ಬಾರ್ಬೊಡೋಸ್‌ ಕಾಮನ್‌ವೆಲ್ತ್ ಸಂಸದೀಯ ಸಮಾವೇಶಕ್ಕೆ ತೆರಳಿದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

ಸೋಮವಾರದಿಂದ ಕೆರೆಬಿಯನ್ ದ್ವೀಪದ ಬಾರ್ಬೊಡೋಸ್‌ ದೇಶದ ರಾಜಧಾನಿ ಬ್ರಿಜ್‌ ಟೌನ್‌ ನಗರದಲ್ಲಿ ನಡೆಯುವ 68ನೇ ಕಾಮನ್‌ವೆಲ್ತ್‌ ಸಂಸದೀಯ ಸಮಾವೇಶ ನಡೆಯಲಿದೆ. ವಿವಿಧ ದೇಶದ ರಾಜಕೀಯ ತಜ್ಞರು ಭಾಗಿಯಾಗಲಿದ್ದಾರೆ.

Update: 2025-10-05 08:06 GMT

ಸೋಮವಾರದಿಂದ (ಅ.6) ಕೆರೆಬಿಯನ್ ಪೂರ್ವ ದ್ವೀಪ ರಾಷ್ಟವಾದ ಬಾರ್ಬೊಡೋಸ್‌ನ ರಾಜಧಾನಿ ಬ್ರಿಜ್‌ ಟೌನ್‌ ನಗರದಲ್ಲಿ ನಡೆಯುವ 68ನೇ ಕಾಮನ್‌ವೆಲ್ತ್‌ ಸಂಸದೀಯ ಸಮಾವೇಶದಲ್ಲಿ ಭಾಗವಹಿಸಲು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ ಬೆಳೆಸಿದ್ದಾರೆ.

ವಿಶ್ವದ ರಾಜಕೀಯ ಧುರೀಣರು ಮತ್ತು ನೀತಿ ನಿರೂಪಕರು ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾ ಅಧ್ಯಕ್ಷರು, ರಾಜ್ಯಸಭೆ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು, ಸಚಿವರು, ರಾಜಕೀಯ ತಜ್ಞರು, ನೀತಿ ನಿರೂಪಕರು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಾಲ್ಕು ದಿನಗಳ ಸಮಾವೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ, ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಹಲವು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳು ಜರುಗಲಿವೆ. ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಬಸವರಾಜ ಹೊರಟ್ಟಿ ಅವರು ಭಾಗವಹಿಸಲಿದ್ದಾರೆ.

"ಪ್ರಜಾಪ್ರಭುತ್ವ ದೃಢಗೊಳಿಸುವಲ್ಲಿ ಶಾಸನ ಸಭೆಗಳ ಪಾತ್ರ", “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹಾಗೂ ಪಾರದರ್ಶಕತೆಯ ಅವಶ್ಯಕತೆ”, “ಚುನಾವಣೆಗಳಲ್ಲಿ ಆರ್ಥಿಕ ಪಾರದರ್ಶಕತೆ ಮಹತ್ವ” ಹಾಗೂ “ಅತ್ಯುತ್ತಮ ಆಡಳಿತ, ಬಹುಪಕ್ಷೀಯತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಕಾಮನ್‌ವೆಲ್ತ್‌ ಪಾತ್ರ” ಮುಂತಾದ ವಿಷಯಗಳ ಕುರಿತು ಪ್ರತ್ಯೇಕವಾಗಿ ವಿಚಾರ ಮಂಡನೆ ಮಾಡಲಿದ್ದಾರೆ.


Tags:    

Similar News