ಹನೂರು ಹುಲಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಅರಣ್ಯ ಇಲಾಖೆ ಬಲೆಗೆ, ಮತ್ತಿಬ್ಬರು ವಶಕ್ಕೆ

ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ನಿವಾಸಿ ಪಚ್ಚಮಲ್ಲು ಅಲಿಯಾಸ್ ಸಣ್ಣ ಎಂಬಾತನೇ ಬಂಧಿತ ಆರೋಪಿ. ಈತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಕೃತ್ಯದ ಹಿಂದಿನ ಉದ್ದೇಶ ಮತ್ತು ಇದರಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

Update: 2025-10-05 05:42 GMT

ಹನೂರು ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ಕೃತ್ಯದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ನಿವಾಸಿ ಪಚ್ಚಮಲ್ಲು ಅಲಿಯಾಸ್ ಸಣ್ಣ ಎಂಬಾತನೇ ಬಂಧಿತ ಆರೋಪಿ. ಈತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಕೃತ್ಯದ ಹಿಂದಿನ ಉದ್ದೇಶ ಮತ್ತು ಇದರಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ. ಎಲ್ಲಾ ಶಂಕಿತರು ಒಂದೇ ಗ್ರಾಮದವರಾಗಿದ್ದು, ಸ್ಥಳೀಯ ಬೇಟೆ ಜಾಲದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಪಚ್ಚೆದೊಡ್ಡಿ ಗ್ರಾಮದ ಬಳಿ, 12 ವರ್ಷದ ಬೃಹತ್ ಗಂಡು ಹುಲಿಯನ್ನು ವಿಷವಿಕ್ಕಿ ಕೊಂದ ನಂತರ ಕೊಡಲಿಯಿಂದ ಮೂರು ತುಂಡುಗಳಾಗಿ ಕಡಿದು ಹೂಳಲು ಯತ್ನಿಸಲಾಗಿತ್ತು. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುಲಿಯ ದೇಹದ ಭಾಗಗಳು ಪತ್ತೆಯಾಗುವುದರೊಂದಿಗೆ ಈ ಭೀಕರ ಕೃತ್ಯ ಬೆಳಕಿಗೆ ಬಂದಿತ್ತು. ಸುಮಾರು 250 ಕೆ.ಜಿ ತೂಕದ ಈ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಕೀಳದಿರುವುದು, ಹತ್ಯೆಯ ಉದ್ದೇಶದ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಉನ್ನತ ಮಟ್ಟದ ತನಿಖೆಗೆ ಸಚಿವರ ಆದೇಶ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿದ್ದಾರೆ. ಎಂಟು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿರುವ ಅವರು, ಬೇಟೆಗಾರರನ್ನು ಶೀಘ್ರವಾಗಿ ಪತ್ತೆ ಹಚ್ಚಿ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 

Tags:    

Similar News