Bangalore | ಎಸ್.ಟಿ. ಪಟ್ಟಿಗೆ ಕಾಡುಗೊಲ್ಲ ಸಮುದಾಯ; ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲು ಒತ್ತಾಯ
ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ತಿರಸ್ಕರಿಸಿದೆ. ಹಾಗಾಗಿ ಮತ್ತೊಮ್ಮೆ ವಿಸ್ತೃತ ವರದಿಯೊಂದಿಗೆ ಕಳುಹಿಸಬೇಕು ಎಂದು ಕಾಡುಗೊಲ್ಲ ಸಮುದಾಯ ಒತ್ತಾಯಿಸಿದೆ.;
ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಸೇರಿಸುವ ರಾಜ್ಯದ ಪ್ರಸ್ತಾವನೆಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಹೆಚ್ಚು ವಿವರಗಳೊಂದಿಗೆ ಸಲ್ಲಿಸುವಂತೆ ಸಮುದಾಯದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
2014ರಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪದೇ ಪದೇ ತಿರಸ್ಕರಿಸಲಾಗುತ್ತಿದೆ. ಕಾಡುಗೊಲ್ಲ ಸಮುದಾಯ ತೀರಾ ಹಿಂದುಳಿದಿರುವುದರಿಂದ ನಿರ್ಲಕ್ಷ್ಯ ವಹಿಸಬಾರದು. ಮೈಸೂರಿನ ಕುಲಶಾಸ್ತ್ರೀಯ ಅಧ್ಯಯನ ಕೇಂದ್ರದಿಂದ ಸಮಗ್ರ ವರದಿ ತರಿಸಿಕೊಂಡು ಕೇಂದ್ರ ಸರ್ಕಾರದ ತಕರಾರುಗಳಿಗೆ ದಾಖಲೆಗಳ ಸಮೇತ ಪ್ರಸ್ತಾವ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಡುಗೊಲ್ಲರ ಹೋರಾಟವೇನು?
ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಪ್ರವರ್ಗ 1ರಲ್ಲಿ ರಾಜಕೀಯ ಮೀಸಲಾತಿಗಾಗಿ 196 ಜಾತಿಗಳ ನಡುವೆ ಹೋರಾಟ ನಡೆಸಬೇಕಾಗಿದೆ. ಹಾಗಾಗಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬುದು ಪ್ರಬಲ ಒತ್ತಾಯವಾಗಿದೆ.
2011 ರಿಂದ 2013ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಯಿತು. 2014ರಲ್ಲಿ ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ವರ್ಗೀಕರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಿತ್ತು. ಆದರೆ, ಅಂದಿನಿಂದ ಕೇಂದ್ರ ಸರ್ಕಾರದ ಒಂದಿಲ್ಲೊಂದು ವಿವರಣೆ ಕೇಳಿ ವಾಪಸ್ ಕಳುಹಿಸುತ್ತಿದೆ.
ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ದೇವೇಗೌಡರು
ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ವಿಚಾರವಾಗಿ 2023 ಡಿಸೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಅಂದಿನ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಪ್ರತ್ಯುತ್ತರ ಬರೆದು, ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಮನವಿಯನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಮತ್ತೊಮ್ಮೆ ಕೇಂದ್ರದ ವರದಿಯನ್ನು ವಾಪಸ್ ಕಳುಹಿಸಿರುವುದಕ್ಕೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡುಗೊಲ್ಲರು ಎಲ್ಲಿದ್ದಾರೆ?
ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆಯಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಜನಾಂಗದ ಕಾಡುಗೊಲ್ಲರು ಊರಿನಿಂದ ಪ್ರತ್ಯೇಕವಾಗಿ ಹಟ್ಟಿಗಳಲ್ಲಿ ವಾಸಿಸುತ್ತಾರೆ. ಕುರಿ ಸಾಕಾಣಿಕೆಯೇ ಪ್ರಮುಖ ಕಸುಬಾಗಿದ್ದು, ಇಂದಿಗೂ ಗೊಲ್ಲರಹಟ್ಟಿಗಳು ಹಿಂದುಳಿದಿವೆ.
ಕಾಡುಗೊಲ್ಲ ಸಮುದಾಯದ ಯತ್ತಪ್ಪ, ಜುಂಜಪ್ಪ ಮಹಾಕಾವ್ಯಗಳು ಹಾಗೂ ಜಂಪಣ್ಣ, ಕಾಟಪ್ಪ, ಕ್ಯಾತೇಲಿಂಗ, ಕರಡಿಬುಳ್ಳಪ್ಪ ಸ್ವಾಮಿಯ ಪರಂಪರೆಯೊಂದಿಗೆ ವಿಶಿಷ್ಟ ಸಾಂಸ್ಕೃತಿಕತೆ ಹೊಂದಿದೆ.