ʼಲೋಕಸಭೆಗೆ ಸ್ಪರ್ಧಿಸುವುದಿಲ್ಲʼ; ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ಸೂಚನೆ ನೀಡಿದ ಸಿದ್ದರಾಮಯ್ಯ

ನಾನು ಇಲ್ಲಿರೋದು ನಿಮಗೆ ಇಷ್ಟ ಇಲ್ವಾ? ನನ್ನನ್ನು ಇಲ್ಲಿಂದ ಕಳಿಸಬೇಕು ಅಂದುಕೊಂಡಿದ್ದೀರಾ?, ಈ ಹಿಂದೆ ಸಂಸತ್‌ಗೆ ಹೋಗಬೇಕು ಅನ್ನೋ ಒಲವು ಇತ್ತು. ಆದರೆ ಈಗ ಅದು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.;

Update: 2025-08-13 13:34 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ನಾನು ಒಂಬತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ, ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. 

ಬುಧವಾರ ಸದನದಲ್ಲಿ ಮಾತನಾಡುವ ವೇಳೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಕೇಂದ್ರಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ನಾನು ಇಲ್ಲಿರೋದು ನಿಮಗೆ ಇಷ್ಟ ಇಲ್ವಾ? ನನ್ನನ್ನು ಇಲ್ಲಿಂದ ಕಳಿಸಬೇಕು ಅಂದುಕೊಂಡಿದ್ದೀರಾ?, ಈ ಹಿಂದೆ ಸಂಸತ್‌ಗೆ ಹೋಗಬೇಕು ಅನ್ನೋ ಒಲವು ಇತ್ತು. ಆದರೆ ಈಗ ಅದು ಇಲ್ಲ ಎಂದರು.

ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ನನ್ನ ತಿರಸ್ಕರಿಸಿದ್ದಾರೆ. ನನಗೆ ಈಗ ಸಂಸತ್‌ಗೆ ಹೋಗುವ ಆಸೆ ಇಲ್ಲ. ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತದೆ. ಆಸೆ ತಪ್ಪೇನಿಲ್ಲ ಆದರೆ ದುರಾಸೆ ಇರಬಾರದು ಎಂದು ಹೇಳಿದರು.

ಸದಸ್ಯರಿಗೆ ನೀತಿ ಪಾಠ

ಸದನ ವೀಕ್ಷಿಸಲು ಗ್ಯಾಲರಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದಾರೆ. ಅವರು ನಮ್ಮ ನಡವಳಿಕೆಯನ್ನು ಗಮನಿಸುತ್ತಿರುತ್ತಾರೆ. ಟೀಕೆ ಮಾಡಿ ಆದರೆ ಪದಪ್ರಯೋಗ ವೇಳೆ ಎಚ್ಚರ ಇರಲಿ, ಸದಸ್ಯರ ಮಾತು  ಇನ್ನೊಬ್ಬರಿಗೆ ನೋವುಂಟು ಮಾಡದೇ ಇರಬೇಕು. ಚರ್ಚೆ ವೇಳೆ ವಿಷಯಾಂತರ ಮಾಡಬೇಡಿ ಎಂದು ಎರಡೂ ಕಡೆಯ ಸದಸ್ಯರಿಗೂ ನೀತಿ ಪಾಠ ಮಾಡಿದರು.

ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಆದಾಗ ಯಾರೂ ಸಹಿಸಲ್ಲ. ಯಾರ ಉತ್ತರವೂ ಬೇಡ, ಜಾರ್ಜ್ ಅವರ ಕೆಳಗೆ ನಾವು ಕೆಲಸ ಮಾಡಿದ್ದೇವೆ. ಅವರಿಗೆ ಆದ ಅವಮಾನ ನಾನು ಸಹಿಸಲ್ಲ, ಆ ರೀತಿ ಇದ್ದರೆ ನನ್ನಂತಹ ನಾಲಾಯಕ್ ಯಾರೂ ಇರಲ್ಲ. ನಾವು ತಪ್ಪು ಮಾಡಿದರೆ ಅಮಾನತು ಮಾಡಿ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಸರ್ಕಾರ ಸಂಯಮ ಕಾಯ್ದುಕೊಳ್ಳಲಿ

ಕರ್ನಾಟಕದ ವಿಧಾನಸಭೆಗೆ ತನ್ನದೇ ಆದ ಸ್ಥಾನಮಾನವಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಲು ಆಗುವುದೇ ಇಲ್ಲ. ಇಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಬೇಡ, ನಾವು ವಿರೋಧ ಪಕ್ಷದವರು, ಟೀಕೆ ಮಾಡಲು ನಮ್ಮನ್ನು ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಹೇಳಲೇಬೇಕು. ಹೇಳುವ ರೀತಿ ನೀತಿ, ಭಾಷೆಯ ತಿಳಿದು ಮಾಡಬೇಕು. ಸರ್ಕಾರಕ್ಕೂ ಸಂಯಮ ಇರಬೇಕು. ಡಿಕೆಶಿ ಸಂಯಮ ಕಾಯ್ದುಕೊಳ್ಳಬೇಕು. ಭಾಷಾ ಬಳಕೆ ನಿಯಂತ್ರಣದಲ್ಲಿರಲಿ ಎಂದು ಅಶೋಕ್ ತಿಳಿಸಿದರು.

ವ್ಯಕ್ತಿಯ ವ್ಯಕ್ತಿತ್ವ ಭಿನ್ನವಾಗಿರುತ್ತದೆ. ಒಬ್ಬೊಬ್ಬರಿಗೂ ಒಂದೊಂದು ವ್ಯಕ್ತಿತ್ವ ಇರುತ್ತದೆ. ನಾನು ಏಳು ಬಾರಿ ಗೆದ್ದಿದ್ದೇನೆ. ವೈಯಕ್ತಿಕವಾಗಿ ಎಂದೂ, ಯಾರನ್ನೂ ಟೀಕೆ ಮಾಡಿಲ್ಲ, ಸರ್ಕಾರದ ಕಿವಿ ಹಿಂಡಲು ಟೀಕೆ ಮಾಡಬೇಕಾಗುತ್ತದೆ. ಬುಧವಾರ ಆಗಿರುವುದನ್ನು ಸಚಿವ ಕೆ.ಜೆ. ಜಾರ್ಜ್, ಶಾಸಕ ಅಶ್ವತ್ಥನಾರಾಯಣ ಇಬ್ಬರು ಮರೆತುಬಿಡಿ, ನಮ್ಮೆಲ್ಲರ ಬೇಡಿಕೆ ಒಂದೇ. ಇಂತಹ ವರ್ತನೆಗಳಿಗೆ ಕಡಿವಾಣ ಹಾಕಿದರೆ ಸದನ ಸುಸೂತ್ರವಾಗಿ ನಡೆಯಲಿದೆ ಎಂದು ಹೇಳಿದರು.

Tags:    

Similar News