ನಾಳೆಯಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ; 60 ದೇಶಗಳು ಭಾಗಿ

ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ, ಹಣಕಾಸು ಸೇವೆಗಳು ಹಾಗೂ ವರ್ಚುವಲ್ ಪ್ರಪಂಚದ ಪರಿಕಲ್ಪನೆ (ಫಿನ್ವರ್ಸ್) ಸಂಬಂಧಿತ ಸಭೆಗಳೂ ಟೆಕ್‌ ಸಮ್ಮಿತ್‌ನಲ್ಲಿ ನಡೆಯಲಿವೆ. ಮೂರು ಹೊಸ ನೀತಿಗಳಾದ ಐಟಿ ನೀತಿ, ಸ್ಟಾರ್ಟ್ಅಪ್ ನೀತಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ನೀತಿಗಳ ಘೋಷಿಸಲಾಗುವುದು

Update: 2025-11-17 10:14 GMT
ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮಾಧ್ಯಮಗೋಷ್ಠಿ ನಡೆಸಿದರು.

ಕರ್ನಾಟಕದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ಹಾಗೂ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ನಾಳೆಯಿಂದ ಅಧಿಕೃತವಾಗಿ ಆರಂಭವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೃಂಗಸಭೆ ಉದ್ಘಾಟನೆ ನೆರವೇರಿಸಲಿದ್ದಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ಭವಿಷ್ಯ ರೂಪಿಸುವ ಧ್ಯೇಯ (ಫ್ಯೂಚರೈಸ್) ಹೊಂದಿರುವ ಶೃಂಗಸಭೆಯಲ್ಲಿ ಜಾಗತಿಕ ನಾಯಕರು, ನೀತಿ ನಿರೂಪಕರು, ಹೂಡಿಕೆದಾರರು, ನವೋದ್ಯಮಗಳು ಮತ್ತು ನಾವೀನ್ಯಕಾರರು ಭಾಗವಹಿಸಲಿದ್ದಾರೆ.

ಡೀಪ್‌ಟೆಕ್‌, ಬಯೋಟೆಕ್, ಹೆಲ್ತ್‌ ಟೆಕ್‌, ಸೆಮಿಕಂಡಕ್ಟರ್ ಮತ್ತು ಸ್ಟಾರ್ಟ್ಅಪ್ ಆವಿಷ್ಕಾರ ಕ್ಷೇತ್ರಗಳಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿರುವ ಅವಕಾಶಗಳನ್ನು ಅನ್ವೇಷಿಸಲು ಶೃಂಗಸಭೆ ಸಹಕಾರಿಯಾಗಲಿದೆ.

ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ, ಹಣಕಾಸು ಸೇವೆಗಳು ಹಾಗೂ ವರ್ಚುವಲ್ ಪ್ರಪಂಚದ ಪರಿಕಲ್ಪನೆ (ಫಿನ್ವರ್ಸ್) ಸಂಬಂಧಿತ ಸಭೆಗಳೂ ನಡೆಯಲಿವೆ. ಶೃಂಗಮೇಳದಲ್ಲಿ ಮೂರು ಹೊಸ ನೀತಿಗಳಾದ ಐಟಿ ನೀತಿ, ಸ್ಟಾರ್ಟ್ಅಪ್ ನೀತಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ನೀತಿಗಳ ಘೋಷಣೆ ಮಾಡಲಾಗುವುದು.

ಪ್ರತಿಭಾನ್ವಿತರ ಚಿಂತನ-ಮಂಥನ

ಶೃಂಗಸಭೆಯಲ್ಲಿ ʼಭವಿಷ್ಯ ರೂಪಿಸುವವರ ಸಮಾವೇಶʼ ಆಯೋಜಿಸಲಾಗಿದೆ. ಇದು ಉದ್ಯಮಶೀಲತೆಯ ಮುಂದಿನ ಅಲೆ ರೂಪಿಸಲಿರುವ ನವೋದ್ಯಮಗಳ ಸ್ಥಾಪಕರು, ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಳಗೊಂಡ ಅಂದಾಜು 10,000 ಪ್ರತಿಭಾನ್ವಿತರ ಚಿಂತನ-ಮಂಥನದ ವಿಶಿಷ್ಟ ವೇದಿಕೆ ಆಗಿರಲಿದೆ.

ಇಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಂಡವಾಳ ಲಭ್ಯತೆ, ಉದ್ದಿಮೆ ಪರಿಕರಗಳು, ಮಾರ್ಗದರ್ಶನ, ಅತ್ಯಧಿಕ ಸಂಖ್ಯೆಯ ಜನರ ಗಮನ ಸೆಳೆಯುವ ಮತ್ತು ವೃತ್ತಿಪರರ ಭೇಟಿ ಮತ್ತು ಬಾಂಧವ್ಯ ವೃದ್ಧಿಯಲ್ಲಿ ರಚನಾತ್ಮಕ ಪ್ರಗತಿ ಖಚಿತಪಡಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಸಕ್ತ ವರ್ಷವು ಆಸ್ಟ್ರೇಲಿಯಾ ನಮ್ಮೊಂದಿಗೆ ʼಪಾಲುದಾರ ದೇಶʼವಾಗಿ ಕೈಜೋಡಿಸಿದೆ. ಪ್ರಮುಖ ತಂತ್ರಜ್ಞಾನ ರಾಷ್ಟ್ರಗಳಾದ ಅಮೆರಿಕ, ಕ್ಯೂಬಾ, ಉರುಗ್ವೆ, ರಷ್ಯಾ, ಇಂಗ್ಲೆಂಡ್, ಇಸ್ರೇಲ್, ಬೆಲ್ಜಿಯಂ, ಫಿನ್ಲ್ಯಾಂಡ್, ಫ್ರಾನ್ಸ್, ದುಬೈ, ಶಾರ್ಜಾ, ದಕ್ಷಿಣ ಕೊರಿಯಾ, ಜಪಾನ್, ಸಿಂಗಪುರ ಮತ್ತು ಥೈಲ್ಯಾಂಡ್ ದೇಶಗಳು ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.

ಮಧ್ಯಪ್ರದೇಶವು ಪಾಲುದಾರಿಕೆ, ಒಡಿಶಾ ಸಹ ಪಾಲುದಾರಿಕೆ ರಾಜ್ಯವಾಗಿದೆ. ನ.20 ರಂದು ಭವಿಷ್ಯ ರೂಪಿಸುವವರ ಸಮಾವೇಶದೊಂದಿಗೆ ಶೃಂಗಸಭೆ ಮುಕ್ತಾಯವಾಗಲಿದೆ. ಕೃತಕ ಬುದ್ದಿಮತ್ತೆ, ಡೀಪ್ಟೆಕ್ ಸ್ಟಾರ್ಟ್ಅಪ್‌ಗಳಲ್ಲಿ ಪ್ರಮುಖ ಹೂಡಿಕೆ ಘೋಷಣೆಗಳು, ಕರ್ನಾಟಕ ಯುನಿಕಾರ್ನ್ ಸ್ಥಾಪಕರ ಸನ್ಮಾನ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಒಳಗೊಂಡಿರಲಿದೆ.

60 ದೇಶಗಳು ಭಾಗಿ

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿರುವ ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳದಲ್ಲಿ 100ಕ್ಕೂ ಹೆಚ್ಚು ಸಭೆಗಳು, 500ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1000ಕ್ಕೂ ಹೆಚ್ಚು ಪ್ರದರ್ಶಕರು, 15,000ಕ್ಕೂ ಹೆಚ್ಚು ಅತಿಥಿಗಳು ಮತ್ತು 60ಕ್ಕೂ ಹೆಚ್ಚು ದೇಶಗಳ 50,000ಕ್ಕೂ ಹೆಚ್ಚು ವಾಣಿಜ್ಯ ಸಂದರ್ಶಕರು ಭಾಗವಹಿಸಲಿದ್ದಾರೆ.

ಶೃಂಗಸಭೆಯಲ್ಲಿ ಕೃತಕ ಬುದ್ದಿಮತ್ತೆ(AI), ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನದಂತಹ ಗಮನಾರ್ಹ ವೈಜ್ಞಾನಿಕ ಸಂಶೋಧನೆ ಅಥವಾ ಎಂಜಿನಿಯರಿಂಗ್ ನಾವೀನ್ಯತೆ ಆಧರಿಸಿರುವ ಕಂಪನಿಗಳು ಮತ್ತು ನವೋದ್ಯಮಗಳನ್ನು ಸ್ಥಾಪಿಸಿ - ಬೆಳೆಸುವ ಉದ್ದೇಶದ (ಡೀಪ್ ಟೆಕ್) ಯೋಜನೆಗೆ ಶೃಂಗಸಭೆ ಪೂರಕವಾಗಿ ಇರಲಿದೆ.

ಕಾರ್ಪೊರೇಟ್ಗಳು, ನವೋದ್ಯಮಗಳು, ಸಂಶೋಧನೆ ಹಾಗೂ ಅಭಿವೃದ್ಧಿ(ಪ್ರಯೋಗಾಲಯದಿಂದ ಮಾರುಕಟ್ಟೆಗೆ), ದೇಶಿ ಮಳಿಗೆಗಳು, ಕೃತಕ ಬುದ್ಧಿಮತ್ತೆ, ಡೀಪ್ಟೆಕ್, ಎಲೆಕ್ಟ್ರೊ-ಸೆಮಿಕಾನ್, ಜೈವಿಕ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ, ಪರಿಸರ ಸ್ನೇಹಿ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳ ಪ್ರತ್ಯೇಕ ವಲಯಗಳು ಮೇಳದಲ್ಲಿ ಭಾಗವಹಿಸಲಿವೆ.

Tags:    

Similar News