Actor Darshan Case | ಇವತ್ತು ದರ್ಶನ್ ಬ್ಯಾನ್ ಮಾಡೋಕೆ ಆಗಲ್ಲ ಎನ್ನುವವರು ಅವತ್ತು ನಿಖಿತಾ ಬ್ಯಾನ್ ಮಾಡಿದ್ಯಾಕೆ? ರಮ್ಯಾ ಪ್ರಶ್ನೆ
ಕನ್ನಡ ಸಿನಿಮಾ ತಾರೆಯರು ಈ ಘಟನೆ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ ಎನಿಸುತ್ತದೆ, ಅದಕ್ಕೆ ಸುಮ್ಮನಿದ್ದಾರೆ ಎಂದು ನಟಿ ರಮ್ಯಾ ಹೇಳಿದ್ದಾರೆ.
Actor Darshan Case | ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಷಯದಲ್ಲಿ ಫಿಲಂ ಚೇಂಬರ್ ಮೃದು ಧೋರಣೆ ತಳೆದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ರಮ್ಯಾ ಕೂಡ ಚೇಂಬರ್ ನಿರ್ಧಾರದ ವಿರುದ್ಧ ದನಿ ಎತ್ತಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು "ಕನ್ನಡ ಸಿನಿಮಾ ತಾರೆಯರು ಈ ಘಟನೆ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ ಎನಿಸುತ್ತದೆ. ಅದಕ್ಕೆ ಸುಮ್ಮನಿದ್ದಾರೆ. ದರ್ಶನ್ ಬಗ್ಗೆ ಆರೋಪಗಳು ಕೇಳಿ ಬಂದಿರುವುದು ಇದೇ ಮೊದಲಲ್ಲ. ಅವರ ಫಾರ್ಮ್‌ಹೌಸ್‌ನಲ್ಲಿ ಒಬ್ಬ ವ್ಯಕ್ತಿಗೂ ಸಮಸ್ಯೆ ಆಗಿದೆ. ಈಗ ಅದು ಬೆಳಕಿಗೆ ಬಂದಿದೆ. ಆತ ಬಹಳ ನಟೋರಿಯಸ್" ಎಂದು ಹೇಳಿದ್ದಾರೆ.
"ದರ್ಶನ್ ಫ್ಯಾನ್ಸ್ ಕ್ಲಬ್ ಸೋಶಿಯಲ್ ಮೀಡಿಯಾದಲ್ಲಿ ತಾರೆಯನ್ನು ನಿಂದಿಸುತ್ತದೆ. ನಾನು ಈ ಹಿಂದೆ ಈ ಬಗ್ಗೆ ಹೇಳಿದ್ದೆ. ಸ್ಟಾರ್ ನಟರು ಫ್ಯಾನ್ಸ್ ಕ್ಲಬ್‌ಗಳು ಕಲಾವಿದರನ್ನು, ಅವರ ಮಕ್ಕಳನ್ನು, ನನ್ನನ್ನು ಟ್ರೋಲ್ ಮಾಡಿದ್ದರು. ಇಂತಹ ಇಮೇಜ್ ಇದ್ದಾಗ ಯಾರು ಕೂಡ ಅಂತಹವರ ಬಗ್ಗೆ ಮಾತನಾಡಲ್ಲ. ಯಾಕಂದರೆ ತಮ್ಮ ಸಿನಿಮಾಗಳು ಬಿಡುಗಡೆ ಆಗುವಾಗ ತೊಂದರೆ ಕೊಡುತ್ತಾರೆ. ಹೋದಲ್ಲಿ ಬಂದಲ್ಲಿ ಕೂಗಾಡಿ ಕಿರುಕುಳ ನೀಡುತ್ತಾರೆ. ಅಷ್ಟು ನಟೋರಿಯಸ್ ಅವ್ರು. ಅದಕ್ಕೆ ಇಂಡಸ್ಟ್ರಿಯವರು ಮಾತನಾಡ್ತಿಲ್ಲ ಅನ್ನಿಸ್ತಿದೆ" ಎಂದು ರಮ್ಯಾ ಹೇಳಿದ್ದಾರೆ.
"ದರ್ಶನ್ ವಿರುದ್ಧ ಯಾವುದೇ ಚಾರ್ಜ್‌ಶೀಟ್ ಆಗಿಲ್ಲ. ಹಾಗಾಗಿ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಫಿಲ್ಮ್ ಚೇಂಬರ್ ಹೇಳಿದ್ದಾಗಿ ನನ್ನ ಗಮನಕ್ಕೆ ಬಂತು. ಆದರೆ ಅದೇ ಜನ ಈ ಹಿಂದೆ ನಟಿ ನಿಖಿತಾ ತುಕ್ರಾಲ್ ಅವರನ್ನು ಬ್ಯಾನ್ ಮಾಡಿದ್ದರು. ಆಗ ಆಕೆಯ ವಿರುದ್ಧವೂ ಯಾವುದೇ ದೂರು ದಾಖಲಾಗಿರಲಿಲ್ಲ. ಈ ಹಿಂದೆ ಹಲವರಿಗೆ ಹೀಗೆ ಆಗಿದೆ. ಆದರೆ ದರ್ಶನ್ ವಿಚಾರದಲ್ಲಿ ಯಾಕೆ ಆಗುತ್ತಿಲ್ಲ" ಎಂದು ರಮ್ಯಾ ಪ್ರಶ್ನಿಸಿದ್ದಾರೆ.
"ಫ್ಯಾನ್ಸ್ ಕ್ಲಬ್ ಈ ಮಟ್ಟಕ್ಕೆ ಇಳಿಯಬಾರದು. ಟ್ರೋಲ್ ಮಾಡಬಾರದು. ಇದಕ್ಕೆ ನಟರು ಜವಾಬ್ದಾರರಾಗಿರಬೇಕು, ಅವರಿಗೆ ತಿಳಿ ಹೇಳಬೇಕು ಎಂದು ನಾನು ಈ ಹಿಂದೆ ಟ್ವೀಟ್ ಮಾಡಿ ಹೇಳಿದ್ದೇನೆ. ಆದರೆ ಯಾರೂ ಗಮನ ಹರಿಸಲಿಲ್ಲ. ಅವರಿಗೆ ಹಣ ಕೊಟ್ಟು ಹೀಗೆ ಮಾಡಿಸಲಾಗುತ್ತಿದೆ. ಹಾಗಾಗಿ ಏನೂ ಮಾಡೋಕೆ ಸಾಧ್ಯವಿಲ್ಲ" ಎಂದು ನಟಿ ರಮ್ಯಾ ಆತಂಕ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ಪತ್ನಿ ಮೇಲೆ ಹಲ್ಲೆಗೈದು ದರ್ಶನ್ ಜೈಲು ಸೇರಿದ್ದ ವೇಳೆ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ನಿರ್ಮಾಪಕರ ಸಂಘ 3 ವರ್ಷ ಬ್ಯಾನ್ ಮಾಡಿತ್ತು. ದರ್ಶನ್ ಜಂಟಲ್‌ಮನ್. ಆದರೆ ನಿಖಿತಾ ಅವರ ಬಾಳಿಗೆ ಎಂಟ್ರಿ ಕೊಟ್ಟಮೇಲೆ ಬಾಳಲ್ಲಿ ಬಿರುಗಾಳಿ ಎದ್ದಿದೆ ಎಂದು ಆರೋಪಿಸಲಾಗಿತ್ತು. ನಿರ್ಮಾಪಕರ ಸಂಘದ ನಡೆಯನ್ನು ಹಲವರು ವಿರೋಧಿಸಿದ್ದರು. ಹಿರಿಯ ನಿರ್ಮಾಪಕಿ ಪಾರ್ವತಮ್ಮ, ರಮ್ಯಾ ಕೂಡ ಅಂದು ನಿಖಿತಾ ಪರ ನಿಂತಿದ್ದರು. ಬಳಿಕ ತಮ್ಮ ತಪ್ಪಿ ಅರಿವಾಗಿ ಬ್ಯಾನ್ ಹಿಂಪಡೆಯಲಾಗಿತ್ತು. ಇನ್ನು ಮುಂದೆ ಯಾರನ್ನು ಬ್ಯಾನ್ ಮಾಡಲ್ಲ ಎಂದು ಹೇಳಿದ್ದರು.