ಸೈಬರ್ ದಾಳಿ ತಡೆಯಲು 'ನಮ್ಮಮೆಟ್ರೋ' ಸಜ್ಜು: ಬೈಯಪ್ಪನಹಳ್ಳಿ ಡಿಪೋದಲ್ಲಿ ಎಸ್‌ಒಸಿ ಸ್ಥಾಪನೆ

ಸೈಬರ್ ದಾಳಿಗಳ ನಿಯಂತ್ರಣಕ್ಕಾಗಿ ಬೈಯಪ್ಪನಹಳ್ಳಿ ಡಿಪೊದಲ್ಲಿಎಸ್‌ಒಸಿ ಆರಂಭಿಸಲು ಮೆಟ್ರೋ ಸಿದ್ಧತೆ ನಡೆಸಿದೆ. ಈ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಲಿದೆ.

Update: 2025-11-09 02:30 GMT

ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್‌ ಭದ್ರತೆ ದಿನದಿಂದ ದಿನಕ್ಕೆ ಹೆಚ್ಚು ಮಹತ್ವ ಪಡೆಯುತ್ತಿದ್ದು, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಹೆಚ್ಚುತ್ತಿರುವ ಸೈಬರ್ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು 'ನಮ್ಮ ಮೆಟ್ರೋ' ಸಜ್ಜಾಗುತ್ತಿದೆ. ಸೈಬರ್‌ ಅಪಾಯಗಳನ್ನು ತಡೆಯಲು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆಯನ್ನು ಒಂದೇ ಕೇಂದ್ರದಿಂದ ನಡೆಸಲು ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆ ಕೇಂದ್ರ(ಎಸ್‌ಒಸಿ) ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. 

ಸೈಬರ್ ದಾಳಿಗಳ ನಿಯಂತ್ರಣಕ್ಕಾಗಿ ಮತ್ತು ಸಾವಿರಾರು ಸಿಸಿಟಿವಿ ಕ್ಯಾಮೆರಾಗಳ ಮೇಲೆ ನಿರಂತರ ನಿಗಾವಹಿಸಲು ಬೈಯಪ್ಪನಹಳ್ಳಿ ಡಿಪೊದಲ್ಲಿ ಎಸ್‌ಒಸಿ ಆರಂಭಿಸಲು ಸಿದ್ಧತೆ ಕೈಗೊಂಡಿದೆ. ಈ ಕೇಂದ್ರ ಕಾರ್ಯಾರಂಭ ಮಾಡಿದರೆ, ಈ ರೀತಿಯ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅತಿವೇಗದಲ್ಲಿ ಬೆಳೆಯುತ್ತಿದೆ. ಎಐ ಆಧಾರಿತ ಬೆದರಿಕೆಗಳು, ತಂತ್ರಜ್ಞಾನಗಳ ಹ್ಯಾಕ್ ಮಾಡುವ ಕೃತ್ಯಗಳೂ ಜಾಸ್ತಿಯಾಗುತ್ತಿವೆ. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುವುರಿಂದ ಅಲ್ಲಿ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಎಐ ತಂತ್ರಜ್ಞಾನವನ್ನೊಳಗೊಂಡ ಎಸ್‌ಒಸಿ ಸ್ಥಾಪಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ.

ಈ ಕೇಂದ್ರವು ಮೆಟ್ರೋ ಜಾಲದಾದ್ಯಂತ ಸೈಬರ್ ವಿರುದ್ಧ ಹೋರಾಟಕ್ಕೆ ಪೂರಕವಾಗಲಿದೆ. ನೆಲದ ಮೇಲಿನ ಭದ್ರತಾ ಘಟನೆಗಳ ಮೇಲ್ವಿಚಾರಣೆಯನ್ನುಈ ಕೇಂದ್ರವು ಕಮಾಂಡ್ ಹಬ್ ಆಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಈ ಎಸ್‌ಒಸಿ ಕೇಂದ್ರವು ಸೈಬರ್ ಬೆದರಿಕೆ ಪತ್ತೆ ಸಾಧನ ಹೊಂದಿದ್ದು, ಸೂಕ್ತವಾಗಿ ವಿಶ್ಲೇಷಣೆ ಮಾಡುತ್ತದೆ. ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿರುವ ಮತ್ತು ಕಾರಿಡಾರ್‌ಗಳಲ್ಲಿನ ಸಿಸಿಟಿವಿ ಕಣ್ಗಾವಲುಗಳ ಜತೆಗೆ ಸಂಯೋಜಿಸಲ್ಪಡುತ್ತದೆ. ಮೆಟ್ರೋ ನಿಲ್ದಾಣಗಳ ಭದ್ರತೆಯನ್ನು ಬೈಯಪ್ಪನಹಳ್ಳಿಯಿಂದಲೇ ಕಂಟ್ರೋಲ್‌ ಮಾಡಲಾಗುತ್ತದೆ. ಎಲ್ಲಿಯಾದರೂ ಸಣ್ಣ ಭದ್ರತೆಗೆ ಧಕ್ಕೆ ಉಲ್ಲಂಘ  ನೆಯಾದರೂ ತಕ್ಷಣವೇ ಸುಳಿವನ್ನು ನೀಡಲಿದ್ದು, ದಿನದ 24 ತಾಸು ಕಾರ್ಯನಿರ್ವಹಿಸಲಾಗುತ್ತದೆ. ಬಿಎಂಆರ್‌ಸಿಎಲ್‌ನ ಎಲ್ಲ ತಾಂತ್ರಿಕ ವ್ಯವಸ್ಥೆಗಳಾದ ಸಿಗ್ನಲಿಂಗ್‌, ಟ್ರ್ಯಾಕ್‌ ನಿರ್ವಹಣೆ, ಟಿಕೆಟ್‌ ವ್ಯವಸ್ಥೆ, ಆನ್‌ಲೈನ್‌ ಸೇವೆಗಳು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಇವುಗಳ ಸುರಕ್ಷತೆಯನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಈ ಕೇಂದ್ರ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ಹೇಳಿವೆ. 

ಸಿಸಿ ಕ್ಯಾಮೆರಾಗಳ ಕಣ್ಗಾವಲು

ʼನಮ್ಮ ಮೆಟ್ರೋ' ಪ್ರಸ್ತುತ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸುಮಾರು 93 ಕಿ.ಮೀ. ಉದ್ದ ಹೊಂದಿದ್ದು, ಒಟ್ಟು 83 ನಿಲ್ದಾಣಗಳಿವೆ. ಪ್ರತಿ ನಿಲ್ದಾಣದಲ್ಲಿ ಸುಮಾರು 200 ಸಿಸಿಟಿವಿ ಕ್ಯಾಮೆರಾಗಳಿವೆ.  ಒಟ್ಟು ಸುಮಾರು 13,200 ಕ್ಯಾಮೆರಾಗಳು ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಅದೇ ರೀತಿ ಮೆಟ್ರೋ ಬೋಗಿಗಳಲ್ಲೂ 1,368 ಕ್ಯಾಮೆರಾಗಳು ಇವೆ.  ಆರು ಬೋಗಿಗಳ 57 ರೈಲುಗಳಲ್ಲಿ ಪ್ರತಿ ಕೋಚ್‌ಗೆ ನಾಲ್ಕು ಕ್ಯಾಮೆರಾಗಳಂತೆ ವ್ಯವಸ್ಥೆ ಮಾಡಲಾಗಿದೆ. ಈ ಬೃಹತ್ ಡಿಜಿಟಲ್ ಜಾಲವನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ತಡೆಯುವುದೇ ಎಸ್‌ಒಸಿ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ. 

ಸದ್ಯಕ್ಕೆ ಕ್ಯಾಮೆರಾಗಳ ದೃಶ್ಯಾವಳಿಯನ್ನು ವಿವಿಧ ನಿಲ್ದಾಣಗಳಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇಡಲಾಗುತ್ತಿದೆ. ಹೊಸ ಎಸ್‌ಒಸಿ ಕಾರ್ಯಾರಂಭ ಬಳಿಕ ಈ ದೃಶ್ಯಾವಳಿಗಳು ಎಲ್ಲವೂ ಒಂದೇ ಕೇಂದ್ರಕ್ಕೆ ಸಂಪರ್ಕಗೊಳ್ಳಲಿದ್ದು, ಎಲ್ಲ ನಿಲ್ದಾಣಗಳು ಮತ್ತು ಬೋಗಿಗಳ ನಿಗಾವನ್ನು ಒಂದೇ ಸ್ಥಳದಿಂದ ನಡೆಸಲಾಗುತ್ತದೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಅಹಿತಕರ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಲಿದೆ.

ಮೆಟ್ರೋ ವ್ಯವಸ್ಥೆಯ ಸೈಬರ್‌ ರಕ್ಷಣೆಗಾಗಿ ನೂತನ ಕ್ರಮ

ಬೆಂಗಳೂರು ಮೆಟ್ರೋ ವ್ಯವಸ್ಥೆ ಸಂಪೂರ್ಣವಾಗಿ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನ ಮೇಲೆ ಆಧಾರಿತವಾಗಿದೆ. ಸಿಗ್ನಲಿಂಗ್‌, ಟ್ರ್ಯಾಕ್‌ ನಿರ್ವಹಣೆ, ಟಿಕೆಟ್‌ ವಿತರಣಾ ವ್ಯವಸ್ಥೆ, ಪ್ರಯಾಣಿಕರ ಮಾಹಿತಿಯ ಸಂಗ್ರಹಣೆ  ಎಲ್ಲವೂ ಕಂಪ್ಯೂಟರ್‌ ನೆಟ್‌ವರ್ಕ್‌ಗಳ ಮೂಲಕ ನಿರ್ವಹಿಸಲಾಗುತ್ತದೆ. ಇಂತಹ ವ್ಯವಸ್ಥೆಗಳು ಸೈಬರ್‌ ಅಪಾಯಗಳಿಗೆ ಅತ್ಯಂತ ಅಸುರಕ್ಷಿತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಹೊಸ ಎಸ್‌ಒಸಿ ಮೂಲಕ ಎಲ್ಲಾ ವ್ಯವಸ್ಥೆಯು ಸೈಬರ್‌ ಭದ್ರತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನುರಿತ ಸೈಬರ್‌ ತಜ್ಞರು ದಿನದ 24 ಗಂಟೆ ಕಾರ್ಯನಿರ್ವಹಿಸಿ ಯಾವುದೇ ಹ್ಯಾಕಿಂಗ್‌ ಅಥವಾ ಸಾಫ್ಟ್‌ವೇರ್‌ ದಾಳಿ ಸಂಭವಿಸಿದರೆ ತಕ್ಷಣ ತಡೆಯುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಈ ಕೇಂದ್ರವು ಫೈರ್‌ವಾಲ್‌ ವ್ಯವಸ್ಥೆ, ರಿಯಲ್‌ ಟೈಮ್‌ ಟ್ರಾಫಿಕ್‌ ವಿಶ್ಲೇಷಣೆ, ಮಲ್ಟಿ ಲೇಯರ್‌ ಸೆಕ್ಯೂರಿಟಿ ಸಾಫ್ಟ್‌ವೇರ್‌ಗಳೊಂದಿಗೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಸೈಬರ್‌ ದಾಳಿ ನಡೆದರೆ ತಕ್ಷಣ ಅದರ ಮೂಲವನ್ನು ಪತ್ತೆಹಚ್ಚಬಹುದು ಎಂದು  ಮೆಟ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್‌ ಚವ್ಹಾಣ್‌ ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ. 

ಹೊಸ ಭದ್ರತಾ ಕೇಂದ್ರದಲ್ಲಿ ಅತಿ ಉನ್ನತ ಮಟ್ಟದ ಸರ್ವರ್‌ಗಳು, ಡಿಜಿಟಲ್‌ ಸ್ಟೋರೇಜ್‌ ಸಿಸ್ಟಮ್‌ಗಳು ಮತ್ತು ತ್ವರಿತ ಎಚ್ಚರಿಕೆ ವ್ಯವಸ್ಥೆ ಅಳವಡಿಸಲಾಗುವುದು. ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದರೆ ಸಿಬ್ಬಂದಿಗೆ ತಕ್ಷಣ ಎಚ್ಚರಿಕೆ ಸಂದೇಶ ತಲುಪುತ್ತದೆ ಎಂದಿದ್ದಾರೆ. 

ವಿದೇಶಿ ಘಟನೆಗಳಿಂದ ಪಾಠ

ವಿದೇಶಗಳಲ್ಲಿ ಸೈಬರ್ ದಾಳಿಯ ಮೂಲಕ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಿದ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟುಮಾಡಿದ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಸೈಬರ್ ಭದ್ರತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ದೇಶದ 'ಅರ್ಬನ್ ರೈಲು ಸಮಾವೇಶ'ದಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಬಿಎಂಆರ್‌ಸಿಎಲ್ ಈ ಮಹತ್ವದ ಹೆಜ್ಜೆ ಇಟ್ಟಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಮೂರು ತಿಂಗಳೊಳಗೆ ಎಸ್‌ಒಸಿ ಸ್ಥಾಪನೆಯಾಗಲಿದೆ ಎಂಬುದು ಮೆಟ್ರೋ ಅಧಿಕಾರಿಗಳ ಅಭಿಪ್ರಾಯವಾಗಿದೆ. 

2025ರ ಏ.28ರಂದು ಸ್ಪೇನ್‌ ಮತ್ತು ಪೋರ್ಚುಗಲ್‌ನಲ್ಲಿ ಸಂಭವಿಸಿದ ವಿದ್ಯುತ್‌ ಕಡಿತದಿಂದಾಗಿ 1.5 ಲಕ್ಷಕ್ಕೂ ಹೆಚ್ಚು ಮೆಟ್ರೋ ಪ್ರಯಾಣಿಕರು ಪರದಾಡಿದರು. ತಾಂತ್ರಿಕ ದೋಷವೇ ಕಾರಣವಾಗಿರಬಹುದು ಅಥವಾ ಸೈಬರ್‌ ದಾಳಿಯೂ ಸಾಧ್ಯ ಇರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಈ ಘಟನೆಯು ವಿಶ್ವದ ಸಾರಿಗೆ ಸಂಸ್ಥೆಗಳಿಗೆ ಸೈಬರ್‌ ಭದ್ರತೆಯ ಮಹತ್ವವನ್ನು ಸಾರಿ ಹೇಳಿತು. 

ಮುನ್ನಡೆಗೆ ಹೊಸ ಹಾದಿ

ಬಿಎಂಆರ್‌ಸಿಎಲ್‌ನ ಈ ಹೊಸ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ, ದೇಶದಲ್ಲಿನ ಇತರೆ ಮೆಟ್ರೋ ಸಂಸ್ಥೆಗಳಾದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌ ಸಹ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. ಮೆಟ್ರೋ ಸೇವೆಗಳ ಸುರಕ್ಷತೆ, ಪ್ರಯಾಣಿಕರ ವಿಶ್ವಾಸ ಮತ್ತು ತಾಂತ್ರಿಕ ದಕ್ಷತೆ ಎಲ್ಲಾಒಂದೇ ಸಮನಾಗಿ ಬೆಳೆಯಲು ಈ ಎಸ್‌ಒಸಿ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. 

ಈಗಾಗಲೇ ಪ್ರಾಯೋಗಿಕ ಜಾರಿ

ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವಿನ ಆರು ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಸುಧಾರಿತ ಸಿಸಿಟಿವಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗುರುತಿಸಲು 'ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್' ತಂತ್ರಜ್ಞಾನ ಮತ್ತು ಶಂಕಾಸ್ಪದ ಚಟುವಟಿಕೆಗಳನ್ನು ಪತ್ತೆಹಚ್ಚಲು ಎಐ ಆಧಾರಿತ ವಿಡಿಯೋ ವಿಶ್ಲೇಷಣಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಈಗ ಇಡೀ ಮೆಟ್ರೋ ಜಾಲಕ್ಕೆ ವಿಸ್ತರಿಸಲಾಗುತ್ತಿದೆ. ಪ್ರತಿದಿನ ಸರಾಸರಿ 10 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ. ಪ್ರಯಾಣಿಕರಿಗೆ ಉತ್ತಮ ಸಾರಿಗೆಯ ಜೊತೆಗೆ ಅತ್ಯುತ್ತಮ ಸೈಬರ್ ಸುರಕ್ಷತೆಯನ್ನು ಒದಗಿಸುವುದು ನಮ್ಮ ಆದ್ಯತೆಯಾಗಿರುತ್ತದೆ ಎಂಬುದು ಮೆಟ್ರೋದ ಅಭಿಪ್ರಾಯವಾಗಿದೆ. 

Tags:    

Similar News