
ಸಚಿವ ದಿನೇಶ್ ಗುಂಡೂರಾವ್.
ಕೋವಿಡ್ ಲಸಿಕೆ ಹೃದಯಾಘಾತಕ್ಕೆ ಕಾರಣವಲ್ಲ, ಸೋಂಕು ಕಾರಣವಾಗಿರಬಹುದು: ದಿನೇಶ್ ಗುಂಡೂರಾವ್
ಕೋವಿಡ್ ಸೋಂಕಿನ ನಂತರ ಮಧುಮೇಹ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದು ಹೃದಯಾಘಾತಕ್ಕೆ ಒಂದು ಕಾರಣ ಎಂದು ಸಮಿತಿ ತಿಳಿಸಿದೆ.
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೃದಯಾಘಾತಗಳಿಗೆ ಕೋವಿಡ್ ಸೋಂಕೂ ಕೂಡ ಕಾರಣವಾಗಿರುಬಹುದೇ ಹೊರತು ಲಸಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳು ಮತ್ತು ಕೋವಿಡ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಈ ಸಂಬಂಧ ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಕೋವಿಡ್ ನಂತರ ಸ್ವಲ್ಪ ಮಟ್ಟಿಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದನ್ನು ದೃಢಪಡಿಸಿದೆ. ಆದರೆ, ಇದು ಲಸಿಕೆಯಿಂದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಕೋವಿಡ್ ಸೋಂಕಿನ ನಂತರ ಮಧುಮೇಹ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದು ಹೃದಯಾಘಾತಕ್ಕೆ ಒಂದು ಕಾರಣ ಎಂದು ಸಮಿತಿ ತಿಳಿಸಿದೆ. ಜನರ ಜೀವನಶೈಲಿ, ಬಿಪಿ (ರಕ್ತದೊತ್ತಡ) ಹೆಚ್ಚಳವೂ ಹೃದಯಾಘಾತಕ್ಕೆ ಒಂದು ಕಾರಣವಾಗಿ ಪರಿಣಮಿಸಿದೆ. ಕೋವಿಡ್ ಸೋಂಕಿನಿಂದ ದೇಹದ ಮೇಲಾಗುವ ಪರಿಣಾಮಗಳು, ಇತರೇ ಔಷಧಿಗಳ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಟಿವಿ ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಕೂಡ ಹೃದಯಾಘಾತಕ್ಕೆ ಕಾರಣಗಳಾಗಿವೆ ಎಂದು ವರದಿ ಹೇಳಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಠಾತ್ ಮರಣಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಹಠಾತ್ ಮರಣಗಳಿಗೆ ಕಾರಣವಾಗುವ ಕೆಲವು ಕಾಯಿಲೆಗಳನ್ನು 'ಅಧಿಸೂಚಿತ ಕಾಯಿಲೆಗಳು' ಎಂದು ಘೋಷಿಸಲಾಗುವುದು. ಇದು ಈ ಕಾಯಿಲೆಗಳ ಕುರಿತು ಮಾಹಿತಿ ಸಂಗ್ರಹಣೆ ಮತ್ತು ನಿಯಂತ್ರಣಕ್ಕೆ ಸಹಾಯಕವಾಗಲಿದೆ. ಆಸ್ಪತ್ರೆಯ ಹೊರಗೆ ಸಂಭವಿಸುವ ಹಠಾತ್ ಮರಣಗಳಿಗೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಇದು ಮರಣದ ನಿಖರ ಕಾರಣವನ್ನು ಪತ್ತೆಹಚ್ಚಲು ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಅವರು ತಿಳಿಸಿದರು.
15 ವರ್ಷದೊಳಗಿನ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಹೃದಯ ಸಂಬಂಧಿ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗುವುದು. ಇದು ಬಾಲ್ಯದಲ್ಲಿಯೇ ಹೃದಯ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ನೆರವಾಗಲಿದೆ. ಹೃದಯಾಘಾತ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುವುದು. ಈ ವರ್ಷ ನೈತಿಕ ಪಾಠಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಪುನೀತ್ ರಾಜ್‌ಕುಮಾರ್ ವಿಜಯಜ್ಯೋತಿ ಯೋಜನೆ ವಿಸ್ತರಣೆ
ಪ್ರಸ್ತುತ 86 ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 'ಪುನೀತ್ ರಾಜ್‌ಕುಮಾರ್ ವಿಜಯಜ್ಯೋತಿ ಯೋಜನೆ'ಯನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು. ಈ ಯೋಜನೆಯಡಿ ಅಳವಡಿಸಲಾಗಿರುವ ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲೇಟರ್‌ಗಳು (AEDs) ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮತ್ತು ಅವುಗಳನ್ನು ಬಳಸಲು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುವುದು. ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲೂ AED ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಆರೋಗ್ಯ ತಪಾಸಣೆ
ಸರ್ಕಾರಿ ನೌಕರರು ಮತ್ತು ಗುತ್ತಿಗೆದಾರರಿಗೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು.ಖಾಸಗಿ ಕಂಪನಿಗಳ ಸಿಬ್ಬಂದಿಗೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಎಲ್ಲಾ ಶಿಫಾರಸುಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.