ರಾಜಕಾರಣದ ʼಹಾವು-ಏಣಿ ಆಟʼದಲ್ಲಿ 'ಏಣಿಯ ಮೆಟ್ಟಿಲುʼ ಏರಿರುವ ಯಡಿಯೂರಪ್ಪ
ಯಡಿಯೂರಪ್ಪ ಈಗ ಕರ್ನಾಟಕ ಬಿಜೆಪಿಗೆ ಅನಿವಾರ್ಯ;
ರಾಜಕಾರಣದ ಚಕ್ರದಲ್ಲಿ ಒಂದು ಸುತ್ತು ಮುಗಿಸಿ, ಮತ್ತೆ ಬಂದಲ್ಲಿಗೆ ಬಂದು ನಿಂತಿರುವ ಯಡಿಯೂರಪ್ಪ ಈಗ ಕರ್ನಾಟಕ ಬಿಜೆಪಿಗೆ ಅನಿವಾರ್ಯ ಎಂದೇ ನಂಬಲಾಗಿದೆ. ಲಿಂಗಾಯತ ಕೋಮಿನ ಅಘೋಷಿತ ನಾಯಕರೆಂದು ಬಿಂಬಿಸಿಕೊಂಡಿರುವ ಯಡಿಯೂರಪ್ಪ ಲೋಕಸಭಾ ಚುನಾವಣೆ ಮುಗಿದ ನಂತರವೂ ರಾಜ್ಯ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವರೇ ಎಂದು ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಕಾರಣರಾದ ಬಿ.ಎಸ್. ಯಡಿಯೂರಪ್ಪ, ಇತ್ತೀಚಿನ ವರ್ಷಗಳ ರಾಜಕೀಯದ ಚದುರಂಗದಾಟದಲ್ಲಿ ʻಹಣ್ಣೆಲೆ ಇನ್ನೇನು ಉದುರಿ ಮಣ್ಣಾಗುತ್ತದೆʼ ಎಂದು ರಾಜ್ಯದ ರಾಜಕಾರಣ ವಲಯ ಭಾವಿಸುವ ವೇಳೆಗೆ ʻಮತ್ತೆ ಚಿಗುರಿ ಹಸಿರಿನಿಂದ ನಳನಳಸುವ ಮರವಾಗಿʼ ನಿಂತಿದ್ದಾರೆ. ಪಕ್ಷಕ್ಕೆ ತಾವು ಸಲ್ಲಿಸಿದ ಸೇವೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಜ್ಜಾಗಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೇಲಗೈ ಸಾಧಿಸಿದರೂ, ತಮ್ಮ ಒಂದು ಕಾಲದ ಆಪ್ತರ ವಿರೋಧವನ್ನು ಕಟ್ಟಿಕೊಂಡು, ಕುಟುಂಬ ರಾಜಕಾರಣದ ಅಪಖ್ಯಾತಿ ಹೊತ್ತು ನಿಂತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅವರು ಬೆಳೆಸಿದವರೇ ಅವರ ವಿರುದ್ಧ ನಿಂತಿದ್ದಾರೆ. ಈ ನಡುವೆ ಯಡಿಯೂರಪ್ಪ ವಿರುದ್ಧ ಯುವತಿಯೊಬ್ಭರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿ ,ಯಡಿಯೂರಪ್ಪ ಮತ್ತು ಪಕ್ಷ ಎರಡೂ ಮುಜುಗರದ ಸ್ಥಿತಿಯನ್ನು ಎದುರಿಸುವಂತಾಗಿದೆ. ಅದರಲ್ಲೂ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಬಿಜೆಪಿಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ನೈತಿಕವಾಗಿ ತಲೆ ಎತ್ತಿ ನಿಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿಯ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ರಾಜಕೀಯ ಜೀವನ ಸಂಪೂರ್ಣ ಒಂದು ಸುತ್ತು ಸುತ್ತಿ ಮಗಿಸಿದೆ. ಎಂಬತ್ತೊಂದು ವರ್ಷದ ಯಡಿಯೂರಪ್ಪ ನಲವತ್ತು ವರ್ಷಗಳ ಕಾಲ ತಾವು, ಇನ್ನಿತರ ನಾಯಕರೊಂದಿಗೆ ಸೇರಿ ಕಟ್ಟಿದ ಪಕ್ಷ, ಅವರನ್ನು ಒಮ್ಮೆ ಒಪ್ಪಿಕೊಂಡಂತೆ, ಒಮ್ಮೆ ತಿರಸ್ಕರಿಸಿದಂತೆ, ಮತ್ತೊಮ್ಮೆ ಪಕ್ಕಕ್ಕೆ ತಳ್ಳಿದಂತೆ ಬಳಸಿಕೊಳ್ಳುತ್ತಿರುವುದನ್ನು ಅರಗಿಸಿಕೊಂಡಿದ್ದಾರೆ. ಈಗ ತಮ್ಮ ಕಾಲ ಮುಗಿದು, ತಮ್ಮ ಮಕ್ಕಳಾದ ವಿಜಯೇಂದ್ರ ಮತ್ತು ರಾಘವೇಂದ್ರ, ತಮ್ಮನ್ನು ನಂಬಿರುವ ಶೋಭಾ ಕರಂದ್ಲಾಜೆ ಅವರ ರಾಜಕೀಯ ಬದುಕು ಕಟ್ಟಿಕೊಡಲು ಸರ್ವ ಪ್ರಯತ್ನ ಮಾಡಿದ್ದಾರೆ: ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
2019ರಲ್ಲಿ ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಮರಳಲು ಆಡಳಿತಾರೂಢ ಕಾಂಗ್ರೆಸ್-ಜನತಾ ದಳ (ಜಾತ್ಯತೀತ)ದ ನಾಯಕರನ್ನು ಪಕ್ಷಾಂತರಗೊಳಿಸಿದ್ದು ರಾಜ್ಯ ರಾಜಕೀಯ ಇತಿಹಾಸದ ಪ್ರಮುಖ ಅಧ್ಯಾಯ. 2008ರಲ್ಲಿ ಒಂದು ವಾರ ಮಾತ್ರ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ. 2009ರಲ್ಲಿ ಹಾಗೂ 2019ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಶಿಷ್ಯ ಬಸವರಾಜ ಬೊಮ್ಮಾಯಿಗೆ ಸ್ಥಾನ ಬಿಟ್ಟುಕೊಟ್ಟು ನೇಪಥ್ಯಕ್ಕೆ ಸರಿದರು ಎಂದು ಭಾವಿಸುವಷ್ಟರಲ್ಲಿ ಮತ್ತೆ ಮುನ್ನೆಲೆಗೆ ಬಂದು ನಿಂತರು. ಅವರು ಹೀಗೆ, ಇಳಿದು ಏರುವ ಆಟದಲ್ಲಿ ಮತ್ತೆ ಏಣಿಯ ತುದಿ ಮಟ್ಟಿಲು ಹತ್ತಲು ಕಾರಣ ಯಡಿಯೂರಪ್ಪ ಪ್ರಬಲ ಲಿಂಗಾಯತ ಕೋಮಿಗೆ ಸೇರಿರುವುದೇ ಎಂದು ಬೇರೆಯಾಗಿ ಹೇಳಬೇಕಿಲ್ಲ.
ತಪ್ಪಿದ ಅವಕಾಶ
81 ವರ್ಷ ವಯಸ್ಸಿನ ಅವರ ಜೀವನದಲ್ಲಿ ತಪ್ಪಿದ ಅವಕಾಶಗಳು ಒಂದು ನಿರಂತರವಾದ ಅಂಶವಾಗಿದೆ. 1980ರಲ್ಲಿ ಪಕ್ಷದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿದರು. 1983 ರಲ್ಲಿ ಬಿಜೆಪಿ ಕೇವಲ 17 ಸ್ಥಾನ ಗಳಿಸಿತು. ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಹಾಕಲು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕಾಯಿತು. ನಂತರದ ಎರಡು ದಶಕಗಳ ಕಾಲ ಕರ್ನಾಟಕವು ಕಾಂಗ್ರೆಸ್ ಮತ್ತು ಜನತಾದಳದ ಅಂಗಳವಾಯಿತು. ಬಿಜೆಪಿ 2004 ರಲ್ಲಿ 224 ಸ್ಥಾನಗಳಲ್ಲಿ 79 ಸ್ಥಾನ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ವಿರೋಧ ಪಕ್ಷವಾಗಿ ಕುಳಿತುಕೊಳ್ಳಬೇಕಾಯಿತು. ಕಾಂಗ್ರೆಸ್ ಮತ್ತು ಜನತಾ ದಳ ಒಟ್ಟಾಗಿ ಸರ್ಕಾರ ರಚಿಸುವುದನ್ನು ನೋಡಬೇಕಾಗಿ ಬಂದಿತು. ಬಿಜೆಪಿ ಅಕ್ಷರಶಃ ಒಣಗಲಾರಂಭಿಸಿತು.
ಕಾಲ ಕೈ ಜಾರಿ ಹೋಗುತ್ತಿದೆ ಎಂದು ಯಡಿಯೂರಪ್ಪ ಅವರಿಗೆ ಅನ್ನಿಸಲಾರಂಭಿಸಿತು. ವಯಸ್ಸಾಗುತ್ತಿತ್ತು ಮತ್ತು ತಾಳ್ಮೆ ಕಳೆದುಕೊಳ್ಳುತ್ತಿದ್ದರು. ಬಿಜೆಪಿಗೆ 113 ಸ್ಥಾನ ಎಂದಿಗೂ ಬರುವುದಿಲ್ಲ ಎನ್ನಿಸಲಾರಂಭಿಸಿತ್ತು. ಅವರು ತಮ್ಮ ಶೈಲಿಯನ್ನು ಬದಲಾಯಿಸಿದರು, ಕ್ರಿಕೆಟ್‌ನಲ್ಲಿ ಮುಕ್ತವಾಗಿ ಬ್ಯಾಟ್ ಬೀಸುವ ಬದಲು ರಕ್ಷಣಾತ್ಮಕವಾಗಿ ಆಡುವಂತೆ- ಅದು ಫಲ ನೀಡಿತು.
ಸಕಲ ತಂತ್ರಗಳ ಬಳಕೆ
2004ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದರೂ, ಜೆಡಿ (ಎಸ್)ನಲ್ಲಿ ಆಂತರಿಕ ಸಮಸ್ಯೆಗಳಿದ್ದವು. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯವಿತ್ತು. ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದು, ಆ ಸ್ಥಾನದ ಮೇಲೆ ಕುಮಾರಸ್ವಾಮಿ ಬಯಸಿದ್ದರು. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಮಿಷ ಒಡ್ಡಿದ ಬಿಎಸ್‌ವೈ, ಕಾಂಗ್ರೆಸ್ ತೊರೆಯುವಂತೆ ಮಾಡಿದರು. 2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಉಪ ಮುಖ್ಯಮಂತ್ರಿಯಾದರು. 20 ತಿಂಗಳ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಿದ್ಧರಾದರು. ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ, ಕುಮಾರಸ್ವಾಮಿ ಅವರು 20 ತಿಂಗಳ ಬಳಿಕ ಕೆಳಗಿಳಿಯಬೇಕಿತ್ತು. ಆದರೆ, ನವೆಂಬರ್ 2007 ರಲ್ಲಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರ ಅಧಿಕಾರಾವಧಿ ಕೇವಲ ಒಂದು ವಾರ ಮಾತ್ರ. ಕುಮಾರಸ್ವಾಮಿ ಬೆಂಬಲ ಹಿಂಪಡೆದಿದ್ದರಿಂದ, ಸರ್ಕಾರ ಪತನಗೊಂಡಿತು. ಇದೊಂದು ಯಾವುದೇ ಚಲನಚಿತ್ರವನ್ನು ಮೀರಿಸಿದ ತಿರುವಾಗಿತ್ತು.
ಯಡಿಯೂರಪ್ಪ ಅವರು ತಮ್ಮ ಎದುರಾಳಿಯನ್ನು ಸೋಲಿಸುವ ರಾಜಕೀಯ ಛಲವನ್ನು ಹೊಂದಿದ್ದಾರೆಂದು ಭಾವಿಸಿದ್ದರೆ, ಅವರು ಆಟದಲ್ಲಿ ಹೆಚ್ಚು ಸಂಪೂರ್ಣ ಪ್ರತಿಸ್ಪರ್ಧಿಗಳನ್ನು ಲೆಕ್ಕಿಸಲಿಲ್ಲ. ಕುರ್ಚಿಯನ್ನು ಏರುವ ಅವರ ಪ್ರಯತ್ನವು ಕಣ್ಣೀರಿನಲ್ಲಿ ಕೊನೆಗೊಂಡಿತು. ಆದರೆ, ಅಂತಿಮವಾಗಿ ಮತದಾರರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಕುಮಾರಸ್ವಾಮಿ ಅವರು ಪರಸ್ಪರ ಒಪ್ಪಂದಕ್ಕೆ ಮುಜುಗರವಿಲ್ಲದೆ ದ್ರೋಹ ಬಗೆದಿದ್ದರು. ಕಾಂಗ್ರೆಸ್ ಬೆಂಬಲದೊಂದಿಗೆ ಮುಂದುವರಿಯಲು ನಿರ್ಧರಿಸಿದ್ದರು. 2008 ರ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತಕ್ಕೆ 3 ಸ್ಥಾನ ಕಡಿಮೆಯಾಯಿತು.
ಒಂದು ದೈವಿಕ ತಿರುವು
ಹೋರಾಟಗಾರರಾಗಿ ಯಡಿಯೂರಪ್ಪನವರ ಕೌಶಲ್ಯಗಳು, ಕುತಂತ್ರದೊಂದಿಗೆ ಸೇರಿಕೊಂಡವು. ಅವರು ಸ್ವತಂತ್ರ ಶಾಸಕರ ಬೆಂಬಲದಿಂದ 2008 ರಲ್ಲಿ ಮುಖ್ಯಮಂತ್ರಿಯಾದರು. ಆಗ ಅವರಿಗೆ 65 ವರ್ಷ; ರಾಜಕೀಯವಾಗಿ ಸ್ವೀಕಾರಾರ್ಹ ಎನ್ನಬಹುದಾದ ವಯಸ್ಸಿನಲ್ಲಿ ತಮ್ಮ ಗುರಿಯನ್ನು ಸಾಧಿಸಿದರು. ಸ್ವಂತ ಸಾಮರ್ಥ್ಯದ ಬಗ್ಗೆ ಖಾತ್ರಿಯಿಲ್ಲವೇನೋ ಎಂಬಂತೆ ದೇವರು, ಮಠಗಳು ಮತ್ತು ಜೋತಿಷ್ಯದ ಕಡೆಗೆ ತಿರುಗಿ, ಅವು ತಮ್ಮ ರಾಜಕೀಯ ಏಣಿಯನ್ನು ಏರಲು ಸಹಾಯ ಮಾಡುತ್ತವೆ ಎಂದುಕೊಂಡರು. ಅಕ್ಟೋಬರ್ 2007ರಲ್ಲಿ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹೆಸರನ್ನು ಯಡಿಯೂರಪ್ಪದಿಂದ ಯಡ್ಡಿಯೂರಪ್ಪ ಎಂದು ಬದಲಿಸಿಕೊಂಡರು. ಕಾಕತಾಳೀಯ ಎಂಬಂತೆ 2007ರಲ್ಲಿ ಮೊದಲ ಬಾರಿಗೆ ಒಂದು ವಾರ ಕಾಲ ಮತ್ತು 2008ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಎರಡನೇ ಬಾರಿ ಪೂರ್ಣಾವಧಿ ಪೂರೈಸುವ ಮುನ್ನವೇ ರಾಜೀನಾಮೆ ನೀಡಬೇಕಾಯಿತು. ಭ್ರಷ್ಟಾಚಾರದ ಆರೋಪದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು. ಜುಲೈ 2019 ರಲ್ಲಿ ಮತ್ತೊಮ್ಮೆ ಅವಕಾಶ ಪಡೆದಾಗ, ತಮ್ಮ ಹಿಂದಿನ ಹೆಸರಿಗೆ ಮರಳಿದರು. ಆದರೆ, ಅದು ಕೂಡ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ.
ದೃಢವಾದ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಯಡಿಯೂರಪ್ಪ, ಪ್ರತಿಸ್ಪರ್ಧಿಗಳು ತಮಗೆ ತೊಂದರೆ ನೀಡಲು ಪಾರಮಾರ್ಥಿಕ ಶಕ್ತಿಗಳನ್ನು ಬಳಸುತ್ತಾರೆ ಎಂದು ಶಂಕಿಸಿದ್ದೂ ಇದೆ. ಕೆಟ್ಟ ಪರಿಣಾಮಗಳನ್ನು ತಟಸ್ಥಗೊಳಿಸಲು ಮೂರು ದಿನ ಕಾಲ ನೆಲದ ಮೇಲೆ ಮಲಗುವಂತೆ ಹಾಗೂ 12 ದಿನ ನಗ್ನವಾಗಿ ನದಿಯಲ್ಲಿ ಸೂರ್ಯನಮಸ್ಕಾರ ಮಾಡಲು ಅವರ ವೈಯಕ್ತಿಕ ಜ್ಯೋತಿಷಿ ಹೇಳಿದ್ದರು ಎನ್ನಲಾಗಿದೆ. ಅವರು ಇದನ್ನೆಲ್ಲ ಹೇಗೆ ಮಾಡಿದರು ಎಂಬುದು ಸ್ಪಷ್ಟವಿಲ್ಲ. 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ಇದು.
ಮುಖ್ಯಮಂತ್ರಿ ಅವರ ಕುಟುಂಬದ ಪುರೋಹಿತ ಭಾನುಪ್ರಕಾಶ್ ಶರ್ಮಾ ಅವರು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನೈವೇದ್ಯ ನೀಡಬೇಕು ಮತ್ತು ಗಣಪತಿ ಹೋಮ ಮಾಡಿ, ಒಂದು ಲಕ್ಷ ಮೋದಕ ನೈವೇದ್ಯ ನೀಡುವಂತೆ ಯಡಿಯೂರಪ್ಪ ಅವರಿಗೆ ಹೇಳಿದ್ದೆ ಎಂದು ಹೇಳಿಕೊಂಡಿದ್ದರು. ಯಡಿಯೂರಪ್ಪ ಅವರಿಗೆ ಮಾಟಮಂತ್ರದಿಂದ ರಕ್ಷಣೆ ನೀಡಲು ಅವರ ಸಂಬಂಧಿಕರು ಮಂಡ್ಯ ಜಿಲ್ಲೆಯಲ್ಲಿ ಏಕಾದಶಿ ಮಹಾ ರುದ್ರ ಯಾಗ ನಡೆಸಿಕೊಟ್ಟಿದ್ದರು ಎಂದು ವರದಿಯಾಗಿದೆ.
ಶಿವಮೊಗ್ಗದ ಮಾತುಗಾರ
ದಕ್ಷಿಣ ಭಾರತದ ಸಮಾಜವಾದಿ ಭದ್ರಕೋಟೆಯಾದ ಶಿವಮೊಗ್ಗದಲ್ಲಿ ಅಲೌಕಿಕ ಶಕ್ತಿಯ ಬಗ್ಗೆ ಬಲವಾದ ನಂಬಿಕೆ ಹೊಂದಿರುವ ಯಡಿಯೂರಪ್ಪ ರಾಜಕಾರಣಿಯಾಗಿ ಹೊರಹೊಮ್ಮಿದ್ದು ವಿಪರ್ಯಾಸ. ಶಿವಮೊಗ್ಗ ಜಿಲ್ಲೆಯ ಕಾಗೋಡು ಗ್ರಾಮದಲ್ಲಿ 1950ರ ದಶಕದಲ್ಲಿ ಭೂರಹಿತರು ಭೂಮಿಗಾಗಿ ಹೋರಾಡಿದ್ದು, ಸಮಾಜವಾದಿ ಚಳವಳಿಯ ತವರು ಎಂದು ಪರಿಗಣಿಸಲಾಗಿದೆ. ಸಮಾಜವಾದಿ ಮುಖಂಡ ಶಾಂತವೇರಿ ಗೋಪಾಲ ಗೌಡ ಈ ಜಿಲ್ಲೆಯವರು. ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್ ಕೂಡ ಶಿವಮೊಗ್ಗದವರು. ಯಡಿಯೂರಪ್ಪ 1960ರ ದಶಕದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೊದಲ ದರ್ಜೆ ಗುಮಾಸ್ತರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಆದರೆ, ಹೆಚ್ಚು ಕಾಲ ಉಳಿದುಕೊಳ್ಳಲಿಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದ ಅವರು ಸರ್ಕಾರಿ ಕೆಲಸವನ್ನು ತ್ಯಜಿಸಿ, ಶಿಕಾರಿಪುರದ ಅಕ್ಕಿ ಗಿರಣಿಯಲ್ಲಿ ಸೇರಿಕೊಂಡರು; ಅದನ್ನೂ ಬಿಟ್ಟು ಹಾರ್ಡ್ವೇರ್ ಅಂಗಡಿ ತೆರೆದರು. 1970ರಲ್ಲಿ ಜನಸಂಘದ ಶಿಕಾರಿಪುರ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ದಶಕದ ನಂತರ ಶಿಕಾರಿಪುರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದರು.
ಇಲ್ಲಿಂದ ಅವರ ಬೆಳವಣಿಗೆ ತ್ವರಿತವಾಗಿತ್ತು. ತಾಲ್ಲೂಕಿನಾದ್ಯಂತ ಸೈಕಲ್ ಸವಾರಿ ಮಾಡುತ್ತ, ಸಂಘಟನೆ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಅವರಿಗೆ ಪ್ರತಿಸ್ಪರ್ಧಿಗಳು ಇರಲಿಲ್ಲವಾದ್ದರಿಂದ, 1985 ರಲ್ಲಿ ಬಿಜೆಪಿಯ ಶಿವಮೊಗ್ಗ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಮೂರು ವರ್ಷಗಳ ನಂತರ ಪಕ್ಷದ ಕರ್ನಾಟಕ ರಾಜ್ಯ ಮುಖ್ಯಸ್ಥರಾದರು. ಪಕ್ಷ ದೇಶಾದ್ಯಂತ ಬೆಳೆಯಿತು. ಆಕ್ರಮಣಕಾರಿಯಾಗಿ ಆದರೆ, ಸರಳವಾಗಿ ಮಾತನಾಡುವ ಯಡಿಯೂರಪ್ಪ ಗೆಳೆಯರಾದ ಸಿದ್ದರಾಮಯ್ಯ ಅವರಂತೆಯೇ ʼನೆಲದ ನಾಯಕʼ ಎಂದು ಖ್ಯಾತಿ ಗಳಿಸಿದ್ದರು. ಇದು ಅವರನ್ನು ಕೆಲವೊಮ್ಮೆ ತೊಂದರೆಗೆ ಸಿಲುಕಿಸಿದೆ; 2008ರಲ್ಲಿ ಅಕ್ರಮ ಆರೋಪದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ʻಹಿಂದಿನ ಮುಖ್ಯಮಂತ್ರಿಗಳು ಕೂಡ ಇದನ್ನು ಮಾಡಿದ್ದರುʼ ಎಂದು ಪ್ರತಿಕ್ರಿಯಿಸಿದ್ದರು.
ಮುಖ್ಯಮಂತ್ರಿಯಾದ ಬಳಿಕ ಡಿನೋಟಿಫಿಕೇಶನ್ ಮತ್ತು ಬಳ್ಳಾರಿಯ ಕಬ್ಬಿಣದ ಅದಿರು ವಿವಾದ ಸೇರಿದಂತೆ ಆರೋಪಗಳ ಸರಣಿ ಎದುರಾಯಿತು. ಬಿಜೆಪಿಗೆ ʻಒಂದು ಅವಕಾಶʼ ನೀಡುವಂತೆ ಕೋರಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ, ಅಂತಿಮವಾಗಿ ಎಲ್.ಕೆ. ಅಡ್ವಾಣಿ ನೇತೃತ್ವದ ಬಿಜೆಪಿ ಉನ್ನತಾಧಿಕಾರಿಗಳ ಒತ್ತಡದಿಂದ ಅವಮಾನಕರವಾಗಿ ನಿರ್ಗಮಿಸಬೇಕಾಯಿತು. ಇದರಿಂದ ಕುಪಿತಗೊಂಡ ಅವರು ಪಕ್ಷವನ್ನು ತೊರೆದು, ಕರ್ನಾಟಕ ಜನತಾ ಪಕ್ಷವನ್ನುಸ್ಥಾಪಿಸಿದರು. ನಂತರದ 2013ರ ಚುನಾವಣೆಯಲ್ಲಿ ಬಿಜೆಪಿ ಸೋತಿತು ಮತ್ತು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರು. ರಾಜ್ಯದ ಮತದಾರರು ಯಡಿಯೂರಪ್ಪ ಅವರಿಗೆ ಬಯಸಿದ ಅವಕಾಶಗಳನ್ನು ನೀಡಿದರು. ಆದರೆ, ಮತದಾರರಿಗೆ ಪ್ರತಿಯಾಗಿ ಹಗರಣಗಳು ಮತ್ತು ಕಳಪೆ ಆಡಳಿತ ಹೊರತುಪಡಿಸಿ ಬೇರೇನೂ ಸಿಕ್ಕಿಲ್ಲ.
ಕೊನೆಯ ಬಾರಿಗೆ
2018ರ ಚುನಾವಣೆ ಯಡಿಯೂರಪ್ಪ ಅವರಿಗೆ ಮತ್ತೊಂದು ಅವಕಾಶ ನೀಡಿತು. ಬಹುಮತಕ್ಕೆ ಅಗತ್ಯವಿದ್ದ 113ಕ್ಕಿಂತ ಒಂಬತ್ತು ಸ್ಥಾನ ಕಡಿಮೆ ಸಿಕ್ಕಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು, ರಾಜಕೀಯ ಆಟದಲ್ಲಿ ಯಡಿಯೂರಪ್ಪ ವಿಫಲರಾದರು. ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಯನ್ನು ವಿಮರ್ಶಿಸುವ, ಅದರ ತಪ್ಪು ನಡೆಗಳನ್ನು ಲೆಕ್ಕಾಚಾರ ಮಾಡುವ ಮತ್ತು ಅದರ ಬಿರುಕುಗಳನ್ನು ಭೇದಿಸುವ ಕೆಲಸವನ್ನು ಯಡಿಯೂರಪ್ಪ ಅವರಿಗೆ ಬಿಡಲಾಯಿತು. 24×7 ಗಂಟೆ ರಾಜಕಾರಣ ಮಾಡಿದ ಯಡಿಯೂರಪ್ಪ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವರ್ಚಸ್ಸನ್ನು ಬಳಸಿಕೊಂಡರು. ಕೇವಲ ಒಂದು ವರ್ಷದಲ್ಲಿ ಸಮ್ಮಿಶ್ರ ಸರ್ಕಾರವು ಪತನಗೊಂಡಿತು ಮತ್ತು ಜುಲೈ 26, 2019 ರಂದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು.
ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಎರಡು ಬಾರಿ ಪ್ರಯತ್ನಿಸಿ, ಮೂರನೇ ಬಾರಿ ಯಶಸ್ವಿಯಾದರು. ಮೈತ್ರಿ ಸರ್ಕಾರದ ಹದಿನೇಳು ಶಾಸಕರು ರಾಜೀನಾಮೆ ನೀಡಿದರು. ಯಡಿಯೂರಪ್ಪ 2023 ರಲ್ಲಿ ಮುಖ್ಯಮಂತ್ರಿಯಾಗಿ ನಿವೃತ್ತರಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಅಗಿದ್ದೇ ಬೇರೆ. ಅವರನ್ನು ನಿರ್ದಯವಾಗಿ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಲಾಯಿತು. ಅವರನ್ನು ಕೆಳಗಿಳಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಲಿಲ್ಲ: ಸ್ವಂತ ಪಕ್ಷದವರೇ ಮಾಡಿದರು.
ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳಿಂದ ದಣಿದಿರುವ ಅವರು ಮಾರ್ಗದರ್ಶಕ ಮಂಡಳಿ ಸೇರುತ್ತಾರೆ ಎಂದು ಏಲ್ಲರೂ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಫೀನಿಕ್ಸ್ ಹಕ್ಕಿಯಂತೆ ಮರುಹುಟ್ಟು ಪಡೆದಿದ್ದಾರೆ. ಮಗನನ್ನು ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ತಮಗೆ ಬೇಕಾದವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದ್ದಾರೆ: ಪಕ್ಷದೊಳಗಿನ ವಿರೋಧಿಗಳ ಮಗ್ಗಲು ಮುರಿದಿದ್ದಾರೆ. ತಮ್ಮನ್ನು ಕಡೆಗಣಿಸಿದ ಕೇಂದ್ರೀಯ ನಾಯಕತ್ವಕ್ಕೂ ಪಾಠ ಕಲಿಸಿದ್ದಾರೆ. ಪಕ್ಷ ಕಟ್ಟುವಲ್ಲಿ ಕ್ಕೆ ಜೋಡಿಸಿದ್ದ ಕೆ.ಎಸ್. ಈಶ್ವರಪ್ಪ ಅವರನ್ನೂ ಮೂಲೆಗುಂಪು ಮಾಡಿದ್ದಾರೆ. ಇದು ಯಡಿಯೂರಪ್ಪ ಶಕ್ತಿ.