ಬಂದೀಖಾನೆ ಎಡಿಜಿಪಿ ದಯಾನಂದ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ: ಹಣಕ್ಕಾಗಿ ಬೇಡಿಕೆಯಿಟ್ಟ ಸೈಬರ್ ಕಳ್ಳರು

ವಂಚಕರು ಎಡಿಜಿಪಿ ದಯಾನಂದ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯಿಂದ ಅವರ ಫೋಟೋವನ್ನು ಕದ್ದು, ಅದೇ ಹೆಸರಿನಲ್ಲಿ ಹೊಸ ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ನಂತರ, ಅವರ ಸ್ನೇಹಿತರ ಪಟ್ಟಿಯಲ್ಲಿರುವ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.

Update: 2025-11-17 07:26 GMT
ಐಪಿಎಸ್‌ ಅಧಿಕಾರಿ ದಯಾನಂದ್‌ ಹೆಸರಲ್ಲಿ ನಕಲಿ ಖಾತೆ ತೆರೆದಿರುವ ಸೈಬರ್‌ ವಂಚಕರು
Click the Play button to listen to article

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ, ಬಂದೀಖಾನೆ ವಿಭಾಗದ ಎಡಿಜಿಪಿ ದಯಾನಂದ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ಯತ್ನಿಸಿರುವ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸೈಬರ್ ಖದೀಮರು, ದಯಾನಂದ್ ಅವರ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ಅವರ ಸ್ನೇಹಿತರು ಹಾಗೂ ಪರಿಚಯಸ್ಥರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.

ಸೈಬರ್ ಖದೀಮರ ಕೈಚಳಕ

ವಂಚಕರು ಎಡಿಜಿಪಿ ದಯಾನಂದ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯಿಂದ ಅವರ ಫೋಟೋವನ್ನು ಕದ್ದು, ಅದೇ ಹೆಸರಿನಲ್ಲಿ ಹೊಸ ನಕಲಿ ಖಾತೆಯನ್ನು ಸೃಷ್ಟಿಸಿದ್ದಾರೆ. ನಂತರ, ಅವರ ಸ್ನೇಹಿತರ ಪಟ್ಟಿಯಲ್ಲಿರುವ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದವರ ಬಳಿ, ಫೇಸ್‌ಬುಕ್ ಮೆಸೆಂಜರ್ ಮೂಲಕ "ತುರ್ತಾಗಿ ಹಣದ ಅವಶ್ಯಕತೆ ಇದೆ" ಎಂದು ನಂಬಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.

ಮತ್ತೆ ಮತ್ತೆ ಮರುಕಳಿಸುತ್ತಿರುವ ಕೃತ್ಯ

ಇದು ಮೊದಲ ಬಾರಿಯೇನಲ್ಲ, ಈ ಹಿಂದೆಯೂ ಎರಡು-ಮೂರು ಬಾರಿ ಇದೇ ರೀತಿ ಎಡಿಜಿಪಿ ದಯಾನಂದ್ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿತ್ತು. ಪ್ರತಿ ಬಾರಿಯೂ ಅವರು ಸೈಬರ್ ಕ್ರೈಂ ಪೊಲೀಸರ ಗಮನಕ್ಕೆ ತಂದು ದೂರು ನೀಡಿದ್ದಾರೆ. ಆದರೂ, ಸೈಬರ್ ಖದೀಮರು ತಮ್ಮ ಕೃತ್ಯವನ್ನು ಮುಂದುವರಿಸಿದ್ದು, ಮತ್ತೆ ಹೊಸ ಖಾತೆಯನ್ನು ತೆರೆದು ವಂಚನೆಗೆ ಇಳಿದಿದ್ದಾರೆ.

ಕೆಟ್ಟ ಹೆಸರು ತರುವ ಹುನ್ನಾರ?

ಇತ್ತೀಚೆಗೆ ರಾಜ್ಯದ ಕಾರಾಗೃಹಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿ, ಬಂದೀಖಾನೆ ಇಲಾಖೆ ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ, ಎಡಿಜಿಪಿ ದಯಾನಂದ್ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಪದೇ ಪದೇ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಎಡಿಜಿಪಿ ದಯಾನಂದ್ ಅವರು ಸೈಬರ್ ಪೊಲೀಸರಿಗೆ ಮತ್ತೊಮ್ಮೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಇಂತಹ ಯಾವುದೇ ಹಣದ ಬೇಡಿಕೆಗೆ ಮರುಳಾಗಬಾರದು ಮತ್ತು ತಮ್ಮ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದಾರೆ.

Tags:    

Similar News