
ಪರಿಸರವಾದಿಗಳು ವಿರೋಧಿಸಿದರೂ ಸುರಂಗ ಕಾರ್ಯ ಮುಂದುವರಿಸುತ್ತೇವೆ ; ಡಿಸಿಎಂ
ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರ ಮಾತು ಕೇಳಿಕೊಂಡು ಯೋಜನೆ ನಿಲ್ಲಿಸಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ರಸ್ತೆ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದ್ದು, ಲಾಲ್‌ಬಾಗ್ ಮುಖಾಂತರ ರಸ್ತೆ ಹಾದುಹೋಗುವುದಕ್ಕೆ ಪ್ರತಿಪಕ್ಷಗಳು, ಪರಿಸರವಾದಿಗಳು ಸೇರಿದಂತೆ ಹಲವರು ವಿರೋಧಿಸಿದರೂ ಸುರಂಗ ಕಾರ್ಯ ಮುಂದುವರಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಏನಾದರೂ ವಿರೋಧ ಮಾಡಿಕೊಳ್ಳಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡಿ ಹೆಸರು ಮಾಡಬಾರದು ಎಂಬುದು ಅವರ ಉದ್ದೇಶ. ನಾನು ಈ ಯೋಜನೆಗೆ ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಕಾಮಗಾರಿಗೆ ಮಾತ್ರ ಲಾಲ್‌ಬಾಗ್ ಬಳಕೆ
ಲಾಲ್‌ಬಾಗ್‌ನ ಒಂದು ಸಣ್ಣ ಭಾಗದಲ್ಲಿ ಈ ಸುರಂಗ ರಸ್ತೆ ಹಾದುಹೋಗುತ್ತದೆ. ಇದನ್ನು ಪರಿಶೀಲನೆ ಮಾಡುತ್ತೇನೆ. ಸಮಸ್ಯೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಲಾಲ್ ಬಾಗ್‌ಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಉದ್ಯಾನದ ಸ್ವಲ್ಪ ಜಾಗವನ್ನು ಈ ಯೋಜನೆ ಕಾಮಗಾರಿ ನಡೆಯುವವರೆಗೂ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಮತ್ತೆ ಉದ್ಯಾನಕ್ಕೆ ಹಿಂತಿರುಗಿಸುತ್ತೇವೆ” ಎಂದು ಹೇಳಿದರು.
ಮುಂಬೈ, ದೆಹಲಿಯಲ್ಲಿ ಸುರಂಗ ರಸ್ತೆ ಮಾಡುತ್ತಿರುವುದೇಕೆ?
“ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರ ಮಾತು ಕೇಳಿಕೊಂಡು ಯೋಜನೆ ನಿಲ್ಲಿಸಲು ಆಗುವುದಿಲ್ಲ. ಹಾಗಿದ್ದರೆ ಮುಂಬೈ ಹಾಗೂ ದೆಹಲಿಯಲ್ಲಿ ಏಕೆ ಸುರಂಗ ರಸ್ತೆ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಯಾರಿಗೂ ಬಾಗುವುದಿಲ್ಲ. ಹೋರಾಟ ಮಾಡುವವರು ಮಾಡುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರ ಕಾಲದಲ್ಲಿ ಬೆಂಗಳೂರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ. ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್” ಎಂದು ಕಿಡಿಕಾರಿದರು.
ಖಾತಾ ಬದಲಾವಣೆ, ಚರ್ಚೆಗೆ ಸಿದ್ಧ
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ʼಎʼ ಖಾತಾ ಹಾಗೂ ʼಬಿʼ ಖಾತಾ ಪರಿವರ್ತನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜೆಡಿಎಸ್ ಆರೋಪ ಮಾಡುವುದು ಬಿಟ್ಟು, ಬಹಿರಂಗ ಚರ್ಚೆಗೆ ಬನ್ನಿ ಎಂದು ನಾನು ಕರೆಯುತ್ತಲೇ ಇದ್ದೇನೆ. ಖಾತಾ ವಿಚಾರದಲ್ಲಿ ಯಾವ ಭ್ರಷ್ಟಾಚಾರ ನಡೆಯುತ್ತಿದೆ? ನಾಗರಿಕರ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಲು, ಅವರಿಗೆ ಮುಂದೆ ಬ್ಯಾಂಕ್ ಸಾಲ ಹಾಗೂ ಇತರೆ ಸೌಲಭ್ಯ ಸಿಗಬೇಕು, ಜನರಿಗೆ ಉತ್ತಮ ಸೌಕರ್ಯ ಒದಗಿಸಬೇಕು, ತೆರಿಗೆ ಪಾವತಿಸುವಂತಾಗಬೇಕು ಎಂಬ ಉದ್ದೇಶದಿಂದ ನಾವು ಈ ಯೋಜನೆ ಮಾಡುತ್ತಿದ್ದೇವೆ ಎಂದರು.
ಹೆಚ್‌ಡಿಕೆ ಹೇಳಿದ ಕಡೆ ಕೈಗಾರಿಕೆ ಸ್ಥಾಪನೆ
ಜನರ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ. ನಮ್ಮ ಈ ಕಾರ್ಯವನ್ನು ದೇಶದ ಯಾವುದೇ ನಗರದಲ್ಲಿ ಮಾಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ. ಖಾತಾ ಬದಲಾವಣೆಗೆ ಸಾವಿರಾರು ಜನ ಅರ್ಜಿ ಹಾಕುತ್ತಿದ್ದಾರೆ. ಜೆಡಿಎಸ್, ಬಿಜೆಪಿ ಕಾಲದಲ್ಲಿ ಯಾಕೆ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಿಲ್ಲ? ಇ ಖಾತಾ ಮಾಡಿಕೊಡಲು ಅವರಿಂದ ಆಗಲಿಲ್ಲ. ಅವರಿಗೆ ಇಂತಹ ಯಾವುದೇ ಆಲೋಚನೆಗಳು ಇರಲಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೈಗಾರಿಕೆ ತರುತ್ತೇನೆ ಎನ್ನುತ್ತಾರೆ. ರಾಮನಗರದಲ್ಲಿ ಕೈಗಾರಿಕೆ ಮಾಡುತ್ತಾರೋ, ಬಿಡದಿಯಲ್ಲಿ ಮಾಡುತ್ತಾರೋ, ಮಂಡ್ಯದಲ್ಲಿ ಮಾಡುತ್ತಾರೋ ಎಲ್ಲಿ ಮಾಡುತ್ತಾರೆ ಎಂದು ಅವರೇ ಪಟ್ಟಿ ನೀಡಲಿ. ಅಗತ್ಯ ಭೂಮಿ ಬಗ್ಗೆ ಅರ್ಜಿ ಹಾಕಲಿ. ಸುಮ್ಮನೆ ಮಾತಾಡಿದರೆ ಯಾರೂ ಒಪ್ಪುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬರಲ್ಲ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರದ್ದು ಮಾಡುವುದಾಗಿ ಹೇಳುತ್ತಿದೆ. ಅವರು ಅಧಿಕಾರಕ್ಕೆ ಬಂದಾಗ, ಏನು ಬೇಕಾದರೂ ಮಾಡಲಿ. ಅಧಿಕಾರಕ್ಕೆ ಬರುವುದು, ಜಿಬಿಎ ರದ್ದುಗೊಳಿಸುವುದು ಅವರ ಹಣೆಯಲ್ಲಿ ಬರೆದಿಲ್ಲ. ಇದು ಹೀಗೆ ಮುಂದುವರಿಯಲಿದೆ. ಅವರಿಗೆ ಜಿಬಿಎ ಬೇಡವಾದರೆ ಮುಂಬರುವ ಪಾಲಿಕೆಗಳ ಚುನಾವಣೆಯನ್ನು ಬಹಿಷ್ಕರಿಸಿ ಹಿಂದೆ ಸರಿಯಲಿ ನೋಡೋಣ. ಅವರ ಕಾರ್ಯಕರ್ತರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ ಎಂದರು.
ನಗರಕ್ಕೆ ಪ್ರತಿಪಕ್ಷಗಳ ಕೊಡುಗೆ ಏನು ?
ಟೋಲ್ ಕಟ್ಟಿ ಹೋಗುವವರಿಗೆ ಈ ರಸ್ತೆ ಮಾಡಲಾಗುತ್ತಿದೆ. ಈ ಯೋಜನೆ ಬೇಡವಾದರೆ ಪ್ರತಿಪಕ್ಷಗಳು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಒಂದು ಕಾರ್ಯ ಯೋಜನೆಯನ್ನು ನೀಡಲಿ. ಬೆಂಗಳೂರಿನ ಸಂಸದರಾಗಿ ತೇಜಸ್ವಿ ಸೂರ್ಯ ಪ್ರಧಾನಮಂತ್ರಿ ಬಳಿ ಒಂದು ದಿನವೂ ನಗರದ ಅಭಿವೃದ್ಧಿಗೆ 10 ರೂಪಾಯಿಯೂ ವಿಶೇಷ ಅನುದಾನ ಕೊಡಿಸಿಲ್ಲ. ಅವರ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಿಜೆಪಿ ಕೈಗೊಂಡ ಕ್ರಮಗಳೇನು? ಕಸದ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ, ರಸ್ತೆ ಅಗಲೀಕರಣ, ಫ್ಲೈಓವರ್ ಮಾಡಲಿಲ್ಲ, ಬೆಂಗಳೂರಿಗಾಗಿ ಏನೂ ಮಾಡಲಿಲ್ಲ. ನಗರದ ಬೀದಿಗಳಲ್ಲಿ ಕೇಬಲ್ ವೈರ್‌ಗಳು ನೇತಾಡುತ್ತಿರುವುದನ್ನು ನೋಡುತ್ತಿದ್ದೀರಲ್ಲವೇ? ಅವುಗಳನ್ನು ಯಾಕೆ ತೆರವುಗೊಳಿಸಲಿಲ್ಲ. ಮಾಫಿಯಾ ಜೊತೆ ಕೈಜೋಡಿಸಿದ್ದರು ಎಂದು ಆರೋಪಿಸಿದರು.
ಶಾಸಕರಾಗಿ ಎಸ್‌ಟಿಎಸ್ ಉತ್ತಮ ಕಾರ್ಯ
ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಒಬ್ಬ ಜನಪ್ರತಿನಿಧಿಯಾಗಿ ಉತ್ತಮ ಕರ್ತವ್ಯ ಮಾಡುತ್ತಿದ್ದಾರೆ. ಸರ್ಕಾರದಿಂದ ಎಲ್ಲಾ ಸಹಕಾರ ನೀಡಲಾಗುವುದು ಎಂದರು. ಆ ಮೂಲಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಉಹಾಪೋಹಗಳಿಗೆ ಡಿಕೆಶಿಯವರ ಹೇಳಿಕೆ ಮತ್ತಷ್ಟು ಪುಷ್ಠಿ ನೀಡಿದೆ.

