Internal Reservation | ಕಗ್ಗಂಟಾದ ಒಳ ಮೀಸಲಾತಿ ವರದಿ ಜಾರಿ ; ಒಮ್ಮತಕ್ಕೆ ಬಾರದ ಎಡ-ಬಲ ನಾಯಕರ ಸಭೆ
ಮೀಸಲಾತಿ ಪ್ರಮಾಣದ ಕುರಿತಂತೆ ಎಡ ಹಾಗೂ ಬಲಗೈ ಸಮುದಾಯಗಳಲ್ಲಿ ಏರ್ಪಟ್ಟಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಸಂಪುಟದ ತೀರ್ಮಾನ ಕುತೂಹಲ ಮೂಡಿಸಿದೆ.;
ರಾಜ್ಯದಲ್ಲಿ ಒಳ ಮೀಸಲಾತಿ ವರದಿ ಜಾರಿಗೆ ಮತ್ತೆ ವಿಘ್ನ ಎದುರಾಗಿದೆ. ಮೀಸಲಾತಿ ಹಂಚಿಕೆ ಮಾಡಿ ನ್ಯಾ. ನಾಗಮೋಹನ್ ದಾಸ್ ನೀಡಿರುವ ವರದಿಗೆ ಎಡ-ಬಲ ಸಮುದಾಯಗಳೇ ತಗಾದೆ ತೆಗೆದಿವೆ.
ಇಷ್ಟು ದಿನ ಒಳ ಮೀಸಲಾತಿ ಕುರಿತ ಸಮೀಕ್ಷೆ ತ್ವರಿತಗೊಳಿಸಿ, ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದ ಸಮುದಾಯಗಳೇ ಈಗ ಮೀಸಲಾತಿ ಹಂಚಿಕೆ ಪ್ರಮಾಣಕ್ಕೆ ಅಸಮಾಧಾನ ವ್ಯಕ್ತಪಡಿಸಿ, ವರದಿ ಜಾರಿಗೆ ಅಡ್ಡಗಾಲು ಹಾಕುತ್ತಿವೆ.
ನ್ಯಾ.ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ ಒಳ ಮೀಸಲಾತಿ ವರದಿ ಈಗಾಗಲೇ ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ. ಆದರೆ, ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿಗೆ ಈಗ ಅತೃಪ್ತಿ ವ್ಯಕ್ತವಾಗಿದ್ದು, ವರದಿ ಜಾರಿ ಅನಿಶ್ಚಿತವಾಗಿದೆ.
ವಿಫಲವಾದ ಸಭೆ
ಒಳ ಮೀಸಲಾತಿ ವರದಿ ಜಾರಿಗೆ ಸಂಬಂಧಿಸಿದಂತೆ ಬುಧವಾರ ರಾತ್ರಿ ನಡೆದ ಪರಿಶಿಷ್ಟ ಜಾತಿಯ ಎಡ, ಬಲ ಸಮುದಾಯದ ನಾಯಕರ ಸಭೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರದೇ ಅಪೂರ್ಣಗೊಂಡಿದೆ.
ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ನಡೆದ ಸಭೆಗೆ ಬಹುತೇಕ ಶಾಸಕರು, ಸಚಿವರು ಗೈರು ಹಾಜರಾಗಿದ್ದು, ಒಳ ಮೀಸಲಾತಿ ಹಂಚಿಕೆ ಗೊಂದಲ ಮುಂದುವರಿದಿದೆ.
ನಾಗಮೋಹನ್ ದಾಸ್ ವರದಿಯಲ್ಲಿ ಹಂಚಿಕೆ ಮಾಡಿರುವ ಕುರಿತಂತೆ ಎರಡು ಗಂಟೆಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳುವಲ್ಲಿ ನಾಯಕರು ವಿಫಲರಾದರು.
ಸಭೆಯಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಹೆಚ್ ಮುನಿಯಪ್ಪ, ಸುಧಾಮ್ ದಾಸ್, ಪ್ರಸಾದ್ ಅಬ್ಬಯ್ಯ ಸೇರಿದಂತೆ ಕೆಲವೇ ಸಚಿವರು, ಶಾಸಕರು ಮಾತ್ರ ಭಾಗವಹಿಸಿದ್ದರು.
ಸಚಿವ ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲ ಸಚಿವರು, ಶಾಸಕರು ಗೈರಾಗಿದ್ದರು.
ಆ.16 ರಂದು ವಿಶೇಷ ಕ್ಯಾಬಿನೆಟ್
ಒಳ ಮೀಸಲಾತಿ ವರದಿ ಜಾರಿ ಕುರಿತಂತೆ ಚರ್ಚಿಸಲು ಆ.16ರಂದು ವಿಶೇಷ ಸಂಪುಟ ಸಭೆ ನಡೆಯಲಿದೆ.
ಮೀಸಲಾತಿ ಪ್ರಮಾಣದ ಕುರಿತಂತೆ ಎಡ ಹಾಗೂ ಬಲಗೈ ಸಮುದಾಯಗಳಲ್ಲಿ ಏರ್ಪಟ್ಟಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಸಂಪುಟದ ತೀರ್ಮಾನ ಕುತೂಹಲ ಮೂಡಿಸಿದೆ.
ಕಳೆದ ಸಂಪುಟದಲ್ಲಿ ಮೀಸಲಾತಿ ಪ್ರಮಾಣಕ್ಕೆ ಬಲಗೈ ಸಮುದಾಯದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜನಸಂಖ್ಯೆಯಲ್ಲಿ ಮಾದಿಗ ಸಮುದಾಯದಷ್ಟೇ ಹೊಲೆಯರು ಇದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ವಿಶೇಷ ಸಂಪುಟ ಸಭೆಗೆ ವಿಷಯ ಮುಂದೂಡಿದ್ದರು.
ಇನ್ನು ಎಡಗೈ ಸಮುದಾಯಗಳು ಪ್ರಸ್ತುತ ನಾಗಮೋಹನ್ ದಾಸ್ ವರದಿಯಲ್ಲಿ ನೀಡಿರುವ ಮೀಸಲಾತಿಯನ್ನು ಒಪ್ಪಿಕೊಂಡಿದ್ದು, ತಕ್ಷಣವೇ ವರದಿ ಜಾರಿ ಮಾಡುವಂತೆ ಆಗ್ರಹಿಸುತ್ತಿವೆ.
ನಾಗಮೋಹನ್ ದಾಸ್ ವರದಿ ಜಾರಿಗೂ ಮುನ್ನ ಪರಿಶಿಷ್ಟ ಜಾತಿಯ ಎಡ-ಬಲದ ಸಚಿವರು, ಶಾಸಕರು ಸಭೆ ನಡೆಸಿ, ವರದಿಯನ್ನು ಒಪ್ಪಿಕೊಳ್ಳಲು ಒಮ್ಮತದ ತೀರ್ಮಾನ ಕೈಗೊಂಡಿದ್ದರು. ಈಗ ವರದಿ ಮಂಡನೆಯಾಗಿ ಮೀಸಲಾತಿ ಹಂಚಿಕೆ ಬಹಿರಂಗವಾಗುತ್ತಿದ್ದಂತೆ ಅಸಮಾಧಾನ ತಲೆದೋರಿದೆ.