ಭದ್ರಾ ನಾಲೆಗೆ ಉರುಳಿದ ಕಾರು: ದಾವಣಗೆರೆಯ ಇಬ್ಬರು ಜಲಸಮಾಧಿ

ದಾವಣಗೆರೆ ನಗರದ ನಿವಾಸಿಗಳಾದ ಮಲ್ಲಿಕಾರ್ಜುನ್ (29) ಮತ್ತು ಸಿದ್ದೇಶ್ (38) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Update: 2025-11-09 04:58 GMT
Click the Play button to listen to article

ಮಂಗಳೂರು ಪ್ರವಾಸ ಮುಗಿಸಿ ದಾವಣಗೆರೆಗೆ ಮರಳುತ್ತಿದ್ದ ಆರು ಸ್ನೇಹಿತರಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಉರುಳಿದ ಪರಿಣಾಮ, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದ ಬಳಿ ಭಾನುವಾರ ನಸುಕಿನಲ್ಲಿ ನಡೆದಿದೆ.

ದಾವಣಗೆರೆ ನಗರದ ನಿವಾಸಿಗಳಾದ ಮಲ್ಲಿಕಾರ್ಜುನ್ (29) ಮತ್ತು ಸಿದ್ದೇಶ್ (38) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೂಳೆಕೆರೆ ಸಮೀಪದ ಭದ್ರಾ ನಾಲೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಕಾರು ಸಾಗುತ್ತಿದ್ದಾಗ, ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ನಿಯಂತ್ರಣ ಕಳೆದುಕೊಂಡ ಕಾರು ನೇರವಾಗಿ ನಾಲೆಗೆ ಉರುಳಿದೆ. ತಕ್ಷಣವೇ ಕಾರಿನ ಬಾಗಿಲು ತೆರೆದ ನಾಲ್ವರು ಈಜಿ ಹೊರಬಂದಿದ್ದಾರೆ.

ಘಟನೆಯಲ್ಲಿ ಮಲ್ಲಿಕಾರ್ಜುನ್ ಅವರ ಮೃತದೇಹ ಹೊಸೂರು ಬಳಿ ಪತ್ತೆಯಾಗಿದ್ದು, ನಾಲೆ ನೀರಿನಲ್ಲಿ ಕೊಚ್ಚಿಹೋದ ಸಿದ್ದೇಶ್ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳೀಯರ ನೆರವಿನಿಂದ ಕಾರನ್ನು ನಾಲೆಯಿಂದ ಹೊರತೆಗೆಯಲಾಗಿದೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Tags:    

Similar News