ಕೈಗೆಟುಕುವ ದರದ ಪರ್ಸನಲ್ ಕಂಪ್ಯೂಟರ್ ಅಭಿವೃದ್ಧಿ; ಕರ್ನಾಟಕ ಸರ್ಕಾರದ ಮಹತ್ವದ ಸಾಧನೆ
ಸ್ಮಾರ್ಟ್‌ಫೋನ್‌ಗಳ ಬಳಕೆ ವ್ಯಾಪಕವಾಗಿದ್ದರೂ, ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್‌ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್‌ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ.
ಶ್ರೀಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕಂಪ್ಯೂಟಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಅಗ್ಗದ ದರದ ಪರ್ಸನಲ್ ಕಂಪ್ಯೂಟರ್ ಅಭಿವೃದ್ಧಿಪಡಿಸಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೊನಿಕ್ಸ್) ಸಹಯೋಗದಲ್ಲಿ ವಿನ್ಯಾಸ ರೂಪಿಸಿ ಕೃತಕ ಬುದ್ಧಿಮತ್ತೆಯ ಪುಟ್ಟ ಗಾತ್ರದ ಮತ್ತು ಅಗ್ಗದ ಪರ್ಸನಲ್ ಕಂಪ್ಯೂಟರ್ (ಪಿಸಿ) ಅಭಿವೃದ್ಧಿಪಡಿಸಲಾಗಿದೆ.
ಇದು ರಾಜ್ಯದಲ್ಲಿನ ಡಿಜಿಟಲ್ ಲಭ್ಯತೆಯ ಅಂತರ ನಿವಾರಿಸುವ ಗುರಿ ಹೊಂದಿದೆ. ದೇಶಿ ಕುಟುಂಬಗಳಲ್ಲಿ ಶೇ 10ಕ್ಕಿಂತ ಕಡಿಮೆ ಜನರು ಕಂಪ್ಯೂಟರ್ ಹೊಂದಿದ್ದಾರೆ. ಕರ್ನಾಟಕದಲ್ಲಿ ಇದರ ಪ್ರಮಾಣ ಕೇವಲ ಶೇ 15ರಷ್ಟಿದೆ.
ಸ್ಮಾರ್ಟ್‌ಫೋನ್‌ಗಳ ಬಳಕೆ ವ್ಯಾಪಕವಾಗಿದ್ದರೂ, ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್‌ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್‌ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ. ಸೂಕ್ತ ಸಾಧನಗಳ ಲಭ್ಯತೆಯ ಕೊರತೆಯಿಂದಾಗಿ ಶೇ 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆ – ಕಾಲೇಜು ತೊರೆಯಲು ಕೂಡ ನೇರವಾಗಿ ಕೊಡುಗೆ ನೀಡಲಿದೆ.
ಇದು ಜ್ಞಾನ ಆಧಾರಿತ, ಮಿತವ್ಯಯ ಮತ್ತು ಮುಕ್ತ-ಕಂಪ್ಯೂಟಿಂಗ್ (ಓಪನ್ ಸೋರ್ಸ್) ಕೆಇಒ ಸವಾಲಿಗೆ ಕರ್ನಾಟಕದ ಉತ್ತರವಾಗಿದೆ. ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ (ಒಎಸ್) ಹೊಂದಿರುವ ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ ಪ್ರೊಸೆಸರ್‌ನಲ್ಲಿ ನಿರ್ಮಿಸಿರುವ ʼಕೆಇಒʼ ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ ನೀಡಲಿದೆ.
ಇದು 4ಜಿ, ವೈ-ಫೈ, ಈಥರ್ನೆಟ್, ಯುಎಸ್‌ಬಿ- ಎ ಮತ್ತು ಯುಎಸ್‌ಬಿ - ಸಿ ಪೋರ್ಟ್‌ಗಳು, ಎಚ್‌ಡಿಎಂಐ ಮತ್ತು ಆಡಿಯೊ ಜ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ.
ಆನ್-ಡಿವೈಸ್ ಎಐ ಕೋರ್ ಒಳಗೊಂಡಿದೆ. ಇದು ಇಂಟರ್ನೆಟ್ ಲಭ್ಯ ಇರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಎಐ ಅನುವು ಮಾಡಿಕೊಡುತ್ತದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕರ್ನಾಟಕ ಡಿಎಸ್‌ಇಆರ್‌ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಬುದ್ಧ (BUDDH) ಜೊತೆಗೆ ಬರುತ್ತದೆ.
ಬೆಂಗಳೂರು ಟೆಕ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ʼಕೆಇಒʼ ವನ್ನು ಔಪಚಾರಿಕವಾಗಿ ಅನಾವರಣಗೊಳಿಸಲಿದ್ದಾರೆ. ಬಿಡುಗಡೆಯ ನಂತರ, ಇದನ್ನು ಶೃಂಗಸಭೆಯ ಉದ್ದಕ್ಕೂ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಮತ್ತು ಸಂದರ್ಶಕರು ಇದನ್ನು ಬಳಸಲು ಮತ್ತು ರಾಜ್ಯದಾದ್ಯಂತ ಸಾಮೂಹಿಕ ಬಳಕೆಗೆ ಕೈಗೆಟುಕುವ ಕೃತಕ ಜಾಣ್ಮೆಯ ಕಾಂಪ್ಯಾಕ್ಟ್ ಕಂಪ್ಯೂಟರ್ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ.
"ಕೆಇಒ ಡಿಜಿಟಲ್ ಅಂತರ ಕಡಿಮೆ ಮಾಡುವುದಕ್ಕೆ ಕರ್ನಾಟಕದ ಪ್ರಾಯೋಗಿಕ ಉತ್ತರವಾಗಿದೆ. ಇದು ಐಷಾರಾಮಿ ಸಾಧನವಲ್ಲ; ಇದು ಎಲ್ಲರಿಗೂ ಲಭ್ಯವಾಗುವ ಅಗ್ಗದ ಸಾಧನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ, ಸಣ್ಣ ವ್ಯಾಪಾರಿ ಮತ್ತು ಪ್ರತಿ ಮನೆಯು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಿಯೊನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಅವರು, ಮಾತನಾಡಿ, "ಕೆಇಒಐಸಿಎಸ್ ಎಲೆಕ್ಟ್ರಾನಿಕ್ಸ್ ನಾವೀನ್ಯತೆಯ ಧ್ಯೇಯವನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಲವು ತೋರುತ್ತಿದೆ. ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ ಸ್ಟ್ಯಾಕ್ ಅನ್ನು ಅಳವಡಿಸಿಕೊಳ್ಳುವ ಮೂಲಕ ʼಕೆಇಒʼ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ, ಸ್ಥಳೀಯವಾಗಿ ಅಳವಡಿಸಿಕೊಳ್ಳುವ, ರಾಜ್ಯದಲ್ಲಿಯೇ ಅಭಿವೃದ್ಧಿಪಡಿಸುವ ಕಂಪ್ಯೂಟಿಂಗ್ ಪರಿಹಾರಗಳಿಗೆ ಕರ್ನಾಟಕದ ಬದ್ಧತೆಯನ್ನು ಬಲಪಡಿಸುತ್ತದೆ" ಎಂದು ಹೇಳಿದ್ದಾರೆ.
ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕೆಇಒ ಬಳಕೆಯಾಗಲಿದೆ. ಡಿಜಿಟಲ್ ಕಲಿಕೆ, ಕೌಶಲ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಕೇಂದ್ರೀಕೃತ ತಂತ್ರಜ್ಞಾನದ ಬೆಳವಣಿಗೆ ಸಾಧಿಸುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಡಿಜಿಟಲ್ ಅವಕಾಶವನ್ನು ಖಚಿತಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಧ್ಯೇಯವನ್ನು ಸಾಕಾರಗೊಳಿಸಲು ನೆರವಾಗಲಿದೆ.