ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣ; ಸತೀಶ್ ಸೈಲ್ 21 ಕೋಟಿ ರೂಪಾಯಿ ಜಪ್ತಿ
59 ವರ್ಷದ ಶಾಸಕ ಸತೀಶ್ ಸೈಲ್ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ನಂತರ ಅವರು ವೈದ್ಯಕೀಯ ಕಾರಣಗಳ ಮೇಲೆ ಮಧ್ಯಂತರ ಜಾಮೀನು ಪಡೆದಿದ್ದರು.
ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ, ಕರ್ನಾಟಕದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಸೇರಿದ 21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ನವೆಂಬರ್ 6 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ. ಗೋವಾ ಮೂಲದ ಸೈಲ್ ಅವರ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (SMSPL) ಕಂಪನಿಯ ಮೂಲಕ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಜಪ್ತಿಯಾದ ಆಸ್ತಿಗಳ ವಿವರ
ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಗೋವಾದ ಮೊರ್ಮುಗೋವಾದ ಚಿಕಾಲಿಮ್ ಗ್ರಾಮದಲ್ಲಿರುವ 12,500 ಚದರ ಮೀಟರ್ ಖಾಲಿ ಜಾಗ, ಮೊರ್ಮುಗೋವಾ ತಾಲೂಕಿನಲ್ಲಿರುವ 16,850 ಚದರ ಮೀಟರ್ ಕೃಷಿ ಭೂಮಿ ಹಾಗೂ ವಾಸ್ಕೋಡಗಾಮಾದಲ್ಲಿರುವ ವಾಣಿಜ್ಯ ಕಟ್ಟಡದ ಬಹುಮಹಡಿಗಳು ಸೇರಿವೆ. ಈ ಆಸ್ತಿಗಳ ಮೌಲ್ಯ 21 ಕೋಟಿ ರೂಪಾಯಿಯಾಗಿದ್ದು ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 64 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ವೈದ್ಯಕೀಯ ಜಾಮೀನು ರದ್ದು
59 ವರ್ಷದ ಶಾಸಕ ಸತೀಶ್ ಸೈಲ್ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ನಂತರ ಅವರು ವೈದ್ಯಕೀಯ ಕಾರಣಗಳ ಮೇಲೆ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ, ಶುಕ್ರವಾರ ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಈ ಜಾಮೀನನ್ನು ರದ್ದುಗೊಳಿಸಿದೆ ಎಂದು ಇಡಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
2010ರಲ್ಲಿ ಕರ್ನಾಟಕ ಲೋಕಾಯುಕ್ತವು ಬಳ್ಳಾರಿಯಿಂದ ಬೆಲೆಕೇರಿ ಬಂದರಿಗೆ ಸುಮಾರು ಎಂಟು ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣವನ್ನು ಪತ್ತೆ ಹಚ್ಚಿತ್ತು. ಈ ವರದಿಯನ್ನು ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. SMSPL ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸೈಲ್, ಬೆಲೆಕೇರಿ ಬಂದರಿನಲ್ಲಿದ್ದ ಸುಮಾರು 1.54 ಲಕ್ಷ ಮೆಟ್ರಿಕ್ ಟನ್ ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರನ್ನು ವಿವಿಧ ಪೂರೈಕೆದಾರರಿಂದ ಖರೀದಿಸಿದ್ದರು ಎಂದು ಇಡಿ ಆರೋಪಿಸಿದೆ.
ಬಳಿಕ, ಸೈಲ್ ಅವರು ಬಂದರು ಸಂರಕ್ಷಣಾಧಿಕಾರಿಯೊಂದಿಗೆ ಶಾಮೀಲಾಗಿ, ಹಾಂಗ್ ಕಾಂಗ್‌ನಲ್ಲಿ ಮತ್ತೊಂದು ಕಂಪನಿಯನ್ನು ತೆರೆಯುವ ಮೂಲಕ ಅಕ್ರಮವಾಗಿ ಖರೀದಿಸಿದ ಅದಿರನ್ನು ಎಂವಿ ಕೊಲಂಬಿಯಾ ಮತ್ತು ಎಂವಿ ಮ್ಯಾಂಡರಿನ್ ಹಾರ್ವೆಸ್ಟ್ ಹಡಗುಗಳ ಮೂಲಕ ಚೀನಾಕ್ಕೆ ರಫ್ತು ಮಾಡಿದ್ದಾರೆ ಎಂದು ಇಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 13 ಮತ್ತು 14 ರಂದು ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯ ಹಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು.