ಸಹ ಕೈದಿಗಳ ಕಿರುಕುಳ; ಬೀದರ್ ಜೈಲಿನಲ್ಲಿ ಕೈದಿ ಆತ್ಮಹತ್ಯೆ

ಬಸವಕಲ್ಯಾಣ ತಾಲೂಕಿನ ಗೌರ್ ಗ್ರಾಮದ ನಿವಾಸಿ ಖಂಡಪ್ಪ ಮೇತ್ರೆ (46) ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಕೈದಿ. ಭಾನುವಾರ ಸಂಜೆ ಜೈಲಿನ ಆವರಣದಲ್ಲಿದ್ದ ಮರವನ್ನೇರಿ, ನಂತರ ಕಟ್ಟಡದಿಂದ ಕೆಳಗೆ ಹಾರಿ ಅವರು ಪ್ರಾಣ ಬಿಟ್ಟಿದ್ದಾರೆ.

Update: 2025-11-17 07:34 GMT

ಮೃತ ವಿಚಾರಣಾಧೀನ ಕೈದಿ ಖಂಡಪ್ಪ ಮೇತ್ರೆ

Click the Play button to listen to article

ಬೀದರ್ ಜಿಲ್ಲೆಯ ಹುಮನಾಬಾದ್ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬರು ಸಹ ಕೈದಿಗಳ ನಿರಂತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ. ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬಸವಕಲ್ಯಾಣ ತಾಲೂಕಿನ ಗೌರ್ ಗ್ರಾಮದ ನಿವಾಸಿ ಖಂಡಪ್ಪ ಮೇತ್ರೆ (46) ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಕೈದಿ. ಭಾನುವಾರ ಸಂಜೆ ಜೈಲಿನ ಆವರಣದಲ್ಲಿದ್ದ ಮರವನ್ನೇರಿ, ನಂತರ ಕಟ್ಟಡದಿಂದ ಕೆಳಗೆ ಹಾರಿ ಅವರು ಪ್ರಾಣ ಬಿಟ್ಟಿದ್ದಾರೆ. ಸಹಕೈದಿಗಳಿಂದ ಆಗುತ್ತಿದ್ದ ಕಿರುಕುಳದಿಂದ ಮನನೊಂದು ಅವರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಖಂಡಪ್ಪ

ಸ್ವಂತ ತಾಯಿ ಸುಂದರಾಬಾಯಿ ಅವರ ಕೊಲೆ ಆರೋಪದ ಮೇಲೆ ಖಂಡಪ್ಪ ಮೇತ್ರೆ ಅವರನ್ನು 2025ರ ಏಪ್ರಿಲ್ 14ರಂದು ಬಂಧಿಸಲಾಗಿತ್ತು. ಅವರ ಸಹೋದರಿಯರೇ ನೀಡಿದ ದೂರಿನ ಮೇರೆಗೆ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ವಿಚಾರಣೆಗಾಗಿ ಅವರನ್ನು ಹುಮನಾಬಾದ್ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಕುಟುಂಬಸ್ಥರ ಆಕ್ರೋಶ, ತನಿಖೆಗೆ ಆಗ್ರಹ

"ನಮ್ಮ ತಂದೆಗೆ ಜೈಲಿನಲ್ಲಿ ಸಹಕೈದಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಜೈಲರ್ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೈಲು ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ" ಎಂದು ಮೃತರ ಮಕ್ಕಳು ಕಣ್ಣೀರು ಹಾಕಿದ್ದಾರೆ. "ಸಹಕೈದಿಗಳು ಕಿರುಕುಳ ನೀಡಲು ಕಾರಣವೇನು? ಅವರ ಹಿಂದೆ ಯಾರಿದ್ದಾರೆ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಜೈಲು ಸಿಬ್ಬಂದಿ ಹುಮನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Similar News