Loksabha Election 2024 | ಮೋದಿ ಭೇಟಿ ಹೊತ್ತಲ್ಲಿ ಬಿಜೆಪಿಗೆ ಏಳು ಕ್ಷೇತ್ರದಲ್ಲಿ ಬಂಡಾಯ ಬಿಕ್ಕಟ್ಟು

Update: 2024-04-11 11:04 GMT

ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ ಹದಿನೈದು ದಿನಗಳು ಬಾಕಿ ಉಳಿದಿದ್ದು, ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರ ಬಂಡಾಯದ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ.

ಈ ಬಂಡಾಯ ಉಳಿದ ಇಪ್ಪತ್ತೆಂಟು ಸ್ಥಾನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಬಿಜೆಪಿ ನಾಯಕರೇನೂ ಅಲ್ಲಗೆಳೆಯುತ್ತಿಲ್ಲ. ಕಳೆದ ಬಾರಿ ಇಪ್ಪತ್ತಾರು ಸ್ಥಾನಗಳನ್ನು ಗೆದ್ದು, ಮೋದಿ ಅವರನ್ನು ಪ್ರಧಾನಿಯಾಗಸಲು ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಬಿಜೆಪಿ, ಈ ಬಾರಿ ಎಲ್ಲಾ ಇಪ್ಪತ್ತೆಂಟು ಸ್ಥಾನಗಳನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿರುವಾಗಲೇ ಬಂಡಾಯದ ಬಿಸಿ ಕೇವಲ ಕರ್ನಾಟಕದ ಬಿಜೆಪಿಗಷ್ಟೇ ಅಲ್ಲ. ಬಿಜೆಪಿ ಹೈಕಮಾಂಡ್ ಗೆ ಕೂಡ ತಾಗಿದ್ದು, ಈಗ ಸುಟ್ಟ ಗಾಯಕ್ಕೆ ಮುಲಾಮು ಹಚ್ಚಲು ಮೋದೀಜಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಪ್ರಚಾರದ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳುವುದು ಕರ್ನಾಟಕದ ಬಿಜೆಪಿಗೆ; ಅದರಲ್ಲೂ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸವಾಲಾಗಿದೆ.

ತನ್ನ ಏಕೈಕ ದಕ್ಷಿಣ ಭದ್ರಕೋಟೆಯಾದ ಕರ್ನಾಟಕದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ತನ್ನ ಕನಸನ್ನು ಇಂತಹ ಬಂಡಾಯಗಳು ಹಳಿತಪ್ಪಿಸುತ್ತವೆ ಎಂದು ತಿಳಿದ ಬಿಜೆಪಿ ನಿಜಕ್ಕೂ ಆತಂಕದಲ್ಲಿದೆ. ಕರ್ನಾಟಕದ ಕನಿಷ್ಠ ಏಳು ಕ್ಷೇತ್ರಗಳಲ್ಲಿ ಪಕ್ಷದಲ್ಲಿ ವ್ಯಾಪಕ ಅತೃಪ್ತಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಬಂಡಾಯವನ್ನು ನಿಭಾಯಿಸುವುದು ರಾಜ್ಯ ನಾಯಕತ್ವಕ್ಕೆ ಕಷ್ಟವಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಆಂತರಿಕ ಕಚ್ಚಾಟ ತೀವ್ರ ಮುಜುಗರವನ್ನುಂಟು ಮಾಡಿದೆ.

ಬಿಜೆಪಿ ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರುಗಳು ಬಂಡಾಯವನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳು ಫಲಕಾರಿಯಾದಂತೆ ಕಾಣುತ್ತಿಲ್ಲ.

ಕುಟುಂಬ ರಾಜಕಾರಣ

ಶಿವಮೊಗ್ಗದಲ್ಲಿ, ಯಡಿಯೂರಪ್ಪ ಮತ್ತು ಅವರ ಪುತ್ರರು ನಡೆಸುತ್ತಿದ್ದಾರೆನ್ನಲಾಗಿರುವ ಕುಟುಂಬ ರಾಜಕಾರಣ ಖಂಡಿಸಲು ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಸ್ವತಂತ್ರವಾಗಿ ಹೋರಾಡುತ್ತಿರುವುದರಿಂದ ಬಿಜೆಪಿ ನಗೆಪಾಟಲಿಗೀಡಾಗಿದೆ. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ, ಯಡಿಯೂರಪ್ಪನವರ ಮತ್ತೋರ್ವ ಪುತ್ರ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಈಶ್ವರಪ್ಪ ಗರ್ಜಿಸಿದ್ದಾರೆ.

ಮೋದಿ ಫೋಟೋ ರಾಜಕಾರಣ

ಮೋದಿ ಫೋಟೋ ಹಿಡಿದು ಚುನವಾಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಇಳಿದಿರುವ ಈಶ್ವರಪ್ಪ. ಮೋದಿ ಅವರ ಛತ್ರಛಾಯೆಯಡಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿರುವುದು ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಈಶ್ವರಪ್ಪ ಮೋದಿ ಫೋಟೋ ಬಳಸದಂತೆ ಎಲ್ಲ ಪ್ರಯತ್ನ ಯಡಿಯೂರಪ್ಪ ಮಾಡುತ್ತಿದ್ದಾರೆ. ಆದರೆ ಈಶ್ವರಪ್ಪ ತಾವು ಮೋದಿ ಫೋಟೋ ಬಳಸಿಯೇ ತೀರುವುದಾಗಿ ಹಠ ಹಿಡಿದಿದ್ದು, ಧೈರ್ಯವಿದ್ದರೆ, ಮೋದಿ ಫೋಟೋ ಬಳಸದೆ, ಕೇವಲ ಯಡಿಯೂರಪ್ಪನವರ ಫೋಟೋ ಬಳಸಿ ಚುನಾವಣೆಯಲ್ಲಿ ಗೆದ್ದು ಬರುವಂತೆ ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಸವಾಲೊಡ್ಡಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಕೂಡ ಕಣದಲ್ಲಿದ್ದಾರೆ. ಇವರು ಬಿ. ವೈ. ರಾಘವೇಂದ್ರ ಅವರನ್ನು ಮಣಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.

ಗೃಹಸಚಿವ ಮತ್ತು ಬಿಜೆಪಿ ಮುಖಂಡ ಅಮಿತ್ ಶಾ ಅವರನ್ನು ಭೇಟಿಮಾಡಲು ಈಶ್ವರಪ್ಪ ಪ್ರಯತ್ನಿಸಿ, ದೆಹಲಿಗೆ ತೆರಳಿದರೂ, ಅವರನ್ನು ಭೇಟಿ ಮಾಡಲು ಶಾ ನಿರಾಕರಿಸಿದ ಕಾರಣ ಈಶ್ವರಪ್ಪ ಮುನಿದಿದ್ದಾರೆ. ಭೇಟಿ ಮಾಡದಿರುವುದೇ ಬಿಜೆಪಿ ತಮಗೆ ತೋರಿರುವ ಹಸಿರು ನಿಶಾನೆ ಎಂದು ಹೇಳಿಕೊಂಡಿರುವ ಈಶ್ವರಪ್ಪ ತಾವು ಚುನಾವಣಾ ಕಣದಲ್ಲಿ ಸೆಣೆಸುವುದು ಖಂಡಿತ ಎಂದು ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಜಯೇಂದ್ರ ಅವರು ಈಶ್ವರಪ್ಪನವರಿಗೆ ಸ್ಪರ್ಧೆಯ ಬಗೆಗಿನ ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಕೋರಿದಾಗ, ಈಶ್ವರಪ್ಪ, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿದರಲ್ಲದೆ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ರಾಘವೇಂದ್ರ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯ ಬೆನ್ನೆಲುಬು ಎಂದೇ ಹೇಳಲಾಗುವ ವೀರಶೈವ ಲಿಂಗಾಯತ ಸಮುದಾಯದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. “ಜೋಶಿ ಅವರು ಇತರೆ ಹಿಂದುಳಿದ ಸಮುದಾಯಗಳೂ ಸೇರಿದಂತೆ ಎಲ್ಲ ಕನಿಷ್ಠ ಸಮುದಾಯಗಳಿಗೆ ಅಗೌರವ ತೋರುತ್ತಿದ್ದಾರೆ ಎಂದು ಲಿಂಗಾಯತ ಸಮುದಾಯದ ಮುಖಂಡರು ಆರೋಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವೀರಶೈವ-ಲಿಂಗಾಯತ ಸಮುದಾಯವನ್ನು ವಿರೋಧಿಸುವ ಮೂಲಕ ಬಿಜೆಪಿ ಚುನಾವಣೆಗೆ ಮುನ್ನವೇ ಸೋಲನ್ನು ಒಪ್ಪಿಕೊಳ್ಳುವಂತಿದೆ" ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಈ ನಡುವೆ ಧಾರವಾಡದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ವೀರಶೈವ ಲಿಂಗಾಯತ ಪ್ರಮುಖರಾದ ಶಿರಹಟ್ಟಿ ಫಕ್ಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ ಮಾಡಿದ್ದಾರೆ. ಜೋಶಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದರು. ಆದರೆ ಸ್ವತಃ ಲಿಂಗಾಯತ ಕಟ್ಟಾ ಯಡಿಯೂರಪ್ಪ ಅವರು ಮನವಿಯನ್ನು ತಿರಸ್ಕರಿಸಿದರು.

ಹಾಸನದಲ್ಲಿ ಮುಸುಕಿನ ಗುದ್ದಾಟ

ಬಿಜೆಪಿ ಮಿತ್ರಪಕ್ಷ ಗಳಿಗೆ ಜನತಾ ದಳದ (ಜಾತ್ಯತೀತ) ಕೋಟೆ ಎಂದೇ ಹೇಳಲಾಗುವ ಹಾಸನ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕ್ಷೇತ್ರದ ಟಿಕೆಟ್ ನೀಡಿದ ನಂತರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಪ್ರೀತಂ ಜೆ ಗೌಡ ಮುನಿದಿದ್ದಾರೆ. ಪ್ರೀತಂ ಗೌಡರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕರು ನಡೆಸಿದ ಯತ್ನ ವಿಫಲವಾಗಿದೆ. ಅವರು ಪ್ರಜ್ವಲ್ ರೇವಣ್ಣ ಅವರನ್ನು ಭೇಟಿಯಾಗಲೂ ನಿರಾಕರಿಸಿದ್ದಾರೆ.

ತುಮಕೂರು ಗೊಂದಲ

ತುಮಕೂರಿನಲ್ಲಿ ಕಾಂಗ್ರೆಸ್ನ ಮುದ್ದುಹನುಮೇಗೌಡ ವಿರುದ್ಧ ಮಾಜಿ ಸಚಿವ, ಲಿಂಗಾಯತ ಮುಖಂಡ ವಿ. ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಸೋಮಣ್ಣ ಅವರನ್ನು ಕಣಕ್ಕಿಳಿಸಿದ್ದಕ್ಕೆ ಮಾಜಿ ಸಚಿವ, ಜೆ.ಸಿ. ಮಾಧುಸ್ವಾಮಿ ಅಸಮಾಧಾನಗೊಂಡಿದ್ದಾರೆ.

ಇವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿಷ್ಠಾವಂತರಾಗಿದ್ದು, ಈಗ ಬಂಡಾಯವೆದ್ದಿರುವುದಕ್ಕೆ ಕಾರಣ, ಮಾಧುಸ್ವಾಮಿ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೊಂದಾಣಿಕೆಯ ರಾಜಕಾರಣದಲ್ಲಿ ಬಿಜೆಪಿಗೆ ಸೋಮಣ್ಣ ಅವರನ್ನು ಕಣಕ್ಕಿಳಿಸುವುದು ಅನಿರ್ವಾಯವಾಯಿತು ಎನ್ನುವುದು ಬಿಜೆಪಿ ಪಕ್ಷದ ಮುಖ್ಯಸ್ಥರ ಹೇಳಿಕೆ.

ಇಷ್ಟೇ ಅಲ್ಲ, ಮಾಧುಸ್ವಾಮಿ ಅವರು ಸೋಮಣ್ಣ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಲ್ಲದೆ, ಕೆಲವು ಸಮಯದ ಹಿಂದೆ ಬಿಜೆಪಿಯಿಂದ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಮುದ್ದುಹನುಮೇಗೌಡರನ್ನು ಇತ್ತೀಚೆಗೆ ಭೇಟಿಯಾಗಿರುವುದು ಕುತೂಹಲ ಹುಟ್ಟಿಸಿದೆ.

ಬೆಂಗಳೂರು ಉತ್ತರ

ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಸಮಸ್ಯೆ ಇದ್ದು, ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಕೆಲಸ ಮಾಡಲು ನಿರಾಕರಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರನ್ನು ಬೆಂಬಲಿಸಿದ್ದಾರೆ.

ಉತ್ತರ ಕನ್ನಡ, ಹೆಗ್ಡೆ ಅಡ್ಡಗಾಲು

ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪಕ್ಷದ ಅಧಿಕೃತ ಅಭ್ಯರ್ಥಿ, ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಚಾರ ಮಾಡುವ ಮನಸ್ಸಿದ್ದಂತೆ ಇಲ್ಲ. ಕಾಗೇರಿ ಅವರು ಹೆಗ್ಗಡೆಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಲು ಪ್ರಯತ್ನಿಸಿದಾಗ, ಹೆಗ್ಡೆ ಅವರು ಕಾಗೇರಿ ಅವರನ್ನು ಗಂಟೆಗಳ ಕಾಲ ಕಾಯುವಂತೆ ಮಾಡಿದರು ಮತ್ತು ನಂತರ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ಹಾಗೆಯೇ ಉತ್ತರ ಕನ್ನಡದಲ್ಲಿ ರಾಜ್ಯಸಭೆಯ ಕದನದ ವೇಳೆ ಗೈರು ಹಾಜರಾಗಿದ್ದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಗೆ ನೆರವಾಗಲಿದ್ದಾರೆ ಎನ್ನಲಾಗುತ್ತಿದೆ.

ಕೋಪಗೊಂಡ ಶಾಸಕ

ಪಕ್ಷದ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ವಿರೋಧದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಸಮಸ್ಯೆ ಎದುರಿಸುತ್ತಿದ್ದಾರೆ. ಏಕೆಂದರೆ ಈ ಕ್ಷೇತ್ರದಲ್ಲಿ ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕಾರಣದಿಂದಾಗಿ ಡಾ. ಸುಧಾಕರ್ ಗೆಲುವಿನ ಬಗ್ಗೆ ಕ್ಷೇತ್ರದಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. "ಭಾನುವಾರ ಸುಧಾಕರ್, ವಿಶ್ವನಾಥ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ಅವರನ್ನು ಮನೆಯೊಳಗೆ ಬಿಡಲಿಲ್ಲ" ಎಂದು ಪಕ್ಷದ ಮೂಲವು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದೆ.

ಇನ್ನು ಕೆಲವು ಕ್ಷೇತ್ರಗಳಲ್ಲಿ ಭಿನ್ನಮತ ಗೋಚರವಾಗಿದ್ದರೂ, ಅದು ಅಷ್ಟೇನೂ ಪ್ರಭಾವ ಬೀರುವಂತೆ ಕಂಡು ಬರುತ್ತಿಲ್ಲ. ಒಟ್ಟಾರೆಯಾಗಿ ಈ ಏಳು ಕ್ಷೇತ್ರಗಳ ಬಂಡಾಯ ಬಿಜೆಪಿಯ ಇಪ್ಪತ್ತೆಂಟು ಸ್ಥಾನ ಗೆಲ್ಲುವ ಕನಸಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನುವುದನ್ನು ಬಿಜೆಪಿ ನಾಯಕತ್ಬವೇ ಒಪ್ಪಿಕೊಳ್ಳುತ್ತದೆ.

ಹಾಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಬೇಕಿದ್ದ ಮೋದಿ ಈಗ ತಮ್ಮ ತಂತ್ರವನ್ನು ಬದಲಿಸಿ ಮೈಸೂರಿನಲ್ಲಿ ಸಭೆಯನ್ನು ನಡೆಸಲಿದ್ದಾರೆ. ಎಂದು ಬಿಜೆಪಿಯ ಅಧಿಕೃತ ಮೂಲಗಳು ತಿಳಿಸಿವೆ.

Tags:    

Similar News