ಸಿಎಂ ಗಾದಿ ಮೇಲೆ ʼಸಾಹುಕಾರʼನ ಕಣ್ಣು; ನಾನು ಅಹಿಂದ ಪರವೆಂದ ಸತೀಶ್‌ ಜಾರಕಿಹೊಳಿ

ಅಹಿಂದ ನಾಯಕತ್ವಕ್ಕೆ ಇನ್ನೂ ಕಾಲ ಕೂಡಿ ಬರಬೇಕು. ಸುಮಾರು 50 ವರ್ಷಗಳಿಂದಲೂ ರಾಜ್ಯದಲ್ಲಿ ಅಹಿಂದ ವರ್ಗಗಳ ಸಂಘಟನೆ ನಡೆಯುತ್ತಿದೆ. ಯತೀಂದ್ರ ಅವರ ಹೇಳಿಕೆಗೆ ಹೆಚ್ಚಿನ ವ್ಯಾಖ್ಯಾನ ಅನಗತ್ಯ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

Update: 2025-10-27 08:23 GMT

ಸಚಿವ ಸತೀಶ್‌ ಜಾರಕಿಹೊಳಿ

Click the Play button to listen to article

ಜಾತ್ಯಾತೀತ ಜನತಾದಳದಲ್ಲಿ ಇದ್ದಾಗಿನಿಂದಲೂ ಅಹಿಂದ ಭಾಗವಾಗಿದ್ದೇವೆ. ಅಹಿಂದ ನಾಯಕತ್ವಕ್ಕೂ, ಸಿಎಂ ಗಾದಿಗೂ ಯಾವುದೇ ಸಂಬಂಧವಿಲ್ಲ. ಯಾರೆಲ್ಲಾ ಯತೀಂದ್ರ ಹೇಳಿಕೆ ವಿರೋಧಿಸುತ್ತಿದ್ದಾರೋ ಅವರು ತಪ್ಪು ತಿಳಿದುಕೊಂಡಿದ್ದಾರೆ, ಅವರ ಹೇಳಿಕೆಗೆ ವ್ಯಾಖ್ಯಾನ ಅನಗತ್ಯ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ಅಹಿಂದ ನಾಯಕತ್ವ ಮುನ್ನಡೆಸಲಿದ್ದಾರೆ ಎಂಬ ಅರ್ಥದಲ್ಲಿ‌ ಹೇಳಿದ್ದಾರೆ. ಸನ್ನಿವೇಶ, ಸಂದರ್ಭ ನೋಡಿ ನಿರ್ಧಾರ ಮಾಡುತ್ತೇನೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವ ಎಚ್‌.ಸಿ. ಮಹದೇವಪ್ಪ ಸೇರಿದಂತೆ ಎಲ್ಲರೂ ಅಹಿಂದದ ಭಾಗವೇ ಆಗಿದ್ದಾರೆ ಎಂದರು.

ಅಹಿಂದ ನಾಯಕತ್ವಕ್ಕೆ ಇನ್ನೂ ಕಾಲ ಕೂಡಿ ಬರಬೇಕು. ಸುಮಾರು 50 ವರ್ಷಗಳಿಂದಲೂ ರಾಜ್ಯದಲ್ಲಿ ಅಹಿಂದ ವರ್ಗಗಳ ಸಂಘಟನೆ ನಡೆಯುತ್ತಿದೆ. ಯತೀಂದ್ರ ಹೇಳಿಕೆಗೆ ಹೆಚ್ಚಿನ ವ್ಯಾಖ್ಯಾನ ಅನಗತ್ಯ, ಈ ಹಿಂದೆಯೂ, ಈಗಲೂ, ಮುಂದೆಯೂ ಅಹಿಂದವನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಅವರ ಹೇಳಿಕೆಗೂ, ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಎಲ್ಲವೂ ಹೈಕಮಾಂಡ್‌ ನಿರ್ಧಾರ

ಯತೀಂದ್ರ ಎಲ್ಲಿಯೂ ಸಿಎಂ ಸ್ಥಾನವಾಗಲಿ, ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಹೇಳಿಲ್ಲ. ಅಹಿಂದ ಹೋರಾಟ ಮೊದಲಿನಿಂದಲೂ ಇದೆ.  2028ರ ಚುನಾವಣೆಯ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ. ಪಕ್ಷದ ಹೈಕಮಾಂಡ್ ಯಾರನ್ನು ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತದೆ. ಪಕ್ಷಕ್ಕೂ ಎಪ್ಪತ್ತು ವರ್ಷದ ಅನುಭವವಿದ್ದು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಹೇಳಿದರು.

ಯಾವುದೇ ಕ್ರಾಂತಿ ಇಲ್ಲ

ದಲಿತ ಮುಖ್ಯಮಂತ್ರಿಗೆ ಅವಕಾಶ ಬರುವವರೆಗೆ ಕಾಯಬೇಕು. ಈಗಂತೂ ಅವಕಾಶ ಇಲ್ಲ, ಆದ್ದರಿಂದ ಸಮಯಕ್ಕಾಗಿ ಕಾಯಬೇಕು. ನವೆಂಬರ್ ಕ್ರಾಂತಿ ಆಗುವುದಿಲ್ಲ. ಇದಕ್ಕೆ ಹೈಕಮಾಂಡ್‌ ಬಿಡುವುದಿಲ್ಲ. ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಒಬ್ಬರೇ, ಮಾಜಿ ಸಿಎಂ ಶರದ್‌ ಪವಾರ್ ಕೂಡ ಒಬ್ಬರೇ,  ಇನ್ನೊಬ್ಬ ಏಕನಾಥ್ ಶಿಂಧೆ, ಪವಾರ್ ಹುಟ್ಟಿಕೊಳ್ಳಲು ಆಗುವುದಿಲ್ಲ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ಗೆ ಟಾಂಗ್‌ ನೀಡಿದರು.

ಐದು ವರ್ಷವೂ ಸಿದ್ದರಾಮಯ್ಯ ಸಿಎಂ 

ನಾಯಕತ್ವ ಬದಲಾವಣೆಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದ್ದು ಇದಕ್ಕೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು. ನಾನು ಈಗ ಸಿಎಂ ಸ್ಥಾನಕ್ಕೆ ಸಿದ್ಧನಾಗುವ ಪ್ರಶ್ನೆಯೇ ಬರುವುದಿಲ್ಲ. ಸಿಎಂ ಆಗಿ ಸಿದ್ದರಾಮಯ್ಯನವರು ಗಟ್ಟಿಯಾಗಿ ಇದ್ದಾರೆ. ಹಾಗಾಗಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಆಸೆ ಪಡುವುದು ತಪ್ಪಿಲ್ಲ. ಆದರೆ, ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಈಗ ನಮಗೆ ನಾಯಕತ್ವ ಬದಲಾವಣೆಯ ಸನ್ನಿವೇಶ ಕಾಣುತ್ತಿಲ್ಲ ಎಂದರು.

Tags:    

Similar News