ಇನ್ಮುಂದೆ ರಾಜ್ಯದ ಕಾಡುಗಳಲ್ಲಿ ಜಾನುವಾರು ಮೇಯಿಸುವಂತಿಲ್ಲ; ಸರ್ಕಾರದ ಆದೇಶ

ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.;

Update: 2025-07-22 12:01 GMT

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ದನ, ಕುರಿ ಮತ್ತು ಮೇಕೆಗಳಂತಹ ಸಾಕುಪ್ರಾಣಿಗಳನ್ನು ಮೇಯಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರೇಮಿಗಳ ಕಳವಳವನ್ನು ಉಲ್ಲೇಖಿಸಿರುವ ಸಚಿವರು, ಕಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಮೇಯಲು ಬಿಡುವುದರಿಂದ ಹೊಸದಾಗಿ ಮೊಳಕೆಯೊಡೆಯುವ ಸಸಿಗಳು ನಾಶವಾಗಿ ಅರಣ್ಯದ ಪುನರುತ್ಪತ್ತಿಗೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ. ಇದು ಕಾಡಿನಲ್ಲಿರುವ ಸಸ್ಯಹಾರಿ ವನ್ಯಜೀವಿಗಳಿಗೆ ಆಹಾರದ ಕೊರತೆಯನ್ನು ಉಂಟುಮಾಡುವುದಲ್ಲದೆ, ಊರಿನಿಂದ ಕಾಡಿಗೆ ಹೋಗುವ ಜಾನುವಾರುಗಳಿಂದ ವನ್ಯಜೀವಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವನ್ನೂ ಹೆಚ್ಚಿಸಿದೆ.

ಇದಲ್ಲದೆ, ಜಾನುವಾರು ಮೇಯಿಸುವಿಕೆ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗಿದೆ. ಕಾಡಿನಲ್ಲಿ ಮೇಯಲು ಹೋದ ದನಕರುಗಳನ್ನು ವನ್ಯಜೀವಿಗಳು ಕೊಂದಾಗ, ಆಕ್ರೋಶಗೊಂಡ ಕೆಲವರು ಮೃತ ಜಾನುವಾರುಗಳಿಗೆ ವಿಷವಿಕ್ಕುತ್ತಾರೆ. ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವಿಷಪ್ರಾಶನದಿಂದ ಸಾವನ್ನಪ್ಪಿದ್ದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ, ಕಾಡಿಗೆ ಹೋಗುವ ದನಗಾಹಿಗಳು ವನ್ಯಜೀವಿಗಳ ದಾಳಿಗೆ ತುತ್ತಾದರೆ, ನಿಯಮಗಳ ಪ್ರಕಾರ ಪರಿಹಾರ ನೀಡಲು ಅವಕಾಶವಿರುವುದಿಲ್ಲ.

ತಮಿಳುನಾಡಿನಲ್ಲಿ ಮದ್ರಾಸ್ ಹೈಕೋರ್ಟ್ ಅರಣ್ಯದೊಳಗೆ ಜಾನುವಾರು ಮೇಯಿಸುವುದನ್ನು ನಿಷೇಧಿಸಿದ ನಂತರ, ಅಲ್ಲಿನ ಜಾನುವಾರುಗಳನ್ನು ಕರ್ನಾಟಕದ ಅರಣ್ಯಗಳಿಗೆ ತಂದು ಮೇಯಿಸಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿತದೃಷ್ಟಿಯಿಂದ, ಸಾಕು ಪ್ರಾಣಿಗಳನ್ನು ಮೇಯಿಸುವುದನ್ನು ತಕ್ಷಣವೇ ನಿಷೇಧಿಸಲು ಕಾನೂನು ರೀತ್ಯ ಕ್ರಮವಹಿಸುವಂತೆ ಸಚಿವ ಈಶ್ವರ ಖಂಡ್ರೆ ಅವರು ಸೂಚಿಸಿದ್ದಾರೆ.

Tags:    

Similar News