Chamarajanagara| ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

ದೊಡ್ಡಮಟ್ಟದ ಶಾಸನಾತ್ಮಕ ಉಲ್ಲಂಘನೆಗಳು ಇದ್ದಾಗ ಹೊರತುಪಡಿಸಿ ಪ್ರತಿಮೆ, ಪುತ್ಥಳಿಗಳ ಸ್ಥಾಪನೆ, ಅದರ ತೆರವು ಅಥವಾ ಅನಾವರಣ, ಸರ್ಕಾರಿ ಕಚೇರಿಗಳ ಸ್ಥಳಾಂತರ ಇತ್ಯಾದಿ ಶಾಸಕಾಂಗ ಮತ್ತು ಆಡಳಿತಾತ್ಮಕ ವಿಷಯಗಳಾಗಿದ್ದು, ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.;

Update: 2025-04-25 02:47 GMT

ಕರ್ನಾಟಕ ಹೈಕೋರ್ಟ್‌ 

ಚಾಮರಾಜನಗರ ಜಿಲ್ಲಾಡಳಿತ ಭವನದದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಪಶ್ಚಿಮ ಬಲ ಭಾಗದಲ್ಲಿ ಸ್ಥಾಪನೆಗೊಂಡಿರುವ ವಿಶ್ವಗುರು ಬಸವಣ್ಣ ಅವರ ಪುತ್ಥಳಿಯ ಅನಾವರಣಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ದೊಡ್ಡಮಟ್ಟದ ಶಾಸನಾತ್ಮಕ ಉಲ್ಲಂಘನೆಗಳು ಇದ್ದಾಗ ಹೊರತುಪಡಿಸಿ ಪ್ರತಿಮೆ, ಪುತ್ಥಳಿಗಳ ಸ್ಥಾಪನೆ, ಅದರ ತೆರವು ಅಥವಾ ಅನಾವರಣ, ಸರ್ಕಾರಿ ಕಚೇರಿಗಳ ಸ್ಥಳಾಂತರ ಇತ್ಯಾದಿ ಶಾಸಕಾಂಗ ಮತ್ತು ಆಡಳಿತಾತ್ಮಕ ವಿಷಯಗಳಾಗಿದ್ದು, ಅವುಗಳಲ್ಲಿ ಮಧ್ಯಪ್ರವೇಶಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯವು ಸೂಕ್ಷ್ಮವಾಗಿ ಹೇಳಿದೆ.

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪುತ್ಥಳಿ ತೆರವುಗೊಳಿಸಬೇಕು ಹಾಗೂ ಪುತ್ಥಳಿ ಅನಾವರಣಕ್ಕೆ ತಡೆ ನೀಡಬೇಕು ಎಂದು ಕೋರಿ ಚಾಮರಾಜನಗರ ತಾಲ್ಲೂಕು ಹೊಂಗನೂರು ಗ್ರಾಮದ ನಟರಾಜ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಏಪ್ರಿಲ್ 25ರಂದು ಪುತ್ಥಳಿಯ ಅನಾವರಣ ಕಾರ್ಯಕ್ರಮ ನಿಗದಿಯಾಗಿದೆ ಎಂದು ಆಹ್ವಾನ ಪತ್ರಿಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ತಡೆ ನೀಡಬೇಕು. ಇಲ್ಲದಿದ್ದರೆ, ಅರ್ಜಿಯು ವಿಚಾರಣಾ ಮಾನ್ಯತೆ ಕಳೆದುಕೊಳ್ಳುತ್ತದೆ ಎಂದರು.

ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರ ಮಧ್ಯಂತರ ಮನವಿಗೆ ಪೀಠ ಸ್ಪಂದಿಸಿಲ್ಲ. ಆದರೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ, ಚಾಮರಾಜನಗರ ಜಿಲ್ಲಾಧಿಕಾರಿ, ಸ್ಥಳೀಯ ನಗರಸಭೆ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.

ಚಾಮರಾಜನಗರ ಜಿಲ್ಲಾ ರಂಗಮಂದಿರದ ಮುಂಭಾಗದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪನೆಗೆ 2023ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ, ಏಕಾಏಕಿ ಯಾವುದೇ ಅನುಮತಿಗಳನ್ನು ಪಡೆದುಕೊಳ್ಳದೇ ಕಾನೂನು ಮತ್ತು ನಿಯಮಗಳನ್ನು ಉಲ್ಲಂಸಿ ಜಿಲ್ಲಾಧಿಕಾರಿ ಕಚೇರಿ ಪಶ್ಚಿಮ ಭಾಗದಲ್ಲಿ ಪುತ್ಥಳಿ ನಿರ್ಮಾಣ 2024ರ ಜೂನ್ ತಿಂಗಳಲ್ಲಿ ಆರಂಭಿಸಲಾಯಿತು. ಅರ್ಜಿದಾರರ ಮನವಿ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಆದರೆ, 2024ರ ನವೆಂಬರ್ ತಿಂಗಳ 19ರಂದು ಕೆಲವು ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ಅದೇ ಜಾಗದಲ್ಲಿ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಇದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಅನಾನುಕೂಲವಾಗುತ್ತದೆ. ಅಲ್ಲದೇ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ, ಪುತ್ಥಳಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags:    

Similar News