ಭ್ರಷ್ಟಾಚಾರದ ಪಿತಾಮಹ ಹೇಳಿಕೆ ; ಏಕವಚನದಲ್ಲೇ ಬೈದಾಡಿಕೊಂಡ ಅಶ್ವತ್ಥ ನಾರಾಯಣ - ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನಡುವೆ ವಾಕ್ಸಮರಕ್ಕೆ ಕಾರಣವಾಗಿ ಇಬ್ಬರು ಏಕವಚನದಲ್ಲಿಯೇ ಬೈದಾಡಿಕೊಂಡ ಪ್ರಸಂಗ ನಡೆಯಿತು.;
ಭ್ರಷ್ಟಾಚಾರದ ಪಿತಾಮಹ ಎಂಬ ಹೇಳಿಕೆಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಮುಂದುವರಿದು ಇಬ್ಬರು ಏಕವಚನದಲ್ಲಿಯೇ ಬೈದಾಡಿಕೊಂಡ ಪ್ರಸಂಗಕ್ಕೂ ಸದನ ಸಾಕ್ಷಿಯಾಯಿತು.
ರಸಗೊಬ್ಬರ ವಿತರಣೆಯಲ್ಲಿನ ಸಮಸ್ಯೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್-ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು. ಈ ವೇಳೆ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸ್ಮಾರ್ಟ್ ಮೀಟರ್ ಅಕ್ರಮದ ಕುರಿತು ಅಶ್ವತ್ಥನಾರಾಯಣ ಕಿಡಿಕಾರಿದರು. ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರ ಪಿತಾಮಹ ನೀನು ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಶ್ವತ್ಥ ನಾರಾಯಣ, ಯಾರನ್ನ ಕೇಳಿದರು ಗೊತ್ತಾಗುತ್ತದೆ ಯಾರಪ್ಪ ಭ್ರಷ್ಟಾಚಾರದ ಪಿತಾಮಹ ಎಂದು ತಿರುಗೇಟು ನೀಡಿದರು. ಆಗ ಇಬ್ಬರ ನಡುವೆ ವಾಕ್ಸಮರ ನಡೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ತೀವ್ರಗೊಂಡಾಗ ಸಭಾಧ್ಯಕ್ಷರು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು. ಬಳಿಕ ಸದನ ಆರಂಭಗೊಂಡಾಗ ಸುಗಮವಾಗಿ ನಡೆಯಿತು.
ರಸಗೊಬ್ಬರ ಸಮಸ್ಯೆ ಕುರಿತು ಬಿಜೆಪಿ ಸದಸ್ಯ ಅರವಿಂದ್ ಬೆಲ್ಲದ್ ಮಾತನಾಡಿದರು. ಗೊಬ್ಬರ ಪೂರೈಕೆಯಲ್ಲಿ ಆಗಿರುವ ತಪ್ಪುಗಳನ್ನು ಸದನದ ಮುಂದಿಡುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ನೀವು ಸುಳ್ಳು ಮಾಹಿತಿ ನೀಡಿದರೆ ಎದ್ದು ನಿಲ್ಲಬೇಕಾಗುತ್ತದೆ ಎಂದು ಹೇಳಿದರು. ಆಗ ಅಶ್ವತ್ಥ ನಾರಾಯಣ ಮಧ್ಯಪ್ರವೇಶಿಸಿ ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆ ಇರುವುದಕ್ಕೆ ಮಾತನಾಡುತ್ತಿದ್ದೇವೆ. ಸಚಿವರು ಉತ್ತರ ನೀಡಬೇಕು ಎಂದರು. ಇದಕ್ಕೆ ನರೇಂದ್ರ ಸ್ವಾಮಿ ಅವರು ಅಶ್ವತ್ಥನಾರಾಯಣ ಬರೀ ಸುಳ್ಳ. ಅಶ್ವಥ್ ನಾರಾಯಣ್ ಬೆಂಗಳೂರಿನವರು, ರೈತರ ಬಗ್ಗೆ ನಿಮಗೇನು ಗೊತ್ತು ಎಂದು ಟೀಕಿಸಿದರು.
ಈ ನಡುವೆ, ಸಚಿವ ಕೆ.ಜೆ.ಜಾರ್ಜ್ ಸರ್ಕಾರದ ಪರವಾಗಿ ಮಾತನಾಡಿ ಕೃಷಿ ಸಚಿವ ಚಲುವರಾಯಸ್ವಾಮಿ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಮಾತನಾಡಿದರು. ಈ ವೇಳೆ ಅಶ್ವಥ್ ನಾರಾಯಣ ಮತ್ತು ಜಾರ್ಜ್ ನಡುವೆ ಗಲಾಟೆ ನಡೆದು ಸ್ಮಾರ್ಟ್ ಮೀಟರ್ ವಿಷಯ ಪ್ರಸ್ತಾಪವಾಯಿತು. ಅಲ್ಲದೇ, ಜಾರ್ಜ್ ಅವರನ್ನು ಹಿಟ್ ಆ್ಯಂಡ್ ರನ್ ಎಂದು ಟೀಕಿಸಿದರು.
ಮಾತಿನ ಸಮರದಲ್ಲಿ ಭ್ರಷ್ಟಾಚಾರದ ಸರ್ಕಾರ, ಅಸಹಾಯಕ ಸರ್ಕಾರ ಎಂದು ಟೀಕಾಪ್ರಹಾರ ನಡೆಸಲಾಯಿತು. ಜಾರ್ಜ್ ಮತ್ತು ಅಶ್ವತ್ಥನಾರಾಯಣ ನಡುವೆ ಮಾತಿನ ಸಮರ ಹೆಚ್ಚಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸಿ, ಭ್ರಷ್ಟಾಚಾರದ ಪಿತಾಮಹ ನೀನು ಎಂದು ಟೀಕಿಸಿದರು. ಇದಕ್ಕೆ ಪ್ರತಿಯಾಗಿ ಅಶ್ವತ್ಥನಾರಾಯಣ, ಯಾರನ್ನ ಕೇಳಿದರು ಗೊತ್ತಾಗುತ್ತದೆ ಯಾರಪ್ಪ ಭ್ರಷ್ಟಾಚಾರದ ಪಿತಾಮಹ ಎಂದು ತಿರುಗೇಟು ನೀಡಿದರು. ಆಗ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು. ಸದನವು ಹತೋಟಿ ಬಾರದ ಕಾರಣ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು.