ಜಾತಿ ಗಣತಿ ವರದಿ ಸೋರಿಕೆ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಈ ನಕಲಿ ಪಟ್ಟಿಯಲ್ಲಿ ಲಿಂಗಾಯತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ, ಮುಸ್ಲಿಮರು-60 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ ಎಂಬಂತಹ ಸುಳ್ಳು ಅಂಕಿ-ಅಂಶಗಳನ್ನು ನೀಡಲಾಗಿದೆ.

Update: 2025-11-17 15:27 GMT
Click the Play button to listen to article

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿರುವಾಗಲೇ, ಅದರ ವರದಿಯೆಂದು ಹೇಳಿಕೊಂಡು ಸುಳ್ಳು ಅಂಕಿ-ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪೊಲೀಸರಿಗೆ ದೂರು ನೀಡಿದೆ.

ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಈ ಸಂಬಂಧ ಅಧಿಕೃತ ದೂರು ಸಲ್ಲಿಸಿದ್ದಾರೆ. 'Engineers & Doctors' ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 'ಶಿವ' ಎಂಬ ವ್ಯಕ್ತಿಯು, "2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ" ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯೆಂದು ಹೇಳಲಾದ ಪಟ್ಟಿಯೊಂದನ್ನು ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ನಕಲಿ ಪಟ್ಟಿಯಲ್ಲಿ ಲಿಂಗಾಯತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ, ಮುಸ್ಲಿಮರು-60 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ ಎಂಬಂತಹ ಸುಳ್ಳು ಅಂಕಿ-ಅಂಶಗಳನ್ನು ನೀಡಲಾಗಿದೆ. ಈ ಮೂಲಕ, ವರದಿಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸಿ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ ಎಂದು ಆಯೋಗವು ಆರೋಪಿಸಿದೆ.

ಗೌಪ್ಯತೆ ಕಾಪಾಡುವ ಹೊಣೆ

ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 31, 2025ರವರೆಗೆ ನಡೆದಿದ್ದು, ಸಮೀಕ್ಷೆಯಲ್ಲಿ ಭಾಗವಹಿಸದವರಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡಲು ನವೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಸಮೀಕ್ಷಾ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ. ಈ ಸಮೀಕ್ಷೆಯ ದತ್ತಾಂಶಗಳನ್ನು ಅತ್ಯಂತ ಗೌಪ್ಯವಾಗಿ ಕಾಪಾಡಲಾಗುವುದು ಎಂದು ಆಯೋಗವು ಈಗಾಗಲೇ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಇಂತಹ ಸಂದರ್ಭದಲ್ಲಿ, ಸಮೀಕ್ಷೆಯ ಬಗ್ಗೆ ಸುಳ್ಳು ಸುದ್ದಿ ಹರಡುವುದು ಕಾನೂನುಬಾಹಿರ ಮಾತ್ರವಲ್ಲ, ನ್ಯಾಯಾಲಯದ ಆದೇಶದ ಉಲ್ಲಂಘನೆಯೂ ಆಗುತ್ತದೆ. ಇದು ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮನವಿ

ಆಯೋಗವು, ಈ ಸುಳ್ಳು ಸಂದೇಶವನ್ನು ಹರಿಯಬಿಟ್ಟಿರುವ 'ಶಿವ' (ಮೊಬೈಲ್ ಸಂಖ್ಯೆ: 8618891657) ಮತ್ತು ಅವರಿಗೆ ಈ ಸಂದೇಶವನ್ನು ಕಳುಹಿಸಿದ ಮತ್ತೊಬ್ಬ ವ್ಯಕ್ತಿಯ (ಮೊಬೈಲ್ ಸಂಖ್ಯೆ: 9972508500) ವಿರುದ್ಧ ತಕ್ಷಣವೇ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಿದೆ. ಈ ದೂರಿನೊಂದಿಗೆ, ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನೂ ಸಹ ಲಗತ್ತಿಸಲಾಗಿದೆ.  

Tags:    

Similar News