Public Exam Issue | 5,8,9,11ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು: ಮಧು ಬಂಗಾರಪ್ಪ
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಬದ್ಧವಾಗಿ ರಾಜ್ಯ ಮಂಡಳಿಗೆ ಸಂಯೋಜಿತವಾಗಿರುವ ಶಾಲೆಗಳಲ್ಲಿ 5, 8, 9 ಮತ್ತು 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ.;
ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧವಾಗಿ ರಾಜ್ಯ ಮಂಡಳಿಗೆ ಸಂಯೋಜಿತವಾಗಿರುವ ಶಾಲೆಗಳಲ್ಲಿ 5, 8, 9 ಮತ್ತು 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಶಿಕ್ಷಣ ಇಲಾಖೆ ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಿಸಿದ್ದ ಬೋರ್ಡ್ (ಪಬ್ಲಿಕ್) ಪರೀಕ್ಷೆಗಳು ಶಿಕ್ಷಣ ಹಕ್ಕು ಕಾಯ್ದೆಗೆ ವಿರುದ್ಧವಾಗಿವೆ ಎಂದು ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಹೇಳಿತ್ತು.
ಅಲ್ಲದೆ, ಈ ನಡುವೆ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಬೋರ್ಡ್ ಪರೀಕ್ಷೆ ನಡೆಸಲು ಇಲಾಖೆ ಕಳೆದ ಸೆಪ್ಟೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿತ್ತು. ಇಲಾಖೆಯ ಈ ಕ್ರಮವನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಕೋರ್ಟ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿತ್ತು.
ಆ ಹಿನ್ನೆಲೆಯಲ್ಲಿ ಇದೀಗ ಶಾಲಾ ಶಿಕ್ಷಣ ಸಚಿವರು ಅಧಿಕೃತವಾಗಿ ಬೋರ್ಡ್ ಪರೀಕ್ಷೆಯ ಕುರಿತು ಘೋಷಣೆ ಮಾಡಿದ್ದು, ಈ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸದಂತೆ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದೆ. ನಾವು ಈ ಪರೀಕ್ಷೆಗಳ ಫಲಿತಾಂಶಗಳನ್ನು ತಡೆಹಿಡಿದಿದ್ದೇವೆ. ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದ ಹಿಂದಿನ ಆದೇಶವನ್ನು ಹಿಂಪಡೆದಿದ್ದೇವೆ ಮತ್ತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
“ಕಳೆದ ಬಾರಿ ನಾವು SSLC ಮತ್ತು II PUC ಪರೀಕ್ಷೆಗಳಿಗೆ ವೆಬ್ ಸ್ಟ್ರೀಮಿಂಗ್ ಸೇರಿದಂತೆ ವಿವಿಧ ಪರೀಕ್ಷಾ ಸುಧಾರಣೆಗಳನ್ನು ತಂದಿದ್ದೇವೆ. ಬೋರ್ಡ್ ಪರೀಕ್ಷೆಗಳ ಭಯ ಮತ್ತು ಆತಂಕವನ್ನು ಹೋಗಲಾಡಿಸಲು 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರಸ್ತುತ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಮಧ್ಯಂತರ ಆದೇಶಕ್ಕೆ ನಾವು ಬದ್ದರಾಗಿರುತ್ತೇವೆ" ಎಂದು ಮಧು ಬಂಗಾರಪ್ಪ ವಿವರಿಸಿದ್ದಾರೆ.
ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸೇರಿದಂತೆ ಹಲವು ಖಾಸಗಿ ಶಾಲಾ ಸಂಘಟನೆಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿವೆ. ಮಾರ್ಚ್ 6, 2024 ರಂದು, ಏಕ ನ್ಯಾಯಾಧೀಶರು ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದರು. ಆದರೂ ಹೈಕೋರ್ಟ್‌ನ ವಿಭಾಗೀಯ ಪೀಠವು ಮಾರ್ಚ್ 22, 2024 ರಂದು ಪರೀಕ್ಷೆಗಳನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿತ್ತು. ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪರೀಕ್ಷೆಗಳನ್ನು ನಡೆಸಿತ್ತು ಮತ್ತು ಏಪ್ರಿಲ್ 8, 2024 ರಂದು ಫಲಿತಾಂಶ ಪ್ರಕಟಿಸಲು ಶಾಲೆಗಳಿಗೆ ಸೂಚನೆ ನೀಡಿತ್ತು. ಆದರೆ ಖಾಸಗಿ ಶಾಲಾ ಸಂಘಟನೆಗಳು ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಏಪ್ರಿಲ್ 8, 2024 ರಂದು ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ಪೀಠವು ಹೈಕೋರ್ಟಿನ ಮಾರ್ಚ್ 22 ರ ತೀರ್ಪನ್ನು ತಡೆಹಿಡಿದು, ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿತ್ತು.