ಬೀದಿ ನಾಯಿ ಹಾವಳಿ: ಸುಪ್ರೀಂ ಆದೇಶದ ಬಳಿಕ ರಾಜ್ಯದಲ್ಲೂ ಚರ್ಚೆ; ಮಾಂಸದೂಟ ಪ್ರಸ್ತಾಪಕ್ಕೆ ಬಿಬಿಎಂಪಿ ಬೈ?
ದೆಹಲಿಯ ಬೀದಿ ನಾಯಿಗಳನ್ನು ಶೆಡ್‌ಗೆ ಸೇರಿಸುವ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ರಾಜ್ಯದಲ್ಲೂ ಬೀದಿನಾಯಿಗಳ ಹಾವಳಿ ಸಂಬಂಧ ಚರ್ಚೆ ಆರಂಭವಾಗಿದೆ.;
ಸಾಂದರ್ಭಿಕ ಚಿತ್ರ
ದೆಹಲಿಯ ಬೀದಿ ನಾಯಿಗಳನ್ನು ಶೆಡ್‌ಗೆ ಸೇರಿಸುವ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ರಾಜ್ಯದಲ್ಲೂ ಬೀದಿನಾಯಿಗಳ ಹಾವಳಿ ಸಂಬಂಧ ಚರ್ಚೆ ಆರಂಭವಾಗಿದೆ.
ಈ ಬಗ್ಗೆ ವಿಧಾನಪರಿಷತ್‌ನಲ್ಲಿ ಚರ್ಚೆ ನಡೆದಿದೆ ಹಾಗೂ ಬಿಬಿಎಂಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ನೀಡುತ್ತಿರುವ ಮಾಂಸ ತ್ಯಾಜ್ಯಗಳ ಜತೆ ಅನ್ನ ಬೆರಸಿ ನೀಡುವ ಆಹಾರವ ನೀಡುವ ಪ್ರಸ್ತಾಪವನ್ನು ಹಿಂಪಡೆಯುವ ಬಗ್ಗೆಯೂ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.
ಮೇಲ್ಮನೆ (ವಿಧಾನ ಪರಿಷತ್)ನ ನಾಯಿಗಳ ಹಾವಳಿ ಪ್ರಸ್ತಾಪವಾಗಿದ್ದು, ಜೆಡಿಎಸ್ ಸದಸ್ಯ ಭೋಜೇಗೌಡ, ಸುಪ್ರೀಂ ಕೋರ್ಟ್ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕಿ, ಅವುಗಳನ್ನು ಆಶ್ರಯ ತಾಣಗಳಿಗೆ ಕಳುಹಿಸುವಂತೆ ಆದೇಶಿಸಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಬೀದಿ ನಾಯಿಗಳನ್ನು ವಿಧಾನಸೌಧದ ಆವರಣದಿಂದ ತೆರವುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮನುಷ್ಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಇತ್ತೀಚೆಗೆ ಕೊಡಿಗೆಹಳ್ಳಿಯಲ್ಲಿ ವೃದ್ಧರೊಬ್ಬರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಾಯುವಿಹಾರಕ್ಕೆ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿದೆ.
ನಗರದ ಹಲವು ಪ್ರದೇಶ, ಮೈದಾನ, ರಸ್ತೆಗಳಲ್ಲಿ ಕತ್ತಲಾದ ಮೇಲೆ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬರೇ ನಡೆದು ಹೋಗದಂತಹ ಪರಿಸ್ಥಿತಿ ಇದೆ. ವ್ಯಗ್ರ ಬೀದಿ ನಾಯಿಗಳ ಆಟಾಟೋಪಕ್ಕೆ ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಎರಡು ವಾರದ ಹಿಂದೆ ಬೀದಿ ನಾಯಿಗಳು ದಾಳಿಯಿಂದ ವೃದ್ದ ಸೀತಪ್ಪ ಎಂಬುವವರು ಮೃತ ಪಟ್ಟಿದ್ದರು. ಆ ಬಳಿಯ ಜೆ.ಪಿ.ನಗರದಲ್ಲಿ ಮೂರು ವರ್ಷದ ಮಗುವಿನ ಮೇಲೆ ದಾಳಿಯಾಗಿತ್ತು. ದಾಳಿ ಮಾಡಿದ ನಾಯಿಯಲ್ಲಿ ರೇಬಿಸ್ ಪತ್ತೆಯಾಗಿತ್ತು.
ಯೋಜನೆಗೆ ಕೈಬಿಡುವ ಸಾಧ್ಯತೆ:
ಈ ನಡುವೆ, ಬೀದಿ ನಾಯಿಗಳಿಗೆ ಮಾಂಸದೂಟ (ಅನ್ನ ಮತ್ತು ಕೋಳಿ ಮತ್ತಿತರ ಮಾಂಸದ ತ್ಯಾಜ್ಯ) ಹಾಕುವ ಬಿಬಿಎಂಪಿ ವಿವಾದಿತ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವುದನ್ನು ಮನಗಂಡು ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆಯನ್ನು ಜಾರಿಗೊಳಿಸಲು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಒಂದು ನಿರ್ಧಾರ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಬೆಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ವಿಚಾನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೀದಿ ನಾಯಿಗಳ ದಾಳಿಗೆ ಬಲಿಯಾದ ಸೀತಪ್ಪ ಎಂಬುವರಿಗೆ ಪರಿಹಾರ ನೀಡುವ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.
ಮೈ ತಿಂಗಳಲ್ಲಿ ಹೆಚ್ಚು ವರದಿ
ಐದು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 15 ಸಾವಿರ ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಬಿಬಿಎಂಪಿ ಅಂಕಿ-ಅಂಶಗಳು ಹೇಳುತ್ತಿವೆ. ಆದರೆ, 2025ರ ಜನವರಿಯಿಂದ ಜೂನ್‌ವರೆಗೇ 13 ಸಾವಿರಕ್ಕೂ ಹೆಚ್ಚು ಬೀದಿ ನಾಯಿ ಪ್ರಕರಣಗಳು ದಾಖಲಾಗಿವೆ. ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 13,831 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಮೇ ತಿಂಗಳಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, 2,562 ಪ್ರಕರಣಗಳು ದಾಖಲಾಗಿದ್ದರೆ, ಫೆಬ್ರವರಿಯಲ್ಲಿ ಅತಿ ಕಡಿಮೆ ಅಂದರೆ 1,883 ಪ್ರಕರಣಗಳು ದಾಖಲಾಗಿವೆ.
2024 ರ ಮೊದಲಾರ್ಧಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕದಲ್ಲಿ ನಾಯಿ ಕಡಿತದಲ್ಲಿ ಶೇಕಡಾ 36 ರಷ್ಟು ಗಮನಾರ್ಹ ಹೆಚ್ಚಳ ಕಂಡುಬಂದಿದೆ. ರಾಜ್ಯಕ್ಕೆ ಪ್ರತಿ ತಿಂಗಳು ಸುಮಾರು 38 ಸಾವಿರದಿಂದ 40 ಸಾವಿರ ರೇಬೀಸ್ ಲಸಿಕೆಗಳು ಬೇಕಾಗುತ್ತವೆ ಮತ್ತು ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯು ಕಡಿತಕ್ಕೊಳಗಾದ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮತ್ತು ಲಸಿಕೆಗಳನ್ನು ನೀಡಲು ಕಡ್ಡಾಯವಾಗಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ಹೆಸರೇಳಲು ಇಚ್ಛಿಸದ ವೈದ್ಯರೊಬ್ಬರು ತಿಳಿಸಿದ್ದಾರೆ.
2,800 ನಾಯಿಗಳನ್ನು ಸಾಯಿಸಿರುವುದಕ್ಕೆ ಸಾಕ್ಷಿಯಾಗಿದ್ದೇನೆ
ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದೆ. ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಬೀದಿ ನಾಯಿಗಳ ದಾಳಿಯಿಂದ ರೇಬಿಸ್ ರೋಗ ಬರುತ್ತದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಚ್ಚುವುದು ತಪ್ಪಿಸಲು ಸಾಧ್ಯವಿಲ್ಲ. ನಾನು 2,800 ನಾಯಿಗಳನ್ನು ಸಾಯಿಸಿರುವುದಕ್ಕೆ ಸಾಕ್ಷಿಯಾಗಿದ್ದೇನೆ'ಎಂದು ಜೆಡಿಎಸ್‌ನಎಸ್.ಎಲ್.ಭೋಜೇಗೌಡ ಪರಿಷತ್‌ನಲ್ಲಿ ಹೇಳಿದರು.
ಬೀದಿನಾಯಿಗಳ ಹಾವಳಿಯ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಆರಂಭಿಸಿದ ಭೋಜೇಗೌಡ, "ಮಕ್ಕಳು, ವೃದ್ಧರು ಯಾರನ್ನೂ ಬಿಡದೆ ನಾಯಿ ದಾಳಿ ಮಾಡುತ್ತಿವೆ. ನಮ್ಮ ನಿಮ್ಮ ಮಕ್ಕಳು, ಹೈಕೋರ್ಟ್ ನ್ಯಾಯಮೂರ್ತಿ ಮಕ್ಕಳು ಕಾರಿನಲ್ಲಿ ಹೋಗುವುದರಿಂದ ಸಮಸ್ಯೆ ಎದುರಾಗುವುದಿಲ್ಲ. ಸುಪ್ರೀಂಕೋರ್ಟ್‌ಗೆ ರಾಜ್ಯದ ಪರಿಸ್ಥಿತಿ ಕುರಿತು ಏಕೆ ನೀವು ತಿಳಿಸುವುದಿಲ್ಲ? ಒಂದು ಅರ್ಜಿ ಹಾಕಿ ತಿಳಿಸಬೇಕು. ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನಾಗಿದ್ದ ವೇಳೆಯಲ್ಲಿ 2,800 ನಾಯಿಗಳಿಗೆ ಮಾಂಸ ಹಾಕಿಸಿ ತೆಂಗಿನ ಮರ ಕೆಳಗೆ ಹೂತು ಗೊಬ್ಬರ ಮಾಡಿಸಿದ್ದೆ ಎಂದರು.
ಪ್ರಾಣಿ ಪ್ರಿಯರ ಆಕ್ರೋಶ
ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ, ಪ್ರಾಣಿ ಪ್ರಿಯರು ಬೀದಿನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬೀದಿ ನಾಯಿಗಳ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅಲ್ಲದೇ, ಈ ಬಗ್ಗೆ ಕಾನೂನು ಹೋರಾಟ ಸಹ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.