HMPV Virus | ಶಿವಮೊಗ್ಗದಲ್ಲಿ HMP ವೈರಸ್ ಪತ್ತೆ, ಮೂವರು ಮಕ್ಕಳಲ್ಲಿ ಸೋಂಕು
ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ.;
HMPV Virus ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಿಗೆ ಎಚ್‌ಎಂಪಿವಿ ವೈರಾಣು ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ ಸೋಂಕು ದೃಢಪಟ್ಟಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸೋಮವಾರ ದೇಶದ ಎರಡು ಮೊದಲ ಹೆಚ್ಎಂಪಿ ಪ್ರಕರಣ ದಾಖಲಾಗಿತ್ತು. ಇದೀಗ ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಎಚ್ಎಂಪಿ ವೈರಸ್ ಸೋಂಕು ದೃಢಪಟ್ಟ ಬಗ್ಗೆ ವೈದ್ಯ ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ. ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಮಕ್ಕಳಲ್ಲಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕೊರೋನಾ ಶಂಕೆಯಲ್ಲಿ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳನ್ನು ಗುಣಪಡಿಸಲಾಗಿದೆ ಎಂದು ಡಾ. ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 8 ತಿಂಗಳ ಮಗು ಹಾಗೂ 3 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ಸೋಂಕು ದೃಢಪಟ್ಟಿದೆ. ಆದರೆ, ಮಕ್ಕಳಲ್ಲಿ ಕಂಡು ಬಂದಿರುವ ಸೋಂಕಿಗೂ, ಚೀನಾದಲ್ಲಿ ಹರಡಿರುವ ಸೋಂಕಿಗೂ ಸಂಬಂಧವಿಲ್ಲ. ಶೀತಗಾಳಿಯಲ್ಲಿ ಹರಡುವ ಸಾಮಾನ್ಯ ವೈರಸ್ ಇದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ಬೆಂಗಳೂರಿನಲ್ಲಿ ಪತ್ತೆಯಾದ ವೈರಸ್ ಚೀನಾದ ರೂಪಾಂತರವೇ ಎಂಬುದನ್ನು ಖಚಿತಪಡಿಸಿಲ್ಲ.
HMPV ವೈರಸ್ ಕುರಿತು ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಮಾರ್ಗಸೂಚಿ ಪ್ರಕಟಿಸಿದೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ ಎಂದು ಸೂಚಿಸಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತ ನೀಡಲು ಸೂಚಿಸಿದೆ. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಿದೆ. ಕೆಮ್ಮುವಾಗಿ ಮೂಗು, ಬಾಯಿ ಮುಚ್ಚಿಕೊಳ್ಳಲು ಸೂಚಿಸಲಾಗಿದೆ. HMPV ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ.