IPL Betting‌ | ಬೆಟ್ಟಿಂಗ್‌ ಜಾಲಕ್ಕೆ ಸಿಲುಕಿದ ಪತಿ; ಪತ್ನಿ ಆತ್ಮಹತ್ಯೆ

ಗಂಡನ ಬೆಟ್ಟಿಂಗ್ ಹುಚ್ಚಿಗೆ ಪತ್ನಿಯೊಬ್ಬರು ಜೀವವನ್ನೇ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Update: 2024-03-27 08:31 GMT
ಗಂಡನ ಬೆಟ್ಟಿಂಗ್‌ ದಂಧೆಯ ಸಾಲಕ್ಕೆ ಬಲಿಯಾದ ಪತ್ನಿ ರಂಜಿತಾ
Click the Play button to listen to article

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಆರಂಭವಾಗಿದೆ. ಇದರ ನಡುವೆ ಬೆಟ್ಟಿಂಗ್ ಭೂತ ಕೂಡ ತನ್ನ ಆಟ ಆರಂಭಿಸಿದೆ. ಗಂಡನ ಬೆಟ್ಟಿಂಗ್ ಹುಚ್ಚಿಗೆ ಪತ್ನಿಯೊಬ್ಬರು ಜೀವವನ್ನೇ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ದರ್ಶನ್ ಬಾಬು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. 2021 ರಿಂದ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದರು. ಹಲವರಿಂದ ಸಾಲ ಪಡೆದು, ಒತ್ತೆ ಇಟ್ಟು ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಬೆಟ್ಟಿಂಗ್‌ನಲ್ಲಿ ಸೋತ ಕಾರಣ ಇದ್ದ ಹಣವನ್ನೆಲ್ಲ ಕಳೆದುಕೊಂಡು ಸುಮಾರು ಒಂದು ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರು.

ಬೆಟ್ಟಿಂಗ್‌ ಸಾಲಕ್ಕೆ ಗುರಿಯಾಗಿದ್ದ ದರ್ಶನ್

ಇದರಿಂದಾಗಿ ಮನೆಯಲ್ಲಿ ಹಣಕಾಸಿನ ತೊಂದರೆ ಉಂಟಾಗಿತ್ತು. ಸಾಲಗಾರರ ನಿರಂತರ ಕಿರುಕುಳದಿಂದ ಬೇಸತ್ತು ಮಾರ್ಚ್ 18 ರಂದು ದರ್ಶನ್ ಅವರ ಪತ್ನಿ ರಂಜಿತಾ ಅವರು ಚಿತ್ರದುರ್ಗದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಗಾರರ ನಿರಂತರ ಕಿರುಕುಳದಿಂದ ಮಗಳು ತೀವ್ರವಾಗಿ ನೊಂದಿದ್ದಳು ಮತ್ತು ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಮಹಿಳೆಯ ತಂದೆ ವೆಂಕಟೇಶ್‌ ಅವರು ಹೊಳಲ್ಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಸಾಲ ನೀಡಿದ 13 ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

ಹೊಳಲ್ಕೆರೆ ಪಟ್ಟಣದ ಗಿರೀಶ್‌, ರಾಘು, ಚಿತ್ರದುರ್ಗದ ಸುದೀಪ್‌, ತಿಪ್ಪೇಸ್ವಾಮಿ, ವೆಂಕಟೇಶ್‌, ಗುರು, ವಾಗೀಶ್‌, ರಾಕೇಶ್‌, ಪಾವಗಡ ಪೊತರೆಡ್ಡಿ, ಆಜ್ಜಂಪುರದ ಗುತ್ತಿಗೆದಾರ ಹೊನ್ನಪ್ಪ, ಹಿರಿಯೂರಿನ ಐಪಿಎಲ್‌ ಬಿಡ್ಡರ್‌ ಮಹಾಂತೇಶ್‌, ಗುತ್ತಿಗೆದಾರರ ಜಗನ್ನಾಥ್‌ ಶಿರಾ ಮತ್ತಿತರರು ತಮ್ಮ ಅಳಿಯ ದರ್ಶನ್‌ಗೆ ಬಟ್ಟಿಂಗ್‌ನಿಂದ ಕೋಟಿ ಕೋಟಿ ಹಣ ಸಂಪಾದಿಸಬಹುದು ಎಂದು ಪುಸಲಾಯಿಸಿದ್ದಾರೆ. ತನ್ನ ಬಳಿ ಹಣವಿಲ್ಲ ಎಂದು ದರ್ಶನ್‌ ಹೇಳಿದರೂ ಅವರ ಹತ್ತಿರ ಖಾಲಿ ಚೆಕ್‌ ಪಡೆದು ಬೆಟ್ಟಿಂಗ್‌ ಕಟ್ಟಿಸಿದ್ದಾರೆ. ಆದರೆ ಬೆಟ್ಟಿಂಗ್‌ ದಂಧೆಯಲ್ಲಿ ಸೋಲಾಗಿದೆ. ಹಣ ಕೊಡದಿದ್ದರೆ ಚೆಕ್‌ಬೌನ್ಸ್‌ ಕೇಸ್‌ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದರು. ಈ ಹಣ ನೀಡುವುದಾಗಿ ದರ್ಶನ್‌ ತಂದೆ ಪ್ರಕಾಶ್‌ ಭರವಸೆ ನೀಡಿದ್ದರೂ ಪದೇಪದೆ ಕರೆ ಮಾಡಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ನಮ್ಮ ಮಗಳು ರಂಜಿತಾ ಸೋಮವಾರ ಸಂಜೆ (ಮಾರ್ಚ್ 18) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಮಗಳ ಸಾವಿಗೆ ಬೆಟ್ಟಿಂಗ್‌ ದಂಧೆಕೋರರೇ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ತಂದೆ ವೆಂಕಟೇಶ್‌ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಮೂವರ ಬಂಧನ

ಈ ಬಗ್ಗೆ ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಹೊಳಲ್ಕೆರೆ ಪೊಲೀಸ್ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರು ಸುರೇಶ್, ದರ್ಶನ್ 2021 ರಿಂದ 2023 ರವರೆಗೆ ಮೂರು ವರ್ಷಗಳ ಕಾಲ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್‌ನಲ್ಲಿ ಸಕ್ರಿಯವಾಗಿದ್ದು, ದುಡಿದ ಹಣವನ್ನೆಲ್ಲಾ ಕಳೆದುಕೊಂಡ ಬಳಿಕ ಬೆಟ್ಟಿಂಗ್ ಕಟ್ಟಲು ದರ್ಶನ್ ಬಾಬು 1.5 ಕೋಟಿಗೂ ಅಧಿಕ ಸಾಲ ಮಾಡಿದ್ದರು. ಅದರಲ್ಲಿ 1 ಕೋಟಿ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೂ 84 ಲಕ್ಷ ರೂಪಾಯಿ ಸಾಲವನ್ನು ಬಾಕಿ ಉಳಿದಿತ್ತು. ಸಾಲ ನೀಡಿದವರಲ್ಲಿ ಶಿವು, ಗಿರೀಶ್ ಮತ್ತು ವೆಂಕಟೇಶ್ ಎಂಬ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಮೃತ ರಂಜಿತಾ( 23) ವಿವಾಹ ಐದು ವರ್ಷಗಳ ಹಿಂದೆ ಪಟ್ಟಣದ ಮುಖಂಡ ಬಾಲು ಪ್ರಕಾಶ್‌ ಹಾಗೂ ಪಂಚಾಯತ್‌ ಮಾಜಿ ಅಧ್ಯಕ್ಷೆ ಚಂದ್ರಕಲಾ ಪುತ್ರ ದರ್ಶನ್‌ ಬಾಲು ಅವರೊಂದಿಗೆ ನಡೆದಿತ್ತು. ಈ ದಂಪತಿಗೆ ನಾಲ್ಕು ವರ್ಷದ ಗಂಡು ಮಗ ಇದ್ದಾನೆ. ರಂಜಿತಾ ಅವರು ತಮ್ಮ ಡೆತ್‌ನೋಟ್‌ನಲ್ಲಿ ದಂಪತಿಗಳು ಅನುಭವಿಸಿದ ಮಾನಸಿಕ ಕಿರುಕುಳದ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ರಂಜಿತಾ ಅವರ ದುರಂತ ಸಾವು ಆನ್‌ಲೈನ್ ಬೆಟ್ಟಿಂಗ್‌ನ ಕರಾಳ ಪ್ರಪಂಚದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಕಳೆದ ವರ್ಷ ಜಾರಿ ನಿರ್ದೇಶನಾಲಯವು ಮಹದೇವ್ ಎಂಬ ಬೆಟ್ಟಿಂಗ್ ಆಪ್‌ ಅನ್ನು ಪತ್ತೆ ಮಾಡಿತ್ತು. ಅಲ್ಲಿ ಬೆಟ್ಟಿಂಗ್‌ ದಂಧೆಕೋರರು 400 ರೂ ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದರು.

Tags:    

Similar News