ರಾಜ್ಯ ಕಾಂಗ್ರೆಸ್ ನಾಯಕರ ನಿಯಂತ್ರಿಸುವಲ್ಲಿ ಹೈಕಮಾಂಡ್ ವಿಫಲ: ವಿ. ಸೋಮಣ್ಣ
ವಿಕಸಿತ ಭಾರತ -2047 ರೊಳಗೆ ಎಲ್ಲವೂ ಅಭಿವೃದ್ಧಿಯಾಗುತ್ತದೆ. ತುಮಕೂರಿಗೆ ಮೆಟ್ರೋ ಹಾಗೂ ನಾಲ್ಕು ಪಥಗಳ ಹೆದ್ದಾರಿ ಶೀಘ್ರವೇ ಬರಲಿದೆ. ಅದಕ್ಕಾಗಿ ಡಿಪಿಆರ್ ಸಿದ್ಧವಾಗುತ್ತಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು
ಕೇಂದ್ರ ಸಚಿವ ವಿ. ಸೋಮಣ್ಣ
ಕಾಂಗ್ರೆಸ್ ಹೈಕಮಾಂಡ್ ʼಕಪ್ಪ ಕಾಣಿಕೆʼ ಪಡೆದಿರುವುದರಿಂದಲೇ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ನಿಯಂತ್ರಣ ಸಾಧ್ಯವಿಲ್ಲ. ಸಿಎಂ ಕುರ್ಚಿಗಾಗಿ ನಾಯಕರು ಕಿತ್ತಾಡುತ್ತಿದ್ದರೂ ಅದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುಲ್ಲ ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಆರು ರಾಜ್ಯಗಳ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ವಿಕಸಿತ ಭಾರತ- 2047 ಗುರಿಯೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ತುಮಕೂರಿಗೆ ಮೆಟ್ರೋ ಹಾಗೂ ಚತುಷ್ಪಥ ಹೆದ್ದಾರಿ ಬರಲಿದ್ದು, ಅದಕ್ಕಾಗಿ ಡಿಪಿಆರ್ ಸಹ ಸಿದ್ಧವಾಗುತ್ತಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ರಾಜ್ಯ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಿರುವ ಮೊಂಡುತನದ ಸರ್ಕಾರ. ಈ ಸರ್ಕಾರಕ್ಕೆ ಗಾಂಭೀರ್ಯತೆ ಇಲ್ಲ. ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಇಂತಹ ಕೆಟ್ಟ ವ್ಯವಸ್ಥೆ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬಿಹಾರದ ಜನರು ಪ್ರಧಾನಿ ಮೋದಿ ಅವರ ಅಭ್ಯುದಯ ನೋಡಿ ಮತ ಹಾಕಿದ್ದಾರೆ ಎಂದು ಹೇಳಿದರು.
ಪ್ರಸ್ತುತ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಶೇ.40 ಭ್ರಷ್ಟಾಚಾರ ಆರೋಪ ಮಾಡಿದ್ದರು. ಈಗ ಶೇ.100 ಭ್ರಷ್ಟಾಚಾರ ನಡೆಯುತ್ತಿದೆ. ಇಂತಹ ಸರ್ಕಾರದ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇ ಇಲ್ಲ. ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ, ರಾಜ್ಯದ ಹಿತ ಬೇಕಿಲ್ಲ. ರಾಜ್ಯವನ್ನು ಯಾವ ರೀತಿ ತಗೆದುಕೊಂಡು ಹೋಗಬೇಕು ಅನ್ನೋದು ಗೊತ್ತಿಲ್ಲ. ಇತಂಹ ನಿರ್ಲಿಪ್ತ ಅವ್ಯವಸ್ಥೆಯ ಸರ್ಕಾರವನ್ನು ನಾನೂ ನೋಡಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೋಗಿ ಮತಕಳವಿನ ಬಗ್ಗೆ ಮಾತನಾಡುತ್ತಾರೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಯಾವ ವಿಚಾರ ತೆಗೆದುಕೊಂಡು ಹೋರಾಟ ಮಾಡಬೇಕೋ ಅದನ್ನು ಮಾಡುತ್ತಿಲ್ಲ. ಅವರ ನಾಯಕತ್ವದಲ್ಲಿ ಒಂದು ಚುನಾವಣೆಯಲ್ಲೂ ಗೆಲುವು ಸಾಧಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅವನತಿ ಶುರುವಾಗಿದೆ ಎಂದು ತಿಳಿಸಿದರು.