ಚಿತ್ತಾಪುರದಲ್ಲಿ RSS ಪಥ ಸಂಚಲನಕ್ಕೆ ಅನುಮತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿದಾರರು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.
ಚಿತ್ತಾಪುರದಲ್ಲಿ ನ.2 ರಂದು ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪಥಸಂಚಲನ ನಡೆಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗದ ವಿವರ, ತಹಶೀಲ್ದಾರ್ ಕೇಳಿರುವ ವಿವರಣೆಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರ್‌ಎಸ್‌ಎಸ್‌ಗೆ ಹೈಕೋರ್ಟ್ ಕಲಬುರಗಿ ಪೀಠ ಸೂಚಿಸಿದೆ, ಈ ಅರ್ಜಿಯನ್ನು ಪರಿಗಣಿಸಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ತುರ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಆರ್‌ಎಸ್‌ಎಸ್ ಪಥ ಸಂಚಲನ ದಿನವೇ ಭೀಮ ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಭೀಮ್ ಆರ್ಮಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿತ್ತು. ಇಬ್ಬರಿಗೂ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಪೊಲೀಸ್ ವರದಿ ಆಧರಿಸಿ ತಹಶೀಲ್ದಾರ್ ಅವರು ಇಬ್ಬರಿಗೂ ಅನುಮತಿ ನಿರಾಕರಿಸಿದ್ದರು. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಶಾಂತಿ ಮತ್ತು ಕಾನೂನು–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅನುಮತಿ ನಿರಾಕರಣೆ ನೀಡಲಾಗಿದೆ ಎಂದು ವಾದಿಸಿದರು. ಆಗ ಹೈಕೋರ್ಟ್, ಪಥಸಂಚಲನವು ಸಂವಿಧಾನಾತ್ಮಕ ಹಕ್ಕಿನ ಭಾಗವಾಗಿದ್ದು, ಅದನ್ನು ಕಾನೂನುಬದ್ಧ ನಿಯಮಗಳೊಳಗೆ ನಡೆಸುವಂತೆಯೇ ಅವಕಾಶ ನೀಡಬೇಕು ಎಂದು ಹೇಳಿತು.
ಪಥಸಂಚಲನದ ವೇಳೆ ಯಾವುದೇ ಅಶಾಂತಿ ಉಂಟಾಗದಂತೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ, ಮುಂದಿನ ವಿಚಾರಣೆಯನ್ನು ಅ. 24ರಂದು ಮಧ್ಯಾಹ್ನ 2.30ಕ್ಕೆ ನಿಗದಿ ಮಾಡಿತು.
ಪಥ ಸಂಚಲನಕ್ಕೆ ಸಂಬಂಧಿಸಿದಂತೆ ಮಾರ್ಗದ ವಿವರಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು.