ಬವೇರಿಯಾ ಸಂಸತ್‌ ಅಧ್ಯಕ್ಷರಿಗೆ ಗ್ಯಾರಂಟಿ ಯೋಜನೆಗಳ ಯಶೋಗಾಥೆ ಮಾಹಿತಿ ಹಂಚಿಕೆ

ಜರ್ಮನಿ ದೇಶದ ಬವೇರಿಯಾ ಸಂಸತ್ತಿನ ಅಧ್ಯಕ್ಷರಾದ ಇಲ್ಸೆ ಐಗ್ನರ್ ನಿಯೋಗಕ್ಕೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಆಗಿರುವ ಪ್ರಯೋಜನಗಳ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿವರಿಸಿದರು.

Update: 2025-11-17 13:48 GMT
Click the Play button to listen to article

ಜರ್ಮನಿ ದೇಶದ ಬವೇರಿಯಾ ಸಂಸತ್ತಿನ ಅಧ್ಯಕ್ಷರಾದ ಇಲ್ಸೆ ಐಗ್ನರ್ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಶಾಲಿನಿ ರಜನೀಶ್ ಅವರನ್ನು ಸೌಜನ್ಯಯುತ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿತು. ಈ ವೇಳೆ ಶಾಲಿನಿ ರಜನೀಶ್‌ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಆಗಿರುವ ಪ್ರಯೋಜನಗಳ ಕುರಿತು ವಿವರಿಸಿದರು. ಉತ್ತಮ ಸಂಸದೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಗುಣಾತ್ಮಕ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. 

ಯಾವುದೇ ತಾರತಮ್ಯವಿಲ್ಲದೇ ವಿಶೇಷವಾಗಿ ಮಹಿಳೆಯರ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟಕೊಂಡು ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದ 1.2 ಕೋಟಿ ಕುಟುಂಬಗಳ ಮಹಿಳೆಯರಿಗೆ ಸರ್ಕಾರವು ಪ್ರತಿ ತಿಂಗಳು 2 ಸಾವಿರ ರೂ. ಪಾವತಿಸುತ್ತಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಎರಡು ವರ್ಷಗಳಲ್ಲಿ ಮಹಿಳಾ ಉದ್ಯೋಗ ಪ್ರಮಾಣವು ಶೇ.30 ರಷ್ಟು ಹೆಚ್ಚಾಗಿದೆ.  ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದ್ದು, ಇದರಿಂದ ದೈನಂದಿನ ಮನೆಗೆಲಸಗಳಿಗೆ, ವಿದ್ಯಾರ್ಥಿಗಳ ಓದಿಗೆ ಸಹಕಾರಿಯಾಗಿದೆ. ಕುಟುಂಬದ ಉಳಿತಾಯ ಪ್ರಮಾಣ ಕೂಡ ಹೆಚ್ಚಾಗಿದೆ ಎಂದು ಸರ್ಕಾರ ಯೋಜನೆಗಳ ಮಹತ್ವದ ಕುರಿತು ತಿಳಿಸಿದರು. 

ಇದಲ್ಲದೇ ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ನೀಡಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ‌ ಅಪೌಷ್ಟಿಕತೆ ನಿವಾರಣೆಗೆ ಸಾಧ್ಯವಾಗಿದೆ. ಯುವನಿಧಿ ಯೋಜನೆಯಡಿ ಎರಡು ವರ್ಷಗಳ ಕಾಲ ಭತ್ಯೆ ನೀಡಲಾಗುತ್ತಿದೆ. ಇದರಿಂದ ಕೌಶಲ್ಯಾಭಿವೃದ್ಧಿ ಜತೆಗೆ ಅವರ ಆಯ್ಕೆಯ ಉದ್ಯೋಗ ಪಡೆಯಲು ಅನುಕೂಲವಾಗುತ್ತಿದೆ. ರಾಜ್ಯದಲ್ಲಿ ಯುವನಿಧಿ ಯೋಜನೆಯು ಕೌಶಲಾಭಿವೃದ್ಧಿಗೆ ಮತ್ತು ಸ್ವ ಉದ್ಯೋಗಕ್ಕೆ ಸಹಕಾರಿಯಾಗುತ್ತಿದೆ ಎಂದರು.

ಸಮಾನತೆ ಪ್ರಜಾಪ್ರಭುತ್ವದ ಜೀವಾಳ:

ಭಾರತ ಮತ್ತು ಜರ್ಮನಿ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಸಮಾನತೆಯು ಪ್ರಜಾಪ್ರಭುತ್ವದ ಜೀವಾಳವಾಗಿದೆ. ಬಡವರಿಗೆ ಎಲ್ಲ ಮೂಲಸೌಲಭ್ಯ ಒದಗಿಸುವ ಮೂಲಕ ಘನತೆಯ‌ ಬದುಕು ಕಲ್ಪಿಸುವುದು ಗ್ಯಾರಂಟಿ ಯೋಜನೆಗಳ ಆಶಯವಾಗಿದೆ. ಯೋಜನೆಗಳ ಜಾರಿಯ ಬಳಿಕ ಎರಡು ವರ್ಷಗಳಲ್ಲಿ ಇಡೀ ದೇಶದಲ್ಲಿಯೇ ರಾಜ್ಯದ ತಲಾ ಆದಾಯ‌ ಹೆಚ್ಚಾಗಿದೆ. ಮಹಿಳೆಯರಿಗೆ ನೀಡಲಾಗುವ ಹಣವು ಸದ್ಬಳಕೆಯಾಗುತ್ತದೆ. ಮಹಿಳೆಯರ ಸ್ವಾವಲಂಬನೆ ಸಮಾಜದ ಒಟ್ಟಾರೆ ಪ್ರಗತಿದೆ ಬಹಳಷ್ಟು ಸಹಕಾರಿಯಾಗಿದೆ. ಸಾಮಾಜಿಕ‌ ಭದ್ರತಾ ಯೋಜನೆಗಳ ಹೊರತಾಗಿ ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಐದು ಸಂಶೋಧನಾ ಸಂಸ್ಥೆಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿದ್ದು, ಇದರಿಂದ ಆಗಿರುವ ಸಕಾರಾತ್ಮಕ ಅಭಿವೃದ್ಧಿಯನ್ನು ಗುರುತಿಸಿವೆ ಎಂದು ಹೇಳಿದರು. 

ಮಹಿಳೆಯರ ಸಬಲೀಕರಣದ ಮೂಲಕ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಪ್ರಗತಿಗೆ ಮುಖ್ಯಮಂತ್ರಿಗಳು ಆದ್ಯತೆ ನೀಡುವಂತಹ ಯೋಜನೆಗಳನ್ನು ರೂಪಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಗರದ ಮಳೆನೀರಿನ ಚರಂಡಿಗಳನ್ನು ಶುದ್ಧ ಮತ್ತು ಹಸಿರು ಸ್ಥಳಗಳಾಗಿ ಪರಿವರ್ತಿಸುವುದನ್ನು ತೋರಿಸುವ ಕೆ- ಹಂಡ್ರೆಡ್ ಕುರಿತ ಕಿರುಪುಸ್ತಕವನ್ನು ಮುಖ್ಯ ಕಾರ್ಯದರ್ಶಿಗಳು ಹಂಚಿಕೊಂಡರು. ಇದೇ ವೇಳೆ ಪರಿಸರದ ಬಗ್ಗೆ ಕಾಳಜಿಯಾಗಿ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡೀಪ್‌ಟೆಕ್, ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿಗಳಲ್ಲಿ ಪರಸ್ಪರ ಸಹಕಾರವನ್ನು ಸಕ್ರಿಯಗೊಳಿಸಲು ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸುವ ನಿಯೋಗದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಬವೇರಿಯಾ ರಾಜ್ಯದ ಅಭಿವೃದ್ಧಿ ಯೋಜನೆಗಳ ಜತೆ ರಾಜ್ಯವು ಸದಾ ಕೈಜೋಡಿಸಲಿದೆ. ಮಾಹಿತಿ ತಂತ್ರಜ್ಞಾನ ಜತೆಗೆ ಸುಸ್ಥಿರ ಅಭಿವೃದ್ಧಿಗೆ ಜತೆಯಾಗಲಿದೆ ಎಂದು ಹೇಳಿದರು. 

ಇದೇ ವೇಳೆ ಸಂಸದೀಯ ವ್ಯವಸ್ಥೆ, ಸ್ಥಳೀಯ ಸಂಸ್ಥೆಗಳ ಆಡಳಿತ, ಮಹಿಳೆಯರ ಸಬಲೀಕರಣ ಕುರಿತು ನಿಯೋಗವು ಚರ್ಚಿಸಿತು. ಸಾಂಪ್ರದಾಯಿಕ ಬೆಳ್ಳಿಯ ಕರಕುಶಲತೆ ಹೊಂದಿರುವ ಸ್ಮರಣಿಕೆ ಮತ್ತು ಬಿದರಿ ಕಲೆ ಹಾಗೂ ಕಸೂತಿ ಕಲೆಯ ವಸ್ತುಗಳನ್ನು ಬವೇರಿಯನ್ ಸಂಸತ್ತಿನ ಅಧ್ಯಕ್ಷರಿಗೆ ನೆನಪಿನ ಕಾಣಿಕೆ ನೀಡಲಾಯಿತು. 

Tags:    

Similar News