Mysore MUDA case | ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದರೆ ಹೋರಾಟ ನಿಲ್ಲಿಸುವೆ; ಸ್ನೇಹಮಯಿ ಕೃಷ್ಣ ಸವಾಲು
ನನ್ನ ವಿರುದ್ಧ ಲಕ್ಷ್ಮಣ್ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಇರಿಸಿದ ದಿನದಿಂದಲೇ ನಾನು ನನ್ನ ಹೋರಾಟ ನಿಲ್ಲಿಸುತ್ತೇನೆ ಎಂದು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.;
ತಮ್ಮ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾಡಿದ್ದ ಭ್ರಷ್ಟಾಚಾರ ಆರೋಪಗಳಿಗೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ತಿರುಗೇಟು ನೀಡಿದ್ದಾರೆ. ನನ್ನ ಪರವಾಗಿ 100 ಕೋಟಿ ರೂ.ಗೆ ಬೇಡಿಕೆ ಇಟ್ಟಿರುವುದನ್ನು ಸಾಬೀತು ಮಾಡಿದರೆ ತಕ್ಷಣದಿಂದಲೇ ನನ್ನ ಹೋರಾಟ ನಿಲ್ಲಿಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಸವಾಲು ಹಾಕಿದ್ದಾರೆ.
ʼಸ್ನೇಹಮಯಿ ಕೃಷ್ಣ ಕಡೆಯವರು ಅಡ್ಜಸ್ಟ್ ಮಾಡಿಕೊಳ್ಳಿ ಸರ್ ಎಂದು ಸಂದೇಶ ಕಳುಹಿಸಿ, 100 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ, ಆ ವ್ಯಕ್ತಿ ಯಾರು ಅಂತ ನಾನು ಹೇಳುವುದಿಲ್ಲ. ನಾವು ತಪ್ಪೇ ಮಾಡದಿರುವಾಗ ಯಾಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದೆ,ʼ ಎಂದು ಎಂ. ಲಕ್ಷ್ಮಣ್ ಆರೋಪಿಸಿದ್ದರು.
ಕಾಂಗ್ರೆಸ್ ವಕ್ತಾರರ ಈ ಆರೋಪಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ತಿರುಗೇಟು ನೀಡಿರುವ ಸ್ನೇಹಮಯಿ ಕೃಷ್ಣ ಅವರು, ನನ್ನನ್ನು ಯಾವಾಗಲೂ ಬ್ಲಾಕ್ ಮೇಲರ್ ಎನ್ನುತ್ತೀರಾ, ನನ್ನ ಪರವಾಗಿ ಯಾರೋ ಮೆಸೇಜ್ ಮಾಡಿ, 100 ಕೋಟಿಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದೀರಿ. ಧೈರ್ಯವಿದ್ದರೆ ಅದನ್ನು ಬಿಡುಗಡೆ ಮಾಡಿ. ನನ್ನ ಪರವಾಗಿ ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿ ಯಾರು ಎಂದು ಜನರಿಗೆ ತಿಳಿಸಿ ಎಂದು ಆಗ್ರಹಿಸಿದ್ದಾರೆ.
ನನ್ನ ವಿರುದ್ಧ 44 ಪ್ರಕರಣಗಳಿವೆ ಎಂದು ಹೇಳಿದ್ದೀರಿ, ಆ ಎಲ್ಲ ಪ್ರಕರಣಗಳ ಎಫ್ಐಆರ್ ಬಿಡುಗಡೆ ಮಾಡಿ. ನೀವು ನನ್ನ ವಿರುದ್ಧ ಮಾಡಿದ ಆರೋಪಗಳಿಗೆ ಜನರ ಮುಂದೆ ಸಾಕ್ಷಿಗಳನ್ನು ಇಟ್ಟ ದಿನದಿಂದಲೇ ನಾನು ನನ್ನ ಹೋರಾಟ ನಿಲ್ಲಿಸುತ್ತೇನೆ. ಒಂದು ವೇಳೆ ನೀವು ಆರೋಪ ಸಾಬೀತು ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೀರಾ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ನೀವು ನನ್ನ ವಿರುದ್ಧ ವೃಥಾರೋಪ ಮಾಡಿದ ಕಾರಣಕ್ಕೆ ನಾನು ಬ್ಲಾಕ್ ಮೇಲರ್ ಆಗುವುದಿಲ್ಲ. ಜನ ಕೂಡ ನಂಬುವುದಿಲ್ಲ. ನೀವು ಎಷ್ಟೇ ಕುತಂತ್ರ ನಡೆಸಿದರೂ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಲಕ್ಷ್ಮಣ್ ಮಾಡಿದ್ದ ಆರೋಪವೇನು?
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅನಗತ್ಯವಾಗಿ ಎಳೆದುತರಲಾಗಿದೆ. ಪ್ರಕರಣದಲ್ಲಿ ರಾಜಿಯಾಗಲು ಸ್ನೇಹಮಯಿ ಕೃಷ್ಣ ಅವರ ಕಡೆಯವರು 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಕೃಷ್ಣ ಅವರು ಒಬ್ಬ ಬ್ಲಾಕ್ ಮೇಲರ್. ಇವರ ವಿರುದ್ಧ 44 ಕ್ಕೂ ಹೆಚ್ಚು ಪ್ರಕರಣಗಳಿವೆ. ನನಗೆ 100 ಕೋಟಿಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಮುಂದಿನ ದಿನಗಳಲ್ಲಿ ಕರೆತಂದು ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಎಂ. ಲಕ್ಷ್ಮಣ್ ಹೇಳಿದ್ದರು.
ಮೈಸೂರು ಒಂದರಲ್ಲೇ 17 ಪ್ರಕರಣಗಳಿವೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ. ಕೊಲೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ. ಸ್ನೇಹಮಯಿ ಕೃಷ್ಣ ಮನೆಯ ಮೇಲೆ ದಾಳಿ ಮಾಡಿದರೆ ಮುಡಾಗೆ ಸಂಬಂಧಿಸಿದ ದಾಖಲೆಗಳು ಸಿಗಲಿವೆ ಎಂದು ಹೇಳಿದ್ದರು.