ಎನ್‌ಡಿಎ ಪ್ರಣಾಳಿಕೆ ಬಿಡುಗಡೆ: 1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ, 1 ಕೋಟಿ ಮಹಿಳೆಯರಿಗೆ ʼಲಕ್‌ಪತಿ ದೀದಿʼ ಭಾಗ್ಯ

ಬಿಹಾರದಲ್ಲಿ ಒಂದು ಕೋಟಿಗೂ ಹೆಚ್ಚು ಸರ್ಕಾರಿ ಉದ್ಯೋಗ ಸೃಷ್ಟಿ, ಯುವಜನರ ಕೌಶಲ ಉತ್ತೇಜಿಸಲು ಪ್ರತಿ ಜಿಲ್ಲೆಯಲ್ಲಿ "ಮೆಗಾ ಕೌಶಲ ಕೇಂದ್ರ" ಸ್ಥಾಪನೆ, ತರಬೇತಿ ಪಡೆದ ಯುವಕರಿಗೆ ವಿದೇಶದಲ್ಲಿ ಉದ್ಯೋಗಾವಕಾಶ ಒದಗಿಸುವ ಆಶ್ವಾಸನೆ ನೀಡಲಾಗಿದೆ.

Update: 2025-10-31 06:53 GMT
ಪಾಟ್ನಾದಲ್ಲಿ ಎನ್‌ಡಿಎ ಮಿತ್ರಕೂಟ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದವು.

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ಮಿತ್ರಕೂಟವು ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿತು. ಯುವಜನರಿಗೆ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಹಿಂದುಳಿದ ಸಮುದಾಯಗಳ ಕಲ್ಯಾಣ ಕೇಂದ್ರೀಕರಿಸಿ ಹಲವು ಮಹತ್ವದ ಭರವಸೆಗಳನ್ನು ಘೋಷಿಸಿದೆ. 

ಎನ್‌ಡಿಎ ಮೈತ್ರಿಕೂಟದ ಹಿರಿಯ ನಾಯಕರ ಸಮ್ಮುಖದಲ್ಲಿ ಪಾಟ್ನಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಬಿಹಾರದಲ್ಲಿ ಒಂದು ಕೋಟಿಗೂ ಹೆಚ್ಚು ಸರ್ಕಾರಿ ಉದ್ಯೋಗ ಸೃಷ್ಟಿ, ಯುವಜನರ ಕೌಶಲ ಉತ್ತೇಜಿಸಲು ಪ್ರತಿ ಜಿಲ್ಲೆಯಲ್ಲಿ "ಮೆಗಾ ಕೌಶಲ ಕೇಂದ್ರ" ಸ್ಥಾಪನೆ, ತರಬೇತಿ ಪಡೆದ ಯುವಕರಿಗೆ ವಿದೇಶದಲ್ಲಿ ಉದ್ಯೋಗಾವಕಾಶ ಒದಗಿಸುವ ಆಶ್ವಾಸನೆ ನೀಡಲಾಗಿದೆ.

ಮಹಿಳೆಯರಿಗೆ 2 ಲಕ್ಷ ರೂ.ಗಳವರೆಗೆ ಆರ್ಥಿಕ ಸಹಾಯ ಘೋಷಿಸಿದೆ. ಅತಿ ಹಿಂದುಳಿದ ವರ್ಗದವರಿಗೆ 10 ಲಕ್ಷದವರೆಗೆ ನೆರವು ನೀಡಲಾಗುವುದು. 1ಕೋಟಿ ಮಹಿಳೆಯರನ್ನು ಲಕ್‌ಪತಿ ದೀದಿ (ಲಕ್ಷಾಧೀಶ ಸೋದರಿ) ಯನ್ನಾಗಿ ಮಾಡಲಾಗುವುದು. ಮಿಷನ್ ಕರೋಡ್‌ಪತಿ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಬಿಹಾರದ 4 ಹೊಸ ನಗರಗಳಲ್ಲಿ ಮೆಟ್ರೋ ಸೇವೆ ಆರಂಭಿಸುವ ಜತೆಗೆ ಬಡ ಕುಟುಂಬಗಳಿಗೆ ‘ಪಂಚಾಮೃತ ಗ್ಯಾರಂಟಿ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಲಾಗಿದೆ.

ರಾಜ್ಯದಲ್ಲಿ 7 ಎಕ್ಸ್‌ಪ್ರೆಸ್‌ ಹೆದ್ದಾರಿಗಳ ನಿರ್ಮಾಣ, ಬಡ ಕುಟುಂಬಕ್ಕೆ 125 ಯೂನಿಟ್ ಉಚಿತ ವಿದ್ಯುತ್ ಭರವಸೆ, 3600 ಕಿ.ಮೀ. ರೈಲ್ವೆ ಮಾರ್ಗ ಆಧುನೀಕರಣದ ಭರವಸೆ ನೀಡಿದೆ. ಕೃಷಿ ಸಮುದಾಯದ ದೀರ್ಘಕಾಲದ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗೆ ಕಾನೂನುಬದ್ಧ ಖಾತರಿ ಒದಗಿಸುವುದಾಗಿ ಪ್ರಾಣಾಳಿಕೆಯಲ್ಲಿ ಘೋಷಿಸಿದೆ. 

ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ಮತ್ತು ನಮೋ ರಾಪಿಡ್ ರೈಲು ಸೇವೆ ವಿಸ್ತರಿಸಲಾಗುವುದು. 10 ಹೊಸ ನಗರಗಳಿಂದ ದೇಶೀಯ ವಿಮಾನಗಳ ಹಾರಾಟ ಆರಂಭಿಸಲಾಗುವುದು, ಪ್ರತಿ ಜಿಲ್ಲೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕಗಳು ಮತ್ತು 10 ಹೊಸ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. 5 ಲಕ್ಷದವರೆಗೆ ಉಚಿತ ಚಿಕಿತ್ಸೆ, 50 ಲಕ್ಷ ಹೊಸ ಪಕ್ಕಾ ಮನೆಗಳು, ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುವುದು. ಬಡ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳಿಗೆ ಕಿಂಡರ್‌ ಗಾರ್ಡನ್‌ನಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗುವುದು.

ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಪೌಷ್ಟಿಕ ಉಪಹಾರ, ಆಟೋ, ಟ್ಯಾಕ್ಸಿ, ಇ-ರಿಕ್ಷಾ ಚಾಲಕರಿಗೆ 4 ಲಕ್ಷ ರೂ. ಜೀವವಿಮೆ ನೀಡಲಾಗುವುದು. ಐದು ವರ್ಷಗಳಲ್ಲಿ ಬಿಹಾರ ಪ್ರವಾಹ ಮುಕ್ತವಾಗಲಿದೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. 

Tags:    

Similar News