Rain Damage | ಶಿರಾಡಿಯಲ್ಲಿ ಮತ್ತೆ ಭೂಕುಸಿತ, ವಾಹನ ಸಂಚಾರಕ್ಕೆ ಅಡ್ಡಿ, ಕರಾವಳಿಗೆ ರೈಲು ಸಂಚಾರವೂ ಸ್ಥಗಿತ

ಸಕಲೇಶಪುರದ ಬಳಿ ಭೂಕುಸಿತದಿಂದ ರಸ್ತೆಯನ್ನು ಆರು ತಿಂಗಳಲ್ಲಿ ಮರುನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜನರಿಗೆ ಭರವಸೆ ನೀಡಿದ್ದಾರೆ.;

Update: 2024-08-01 07:43 GMT
ಶಿರಾಡಿ ಘಾಟ್‌ನಲ್ಲಿ ಭೂಕುಸಿತದಿಂದಾಗಿ ಟ್ರಕ್‌ ಮಣ್ಣಿನಲ್ಲಿ ಹೂತುಹೋಗಿದೆ.
Click the Play button to listen to article

ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ಎನ್‌ಎಚ್ 75 ರಸ್ತೆಯಲ್ಲಿ ಬುಧವಾರ ಸಂಜೆ ಮತ್ತೆ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತೆಪ್ಲೆ  ಬಳಿ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಬುಧವಾರ ಸಂಜೆ ಮತ್ತೆ ಭೂಕುಸಿತ ಸಂಭವಿಸಿದ್ದು, ಅವಶೇಷಗಳಡಿ ಹಲವು ವಾಹನಗಳು ಹೂತು ಹೋಗಿವೆ.

ಇದೇ ಸ್ಥಳದಲ್ಲಿ ಮಂಗಳವಾರ ಕೂಡ ಭೂಕುಸಿತ ಉಂಟಾಗಿತ್ತು. ಎರಡು ಕಂಟೈನರ್ ಟ್ರಕ್‌ಗಳು ಮಣ್ಣಿನಲ್ಲಿ ಹೂತು ಹೋಗಿವೆ. ಕಂಟೈನರ್ ಟ್ರಕ್ ಚಾಲಕ ಮಣ್ಣಿನಡಿ ಸಿಕ್ಕಿಬಿದ್ದಿದ್ದು,ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜು.31 ರಂದು ಹಾಸನ ಮತ್ತು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಭೂಕುಸಿತ ಸ್ಥಳಗಳ ಪರಿಶೀಲನೆ ನಡೆಸಿದ ನಂತರ ಸಭೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಮಾರ್ಗವನ್ನು ವಾಹನಗಳಿಗೆ ಮುಕ್ತವಾಗಿಡಲು ನಿರ್ಧರಿಸಲಾಗಿತ್ತು. ಏಕೆಂದರೆ ಇದು ವಾಣಿಜ್ಯ ಸಂಚಾರಕ್ಕೆ ಪ್ರಮುಖ ಕಾರಿಡಾರ್ ಆಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಅವಶ್ಯಕವಾಗಿದೆ. ಬೆಳವಣಿಗೆಗಳ ಮೇಲೆ ನಿಗಾ ಇಡಲು ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಭೂಕುಸಿತದ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ ವಾಹನಗಳನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ಸಭೆಯ ಬಳಿಕ ಸಂಜೆ ಮತ್ತೊಮ್ಮೆ ಭೂಕುಸಿತ ಉಂಟಾಗಿದೆ. 

ಪರ್ಯಾಯ ಮಾರ್ಗ ಬಳಸಿ: ಪ್ರಯಾಣಿಕರಿಗೆ ಡಿಸಿ ಮನವಿ

ಸಕಲೇಶಪುರ ಸಮೀಪದ ಹೆಗ್ಗಡೆ ಗ್ರಾಮ ಪಂಚಾಯಿತಿಯ ದೊಡ್ಡತಪ್ಲೆ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಬೆಂಗಳೂರು-ಮಂಗಳೂರು ಹೆದ್ದಾರಿ (ಎನ್‌ಎಚ್ 75) ಬಳಸುವ ಪ್ರಯಾಣಿಕರು ಪರ್ಯಾಯ ಮಾರ್ಗಗಳಲ್ಲಿ ತೆರಳುವಂತೆ ಹಾಸನ ಡಿಸಿ ಸಿ.ಸತ್ಯಭಾಮ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಬುಧವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿರುವ ಡಿಸಿ, ಭೂಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬಹುದು.

ತುರ್ತು ಸಹಾಯಕ್ಕಾಗಿ ಕಂಟ್ರೋಲ್ ರೂಂ 08172-261111 ನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಉಚಿತ ಸಹಾಯವಾಣಿ: 1077.

ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ

ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್‌ 1ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ  ರೆಡ್ ಅಲರ್ಟ್ ಘೋಷಿಸಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಆಗಸ್ಟ್ 1 ರಂದು ಪದವಿ ಪೂರ್ವ ಕಾಲೇಜುಗಳವರೆಗಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. 

ಜುಲೈ 31 ರಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಮತ್ತು ಇತರ ಹಿರಿಯ ಅಧಿಕಾರಿಗಳು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಂತ್ರಸ್ತ ಜನರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಆಡಳಿತವು ನೀಡಲಿದೆ ಎಂದು ಡಿಸಿ ಮುಹಿಲನ್ ಹೇಳಿದರು.

ನೇತ್ರಾವತಿಯು ಜು.31 ರಂದು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಡಳಿತವು ಸಜ್ಜಾಗಿದೆ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.

ಈ ನಡುವೆ ಗುರುವಾರ ಬೆಳಿಗ್ಗೆ ಉಪ್ಪಿನಂಗಡಿ ಸಮೀಪದ ನದಿ ಉಕ್ಕೇರಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿಯಲ್ಲಿ ಪ್ರವಾಹದ ಭೀತಿ

ಮಹಾರಾಷ್ಟ್ರದ ಕೃಷ್ಣಾ ನದಿಯ ಜಲಾನಯನ ಪ್ರದೇಶಗಳು, ಬೆಳಗಾವಿ ಜಿಲ್ಲೆ ಮತ್ತು ಇತರ ಪ್ರದೇಶಗಳಲ್ಲಿ ಜು.31 ರಂದು ಮಳೆ ಕಡಿಮೆಯಾಗಿದೆ, ಆದರೆ ಪ್ರವಾಹದ ಭೀತಿ ಎದುರಾಗಿದೆ. 

ನೀರಾವರಿ ಇಲಾಖೆ ಅಧಿಕಾರಿಗಳು ಬುಧವಾರ ಮಧ್ಯಾಹ್ನದ ವೇಳೆಗೆ ಆಲಮಟ್ಟಿಯಿಂದ ಹೊರ ಹರಿವನ್ನು ಸುಮಾರು 3.5 ಲಕ್ಷ ಕ್ಯೂಸೆಕ್ಸ್ ಗೆ ಹೆಚ್ಚಿಸಿದ್ದಾರೆ. ನದಿಯ ಕೆಳಭಾಗದ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿನ್ನೀರಿನ ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯನ್ನು ಕಡಿಮೆ ಮಾಡಲು ಅಧಿಕಾರಿಗಳು ಮಲಪ್ರಭಾ ನದಿಯ ಹೊರಹರಿವನ್ನು 12,000 ಕ್ಯೂಸೆಕ್‌ಗೆ ಹೆಚ್ಚಿಸಿದ್ದಾರೆ. ನದಿಗೆ ಒಳಹರಿವು ಸುಮಾರು 21,200 ಕ್ಯೂಸೆಕ್ ಇತ್ತು. ರೈತರಿಗೆ ಮತ್ತು ಮೀನು ಹಿಡಿಯಲು ನದಿಗೆ ಇಳಿಯದಂತೆ ಜನರಿಗೆ ಸೂಚನೆ ನೀಡಲಾಗಿದೆ. 

ಮೂವತ್ತು ಸೇತುವೆ ಮುಳುಗಡೆ 

 ಗೋಕಾಕ ಸಮೀಪದ ಸಪ್ತಸಾಗರ ಗ್ರಾಮ, ಲೋಳಸೂರು, ಹೊನ್ನೂರಗಿ, ಮಸಗುಪ್ಪಿ, ಹಾಲತ್ರಿ ಗ್ರಾಮಗಳಿಗೆ ನೀರು ನುಗ್ಗಿದೆ. ಅಥಣಿ ಸಮೀಪದ ನಡಿ ಇಂಗಳಗಾಂವ್ ಮತ್ತು ಚಿಕ್ಕೋಡಿ ಸಮೀಪದ ಜುಗುಲ್ ನಂತಹ ನದಿ ತೀರದ ಹಳ್ಳಿಗಳ ನಿವಾಸಿಗಳು ಕಾಳಜಿ ಕೇಂದ್ರಗಳಿಗೆ ಮತ್ತು ಸುರಕ್ಷಿತ ಸ್ಥಳಗಳಲ್ಲಿರುವ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 30 ಸೇತುವೆಗಳು ಮುಳುಗಡೆಯಾಗಿವೆ. ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ. 

ಅನಿರ್ದಿಷ್ಟಾವಧಿಗೆ ರೈಲು ಸ್ಥಗಿತ

ಹಾಸನ-ಮಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ಎಡಕುಮರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವಿನ ಹಳಿ ಮೇಲೆ ಭೂಕುಸಿತ ಉಂಟಾಗಿ ಜು.26 ರಿಂದ ಕರಾವಳಿ ಪ್ರದೇಶವು ರೈಲು ಸಂಪರ್ಕವನ್ನು ಕಳೆದುಕೊಂಡಿದೆ. ನೈಋತ್ಯ ರೈಲ್ವೆ, ಭೂ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯಾಣಿಕರು ಮತ್ತು ಸರಕು ಸಾಗಣೆ ರೈಲುಗಳ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.

ಬುಧವಾರದಿಂದ ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳ ಹಲವಾರು ಗ್ರಾಮಗಳಲ್ಲಿ ಮುಂಜಾನೆ ಸ್ವಲ್ಪ ಮಳೆಯಾಗಿದೆ. ಆದರೂ ಕೊಡಗು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದೆ.

Tags:    

Similar News