ಯಗಳಿಗೆ ಮಹತ್ವದ ಸೂಚನೆ  ರವಾನಿಸಿದೆ.

ಯಾವುದೇ ಐಎಲ್ಐ, ಸಾರಿ(ನೆಗಡಿ-ಜ್ವರ) ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಚೀನಾದಲ್ಲಿ ಹೊಸ ವೈರಸ್ ಆತಂಕ ಸೃಷ್ಟಿಸಿರುವುದರಿಂದ ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ಮಾಡಿದ್ದಾರೆ. ಜೊತೆಗೆ ಆದೇಶದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಜನರು ಆತಂಕ ಪಡುವ ಅಗತ್ಯವಿಲ್ಲ. ಚಳಿಗಾಲದಲ್ಲಿ ವರಸ್ ಸಮಸ್ಯೆ  ಕಂಡು ಬರುತ್ತದೆ. ಜನರು ಆತಂಕ ಪಡದೇ ಮಾಸ್ಕ್ ಹಾಕಿಕೊಂಡು ಅಡ್ಡಾಡಬೇಕು ಎಂದಿದ್ದಾರೆ.

ಜೊತೆಗೆ ಯಾವುದೇ ಐಎಲ್ಐ ಅಥವಾ ಸಾರಿ ಪ್ರಕರಣಗಳು ಕಂಡು ಬಂದಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಕೇಂದ್ರ ಸರ್ಕಾರದ ಸೂಚನೆ ಕುರಿತು ವಿವರಿಸಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರದಿಂದ ಇರಬೇಕು ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯೆಲ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಚೀನಾದಲ್ಲಿ ಕಂಡು ಬಂದಿರುವ ಎಚ್​ಎಂಪಿವಿ ವೈರಸ್ ಸಾಮಾನ್ಯವಾಗಿ ಶೀತವನ್ನು ಉಂಟುಮಾಡುವ ವೈರಸ್. ತುಂಬಾ ವಯಸ್ಸಾದ ಹಾಗೂ ಚಿಕ್ಕ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಹೊಸ ವೈರಸ್ ಬಗ್ಗೆ ಆತಂಕಕ್ಕೀಡಾಗುವ ಅಗತ್ಯ ಇಲ್ಲ ಎಂದಿದ್ದಾರೆ.

ವೈರಸ್ ಹೆಚ್ಚಾದರೆ ನಮ್ಮಲ್ಲಿ ಆರೋಗ್ಯ ವ್ಯವಸ್ಥೆ ಅಗತ್ಯ ಆಸ್ಪತ್ರೆಗಳು, ಹಾಸಿಗೆಗಳೊಂದಿಗೆ ಚಿಕಿತ್ಸೆ ಕೊಡಲು ಸಿದ್ದವಾಗಿದೆ. ಜೊತೆಗೆ ದೇಶದಲ್ಲಿ ಉಸಿರಾಟದ ಸಮಸ್ಯೆಯ ರೋಗಿಗಳ ಅಂಕಿಅಂಶವನ್ನು ವಿಶ್ಲೇಷಿಸಿದ್ದೇವೆ. 2024ರ ಮಾಹಿತಿಯಲ್ಲಿ ಅಂತಹ ಗಣನೀಯ ಹೆಚ್ಚಳವಿಲ್ಲ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಹೆಚ್ಚಾಗಬಹುದು. ಹಾಗಾದಲ್ಲಿ ಚಿಕಿತ್ಸೆ ಕೊಡಲು ನಮ್ಮ ವ್ಯವಸ್ಥೆ ಸಿದ್ಧವಾಗಿದೆ. ಕೆಮ್ಮು, ನೆಗಡಿ ಇರೋರು ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ತಡೆಯಬೇಕು. ಶೀತ ಮತ್ತು ಜ್ವರಕ್ಕೆ ಶಿಫಾರಸು ಮಾಡಲಾದ ಸಾಮಾನ್ಯ ಔಷಧಿ ತೆಗೆದುಕೊಳ್ಳಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಾಬರಿಪಡಬೇಕಾಗಿಲ್ಲ ಎಂದಿದ್ದಾರೆ. 

Tags:    

Similar News