RSS ನೋಂದಣಿ ಆಗದಿದ್ದರೂ ಸಂವಿಧಾನಾತ್ಮಕ ಸಂಘ- ಮೋಹನ್‌ ಭಾಗವತ್‌ ಸ್ಪಷ್ಟನೆ

ಬ್ರಿಟಿಷರ ಬಳಿ ಸಂಘವನ್ನು ನೋಂದಣಿ ಮಾಡಿಸಬೇಕು ಎಂಬ ಪ್ರಶ್ನೆಯೇ ಇರಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ನೋಂದಣಿ ಕಡ್ಡಾಯ ಮಾಡಿಲ್ಲ. ಆದಾಗ್ಯೂ, ಆರ್‌ಎಸ್‌ಎಸ್ ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.

Update: 2025-11-09 07:55 GMT

ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದ ಬಳಿಕ ಎದ್ದಿರುವ ಸಂಘದ ನೋಂದಣಿ, ದೇಣಿಗೆ ಸ್ವೀಕೃತಿ, ತೆರಿಗೆ ಪಾವತಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ ನೀಡಿದ್ದಾರೆ.

ಆರ್‌ಎಸ್‌ಎಸ್‌ ಶತಮಾನೋತ್ಸವ ಹಿನ್ನೆಲೆ ಬೆಂಗಳೂರಿನ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್‌ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. 

ಉಪನ್ಯಾಸ ನೀಡಿದ ಬಳಿಕ ಪ್ರೇಕ್ಷಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಭಾಗವತ್‌ ಅವರು, ಆರ್‌ಎಸ್‌ಎಸ್ ನೋಂದಣಿ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕವಾಗಿದೆ. ದೇಶದಲ್ಲಿ ಆರ್‌ಎಸ್‌ಎಸ್‌ 1925 ರಲ್ಲಿ ಆರಂಭವಾಗಿದೆ. ಆಗ ಬ್ರಿಟೀಷರ ಆಳ್ವಿಕೆ ಇತ್ತು. ಬ್ರಿಟಿಷರ ಬಳಿ ಸಂಘವನ್ನು ನೋಂದಣಿ ಮಾಡಿಸಬೇಕು ಎಂಬ ಪ್ರಶ್ನೆಯೇ ಇರಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ನೋಂದಣಿ ಕಡ್ಡಾಯ ಮಾಡಿಲ್ಲ. ಆದರೂ, ಆರ್‌ಎಸ್‌ಎಸ್ ಸ್ವತಂತ್ರ ಹಾಗೂ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಿಂದೂ ಧರ್ಮವೇ ನೋಂದಣಿ ಆಗಿಲ್ಲ, ಆದರೆ, ಅದು ಈ ದೇಶದ ಆತ್ಮ. ಹಾಗಾದರೆ ನೋಂದಣಿಯಾಗಿಲ್ಲವೆಂದು ಆ ಧರ್ಮವನ್ನು ನಿಷೇಧಿಸಬೇಕೆ? ಎಂದು ಪ್ರಶ್ನಿಸಿದ ಅವರು, ನಮ್ಮ ಸಂಘವೂ ಧರ್ಮದ ತಳಹದಿಯಲ್ಲೇ ಮುನ್ನಡೆಯುತ್ತಿದೆ. ಜನರ ನಡುವೆ ನೈತಿಕ ಬಾಂಧವ್ಯ ಬಲಪಡಿಸುವ ಸಾಮಾಜಿಕ ಚಳವಳಿಯಂತಿದೆ. ಹಾಗಾಗಿ ನೋಂದಣಿ ಮಾಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೂ ಆರ್‌ಎಸ್‌ಎಸ್ ನಿಷೇಧಿಸುವ ವಿಚಾರ ಮುನ್ನೆಲೆಗೆ ಬಂದಿದ್ದವು. ಆದರೆ ನ್ಯಾಯಾಲಯ ಆ ಪ್ರಸ್ತಾಪಗಳು ತಿರಸ್ಕೃತಗೊಂಡವು. ನ್ಯಾಯಾಂಗ ಸಹ ನಮ್ಮ ಸಂಘದ ಕಾನೂನಾತ್ಮಕತೆ ಗುರುತಿಸಿದೆ. ನಾವು ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಜತೆಗೆ ಆದಾಯ ತೆರಿಗೆಯನ್ನೂ ಪಾವತಿಸುತ್ತಿದ್ದೇವೆ ಎಂದು ಭಾಗವತ್ ಹೇಳಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿ ಜಾತಿಬೇಧವಿಲ್ಲ

ಆರ್ಎಸ್ಎಸ್ನಲ್ಲಿ ಮುಸ್ಲಿಮರ ಸೇರ್ಪಡೆಗೆ ಅವಕಾಶ ಇದೆಯೇ, ಅವರಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ಧರ್ಮ, ಜಾತಿ, ಪಂಥ, ಲಿಂಗ ಎಂಬ ಬೇಧವಿಲ್ಲ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ, ಶಾಖೆಗೆ ಬರುವವರು ತಮ್ಮ ಧರ್ಮದ ಗುರುತು ಬದಿಗಿಟ್ಟು, ಭಾರತ ಮಾತೆಯ ಮಕ್ಕಳು ಎಂಬ ಭಾವದಿಂದ ಬರಬೇಕು. ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ಸಂಘದ ನಿಯಮಗಳನ್ನು ಪಾಲನೆ ಮಾಡಬೇಕು ಎಂದಿದ್ದಾರೆ. ನಮ್ಮ ಉದ್ದೇಶ ಯಾವುದೇ ಧರ್ಮದ ವಿರುದ್ಧವಲ್ಲ. ಸಮಾಜದಲ್ಲಿ ಸೌಹಾರ್ದ, ಶಿಸ್ತು ಮತ್ತು ಸೇವಾ ಮನೋಭಾವ ನಿರ್ಮಿಸುವುದೇ ಸಂಘದ ಗುರಿ” ಎಂದು ವಿವರಿಸಿದ್ದಾರೆ.

“ಅಲ್ಪಸಂಖ್ಯಾತರ ಏಳಿಗೆಗಾಗಿ ಆರ್‌ಎಸ್‌ಎಸ್‌ ಶ್ರಮಿಸುತ್ತಿದೆ. ಬಡ ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಸೇವಾ ಭಾರತಿ, ವಿದ್ಯಾಭಾರತಿ ಮುಂತಾದ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ನಮ್ಮ ನಿಲುವು” ಎಂದು ಭಾಗವತ್ ಹೇಳಿದ್ದಾರೆ.

ರಾಜ್ಯ ಸರ್ಕಾರವು ಆರ್‌ಎಸ್‌ಎಸ್‌ ಶಾಖೆಗಳಿಗೆ ಸರ್ಕಾರಿ ಸ್ಥಳಗಳ ಬಳಕೆ ನಿಷೇಧಿಸುವ ಆದೇಶ ಹೊರಡಿಸಿದ ಬೆನ್ನಲ್ಲೇ ಮೋಹನ್ ಭಾಗವತ್ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ, ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಭಾಗವಹಿಸಿದ್ದರು.

Tags:    

Similar News