ಮಳೆಯಲ್ಲೇ ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ಸ್ಪಂದಿಸದ ಸರ್ಕಾರ

ಆಶಾ ಕಾರ್ಯಕರ್ತರು ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆಶಾ ಕಾರ್ಯಕರ್ತೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದು ಕುಳಿತಿರುವುದು ನೋಡಿದರೆ ಕರುಳು ಹಿಂಡುವಂತಿದೆ.;

Update: 2025-08-13 11:46 GMT

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಳೆಯಲ್ಲೇ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. 

ಆಶಾ ಕಾರ್ಯಕರ್ತರು ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕನಿಷ್ಠ 7 ರಿಂದ 8 ಸಾವಿರ ವೇತನಕ್ಕೆ ದುಡಿಯುವ ಆಶಾ ಕಾರ್ಯಕರ್ತೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಆಗಮಿಸಿ ಪ್ರತಿಭಟನೆಗೆ ಕುಳಿತಿರುವುದು ನೋಡಿದರೆ ಕರುಳು ಹಿಂಡುವಂತಿದೆ. 

ಮಾಸಿಕ 10 ಸಾವಿರ ರೂ. ಗೌರವಧನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಹುಲ್‌ ಗಾಂಧಿ ಪ್ರತಿಭಟನೆಗೆ ಶೆಡ್‌ ನಿರ್ಮಾಣ

ಫ್ರೀಡಂ ಪಾರ್ಕ್‌ನಲ್ಲಿ ಒಂದೆಡೆ ಆಶಾ ಕಾರ್ಯಕರ್ತೆಯರು ಮಳೆಯಲ್ಲೇ ನೆನೆದು ಪ್ರತಿಭಟನೆಗೆ ಕುಳಿತಿದ್ದರೆ, ಇದರ ಪಕ್ಕದಲ್ಲೇ ರಾಹುಲ್‌ಗಾಂಧಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಸ್ಥಳದಲ್ಲಿ ಶೆಡ್‌ ನಿರ್ಮಿಸಲಾಗಿದೆ. ಸೀಟುಗಳ ಶೆಡ್‌ ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕು.  ಈಗಾಗಲೇ ಕನಿಷ್ಠ ವೇತನಕ್ಕಾಗಿ ದುಡಿಯುತ್ತಿರುವ ನಮಗೆ ಆ ಶಕ್ತಿ ಇಲ್ಲದ ಕಾರಣ ಮಳೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ. 

ರಾಹುಲ್‌ ಗಾಂಧಿ ಅವರು ಈಚೆಗೆ ಪ್ರತಿಭಟನೆ ನಡೆಸಿದ್ದ ಸ್ಥಳದಲ್ಲಿ ಬೃಹತ್‌ ಶೆಡ್ ನಿರ್ಮಿಸಲಾಗಿತ್ತು. ರಾಜಕಾರಣಿಗಳು ಲಕ್ಷಾಂತರ ರೂ. ವ್ಯಯಿಸಿ ಸುಸಜ್ಜಿತವಾಗಿ ಸೌಕರ್ಯ ರೂಪಿಸಿಕೊಳ್ಳುತ್ತಾರೆ. ಕಾರ್ಮಿಕರು, ದಲಿತರು, ಶ್ರೀಸಾಮಾನ್ಯ ಜನರು ಪ್ರತಿಭಟನೆ ನಡೆಸಬೇಕಾದರೆ ಮಳೆ-ಗಾಳಿ, ಚಳಿ ಲೆಕ್ಕಿಸುವಂತಿಲ್ಲ. ಪ್ರತಿಭಟನಾಕಾರರ ರಕ್ಷಣೆಗೆ ಸರ್ಕಾರವೇ ಶಾಶ್ವತವಾದ ಆಶ್ರಯ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರು ಸಾಕಷ್ಟು ಹಣ ವ್ಯಯಿಸಿ ಪೆಂಡಾಲ್‌ ಹಾಕಿಕೊಳ್ಳಲು ಶಕ್ತರಲ್ಲ. ಮಳೆಗಾಲದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳುವುದು ಅನಿವಾರ್ಯ, ನಾವು ಮಕ್ಕಳೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದ್ದರೂ ಶಕ್ತಿಸೌಧದಲ್ಲಿ ಕುಳಿತಿರುವವರು ನಮ್ಮ ಕಡೆ ನೋಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

Tags:    

Similar News