ಹಾಸನದಲ್ಲಿ ಹೃದಯಾಘಾತ ಸಾವುಗಳು: ತನಿಖಾ ವರದಿ ಬಿಡುಗಡೆ; ಹಲವು ಅಂಶಗಳು ಪತ್ತೆ
ತನಿಖಾ ಸಮಿತಿಯು ಹಾಸನ ಜಿಲ್ಲೆಯಲ್ಲಿ 2025ರ ಮೇ ಮತ್ತು ಜೂನ್‌ನಲ್ಲಿ ಸಂಭವಿಸಿದ 24 ಸಾವುಗಳನ್ನು ಪರಿಶೀಲಿಸಿದೆ. ಅಲ್ಲದೆ, ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸಾವುಗಳ ಹಿಂದಿನ ಪ್ರವೃತ್ತಿಯನ್ನು ಅಧ್ಯಯನ ಮಾಡಿದೆ;
ಸಾಂದರ್ಭಿಕ ಚಿತ್ರ
ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳ ಕುರಿತು ಅಧ್ಯಯನ ನಡೆಸಿರುವ ಜಯದೃವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಅದರ ಪ್ರಕಾರ, ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯಾದ್ಯಂತ ಹಠಾತ್ ಹೃದಯ ಸಂಬಂಧಿ ಸಾವುಗಳಲ್ಲಿ ಹೆಚ್ಚಳ ಕಂಡುಬಂದಿಲ್ಲ.
ಹಠಾತ್ ಸಾವುಗಳು ಹೆಚ್ಚುತ್ತಿವೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿ ಸಾರ್ವಜನಿಕರಲ್ಲಿ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಈಗ ಈ ತನಿಖೆಯ ವರದಿ ಬಿಡುಗಡೆ ಮಾಡಿದ್ದಾರೆ.
ತನಿಖೆಯ ವಿವರಗಳು
ತನಿಖಾ ಸಮಿತಿಯು ಹಾಸನ ಜಿಲ್ಲೆಯಲ್ಲಿ 2025ರ ಮೇ ಮತ್ತು ಜೂನ್‌ನಲ್ಲಿ ಸಂಭವಿಸಿದ 24 ಸಾವುಗಳನ್ನು ಪರಿಶೀಲಿಸಿದೆ. ಅಲ್ಲದೆ, ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸಾವುಗಳ ಹಿಂದಿನ ಪ್ರವೃತ್ತಿಯನ್ನು ಅಧ್ಯಯನ ಮಾಡಿದೆ. ಮೃತಪಟ್ಟ 24 ಜನರಲ್ಲಿ, 14 ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, 10 ಜನರು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
ವರದಿಯ ಪ್ರಮುಖಾಂಶಗಳ ಪ್ರಕಾರ, 24 ಸಾವುಗಳಲ್ಲಿ ನಾಲ್ಕು ಪ್ರಕರಣಗಳು ಹೃದಯಕ್ಕೆ ಸಂಬಂಧಿಸಿಲ್ಲ. ಇವುಗಳಲ್ಲಿ ಒಂದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ, ಒಂದು ರಸ್ತೆ ಅಪಘಾತದಿಂದ, ಒಂದು ತೀವ್ರ ಗ್ಯಾಸ್ಟ್ರೋಎಂಟರೈಟಿಸ್‌ನಿಂದ (ಸೋಂಕು) ಮತ್ತು ಇನ್ನೊಂದು ವಿದ್ಯುತ್ ಆಘಾತದಿಂದ ಸಂಭವಿಸಿದೆ.
ಉಳಿದ 20 ಸಾವುಗಳಲ್ಲಿ, 10 ದೃಢಪಡಿಸಿದ ಹೃದಯ ಸಂಬಂಧಿ ಸಾವುಗಳಾಗಿವೆ. ಇವರಲ್ಲಿ ಮೂವರು ಮೊದಲೇ ಹೃದಯ ಕಾಯಿಲೆ ಹೊಂದಿದ್ದರು. ಒಬ್ಬರು ಬೈಪಾಸ್ ಶಸ್ತ್ರಚಿಕಿತ್ಸೆ ನಂತರ ಮೃತಪಟ್ಟರೆ, ಒಬ್ಬರು ಆಂಜಿಯೋಪ್ಲ್ಯಾಸ್ಟಿ ಪಡೆದವರು ಮತ್ತು ಒಬ್ಬರು ಹೃದಯ ವೈಫಲ್ಯ (ಡಿಲೇಟೆಡ್ ಕಾರ್ಡಿಯೊಮಯೋಪತಿ) ಹೊಂದಿದ್ದವರಾಗಿದ್ದರು. ಉಳಿದ ಏಳು ಹೃದಯ ಸಂಬಂಧಿ ಸಾವುಗಳಲ್ಲಿ ನಾಲ್ಕು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದರೆ, ಮೂರು ಇಸಿಜಿ ಆಧಾರದ ಮೇಲೆ ಹೃದಯಾಘಾತದಿಂದಾಗಿವೆ. ಇನ್ನೂ 10 ಸಾವುಗಳು ಸಂಭಾವ್ಯ ಹೃದಯ ಸಂಬಂಧಿ ಸಾವುಗಳಾಗಿದ್ದು, ರೋಗಲಕ್ಷಣಗಳು, ಅಪಾಯಕಾರಿ ಅಂಶಗಳು ಮತ್ತು ಆರೋಗ್ಯದ ಚಿಹ್ನೆಗಳ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯ ಆಘಾತಕಾರಿ ಅಂಶಗಳೇನು?
ಮೃತಪಟ್ಟವರಲ್ಲಿ ಶೇ. 75ಕ್ಕಿಂತ ಹೆಚ್ಚು ಜನರು ಒಂದಕ್ಕಿಂತ ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಇವುಗಳಲ್ಲಿ ಮಧುಮೇಹ (7), ಬೊಜ್ಜು (8), ಮದ್ಯಪಾನ (8), ಧೂಮಪಾನ (6), ಅಧಿಕ ರಕ್ತದೊತ್ತಡ (6), ಮೊದಲೇ ಇದ್ದ ಹೃದಯ ಕಾಯಿಲೆ (3) ಮತ್ತು ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ (3) ಸೇರಿವೆ ಎಂದು ವರದಿಯಲ್ಲಿದೆ.
ಜಯದೇವ ಸಂಸ್ಥೆಯ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಕಳೆದ 6 ತಿಂಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಂತಹ ಇತರ ಕೇಂದ್ರಗಳಲ್ಲಿಯೂ ಹೃದಯ ಸಂಬಂಧಿ ಸಾವುಗಳು ಹೆಚ್ಚಾಗುವ ಪ್ರವೃತ್ತಿ ಕಂಡುಬಂದಿಲ್ಲ. ಹಾಸನದಲ್ಲಿ ಮೇ-ಜೂನ್ 2024 ಮತ್ತು ಮೇ-ಜೂನ್ 2025ರ ಅವಧಿಯಲ್ಲಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದವರು ಮತ್ತು ಮರಣ ಹೊಂದಿದವರ ಪ್ರಮಾಣದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. 2024ರಲ್ಲಿ ಮೈಯೋಕಾರ್ಡಿಯಲ್ ಇನ್ಫಾರ್ಕ್ಷನ್ (MI) ನಿಂದ ಆಸ್ಪತ್ರೆಗೆ ದಾಖಲಾದವರು 315 ಇದ್ದರೆ, 2025ರಲ್ಲಿ 357ಕ್ಕೆ ಏರಿದ್ದಾರೆ. ಆದರೆ, MI ಸಾವುಗಳ ಸಂಖ್ಯೆ 2024ರಲ್ಲಿ 19 ಇದ್ದರೆ, 2025ರಲ್ಲಿ 20ಕ್ಕೆ ತಲುಪಿದೆ. ಇದು ಶೇ. 6.03 ಮತ್ತು ಶೇ. 5.60ರಷ್ಟಾಗಿದೆ.
ವರದಿಯ ಪ್ರಮುಖ ಅಂಶಗಳ ಪ್ರಕಾರ, ಮೃತಪಟ್ಟ ಪ್ರಕರಣಗಳು ಒಂದೇ ಕಡೆ ಕೇಂದ್ರೀಕೃತವಾಗಿರದೆ, ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಂಭವಿಸಿವೆ. ಹೆಚ್ಚಿನ ಸಾವುಗಳು ಹೃದಯ ಸಂಬಂಧಿ ಅಪಾಯಕಾರಿ ಅಂಶಗಳಿಂದಾಗಿ ಆಗಿವೆ. ಕೆಲವು ಪ್ರಕರಣಗಳಲ್ಲಿ ಸಾವಿಗೆ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಮಿತಿಗಳಿದ್ದವು. ಅನೇಕ ಬಾರಿ, ವ್ಯಕ್ತಿಗಳು ಸಾಯುವ ಮೊದಲು ಯಾವುದೇ ಆಸ್ಪತ್ರೆಗೆ ಹೋಗಿರಲಿಲ್ಲ.
ಮರಣೋತ್ತರ ಪರೀಕ್ಷೆಯ ಮಾಹಿತಿ ಸಿಗದಿರುವುದು ಈ ಸಾವುಗಳು ನಿಜವಾಗಿಯೂ ಹೃದಯ ಸಂಬಂಧಿಯೇ ಅಥವಾ ಬೇರೆ ಕಾರಣಗಳಿಂದ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಮಸ್ಯೆಯಾಗಿದೆ. ಇಸಿಜಿ, ಹೃದಯ ಕಿಣ್ವಗಳು ಅಥವಾ ಇಮೇಜಿಂಗ್‌ನಂತಹ ಅಗತ್ಯ ವೈದ್ಯಕೀಯ ಪರೀಕ್ಷೆಗಳು ಅನೇಕ ಸಂದರ್ಭಗಳಲ್ಲಿ ಲಭ್ಯವಿರಲಿಲ್ಲ. ಇದರಿಂದಾಗಿ ರೋಗನಿರ್ಣಯವು ಊಹೆಯ ಮೇಲೆ ನಿಂತಿತ್ತು. ಮೃತರ ಸಂಬಂಧಿಕರಿಂದ ಕಡಿಮೆ ಸಹಕಾರ ಸಿಕ್ಕಿರುವುದರಿಂದ, ಮೌಖಿಕ ಮಾಹಿತಿ ಆಧಾರಿತ ತನಿಖೆಗಳು ಅಷ್ಟೇನೂ ಫಲಪ್ರದವಾಗಿಲ್ಲ. ವಿಶ್ವಾಸಾರ್ಹ ಪ್ರತ್ಯಕ್ಷದರ್ಶಿ ಮಾಹಿತಿ, ವೈದ್ಯಕೀಯ ದತ್ತಾಂಶ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಅನುಪಸ್ಥಿತಿಯಲ್ಲಿ, ಪ್ರತಿ ಪ್ರಕರಣದ ಸಾವಿಗೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ.
ಮೃತಪಟ್ಟವರು ಧೂಮಪಾನ, ಮದ್ಯಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಅಥವಾ ಹೃದಯ ಕಾಯಿಲೆಯ ಕುಟುಂಬ ಇತಿಹಾಸದಂತಹ ಗುರುತಿಸಬಹುದಾದ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಆದರೆ, ಕೆಲವು ಪ್ರಕರಣಗಳಲ್ಲಿ ಹೃದಯ ಕಾಯಿಲೆಯ ಬಗ್ಗೆ ಯಾವುದೇ ಪೂರ್ವ ಮಾಹಿತಿ ಅಥವಾ ಸೂಚನೆ ಇರಲಿಲ್ಲ.
ಸಮಿತಿಯ ಶಿಫಾರಸುಗಳು
* ಆಸ್ಪತ್ರೆಯ ಹೊರಗೆ ಸಂಭವಿಸುವ ಎಲ್ಲಾ ಹಠಾತ್ ಹೃದಯ ಸಂಬಂಧಿ ಸಾವುಗಳು, ಸಾವಿನ ಕಾರಣವನ್ನು ಖಚಿತಪಡಿಸಲು/ತಳ್ಳಿಹಾಕಲು ಕಡ್ಡಾಯ ಮರಣೋತ್ತರ ಪರೀಕ್ಷೆಗೆ ಒಳಗಾಗಬೇಕು.
* ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (PHC ಮತ್ತು CHC) ಇಸಿಜಿ ಯಂತ್ರಗಳು ಮತ್ತು ಹೃದಯಾಘಾತಕ್ಕೆ ಅಗತ್ಯವಾದ ತುರ್ತು ಔಷಧಿಗಳು (ಉದಾ: ಇಕೋಸ್ಪ್ರಿನ್, ಕ್ಲೋಪಿಡೋಗ್ರೆಲ್, ಅಟೋರ್ವಾಸ್ಟಾಟಿನ್, ಹೆಪಾರಿನ್) ಲಭ್ಯವಿರುವುದನ್ನು ಖಚಿತಪಡಿಸಬೇಕು.
* ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಜಿಮ್‌ಗಳಲ್ಲಿನ ದೈಹಿಕ ತರಬೇತುದಾರರಂತಹ ನಿರ್ದಿಷ್ಟ ಗುಂಪುಗಳಿಗೆ ಸಿಪಿಆರ್ (ಕೃತಕ ಉಸಿರಾಟ) ತರಬೇತಿ ನೀಡಬೇಕು. ಜನನಿಬಿಡ ಪ್ರದೇಶಗಳಲ್ಲಿ (ಜಿಮ್‌ಗಳು, ಮಾಲ್‌ಗಳು ಇತ್ಯಾದಿ) ಸ್ವಯಂಚಾಲಿತ ಬಾಹ್ಯ ಡಿಫೈಬ್ರಿಲೇಟರ್‌ಗಳು (AED) ಲಭ್ಯವಿರುವುದನ್ನು ಖಚಿತಪಡಿಸಬೇಕು.
* ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹೃದಯ ಸಂಬಂಧಿ ತಪಾಸಣೆ (Cardiac Screening) ನಡೆಸಬೇಕು.