ಹೊಸಪೇಟೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: ಎಂಟು ಮಂದಿಗೆ ಗಾಯ, ಗೋಡೆ ಕುಸಿತ
ಗಾಯಗೊಂಡವರನ್ನು ತಕ್ಷಣವೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯನಗರ ಜಿಲ್ಲೆ: ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ವರದಿಯಾಗಿದೆ. ಮನೆಯಲ್ಲಿದ್ದವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಶುಕ್ರವಾರ ರಾತ್ರಿ ಮನೆಯಲ್ಲಿದ್ದವರಿಗೆ ತಿಳಿಯದಂತೆ ಗ್ಯಾಸ್ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದೆ. ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಅವಘಡದಲ್ಲಿ ಮನೆಯಲ್ಲಿದ್ದ ಹಾಲಪ್ಪ, ಅವರ ಸಹೋದರ ಮೈಲಾರಪ್ಪ ಸೇರಿದಂತೆ ಒಟ್ಟು ಎಂಟು ಜನರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.
ಗಾಯಗೊಂಡವರನ್ನು ತಕ್ಷಣವೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕವಿತಾ ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅನಿಲ ಸೋರಿಕೆಗೆ ನಿಖರ ಕಾರಣ ಮತ್ತು ಸ್ಫೋಟದ ತೀವ್ರತೆಯ ಬಗ್ಗೆ ತನಿಖೆ ಮುಂದುವರೆದಿದೆ.