ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ: ಸಿಎಂ ಸಿದ್ದರಾಮಯ್ಯ
ಇದು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್;
ಕರ್ನಾಟಕದ 2024-25ನೇ ಸಾಲಿನ ಬಜೆಟ್ ಅನ್ನು ಇಂದು (ಫೆ. 16) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದ್ದು, ಈ ಬಾರಿ 3,71,383 ಕೋಟಿ ರೂಪಾಯಿಯ ಬಜೆಟ್ ಮಂಡಿಸಲಾಗುತ್ತಿದೆ. ಶರಣರು, ವಚನಕಾರರು, ಕುವೆಂಪು ಅವರ ಹೇಳಿಕೆಗಳನ್ನು ಉಲ್ಲೇಖಿಸುತ್ತಾ, ಬಸವಣ್ಣ, ಡಾ ಬಿ.ಆರ್. ಅಂಬೇಡ್ಕರ್ ಹೆಸರನ್ನು ಪ್ರಸ್ತಾಪಿಸುತ್ತಾ ಬಜೆಟ್ ಮಂಡನೆ ಮಾಡಿದ್ದಾರೆ. ನಮ್ಮದು ಎಲ್ಲರನ್ನೂ ಒಳಗೊಂಡ ಬಜೆಟ್ ಎಂದು ಘೋಷಿಸಿದ್ದಾರೆ.
ಬಜೆಟ್ ಭಾಷಣದ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದರು. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಎಂದು ಟೀಕೆ ಮಾಡುತ್ತಿದ್ದ ಕೇಂದ್ರ ಸರ್ಕಾರ ಅವುಗಳನ್ನು ನಕಲು ಮಾಡುತ್ತಿದೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ಗಳಲ್ಲ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೀಮಿತವಾಗಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಇವು ಪ್ರಮುಖ ಪಾತ್ರ ವಹಿಸಿವೆ. ಶಕ್ತಿ ಯೋಜನೆಯಿಂದ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 57 ಸಾವಿರ ಕೋಟಿ ಬಳಸಲಾಗುತ್ತಿದೆ. ಐದು ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ವಿಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ವಾಗ್ಧಾಳಿ ನಡೆಸಿದರು.
ದುರ್ಬಲ ವರ್ಗದವರಿಗೆ ಈ ಬಜೆಟ್ ನಲ್ಲಿ ಮತ್ತಷ್ಟು ಆದ್ಯತೆ ನೀಡಲಾಗುವುದು. ಗ್ಯಾರಂಟಿ ಯೋಜನೆ ಮೂಲಕ ಎಲ್ಲಾ ವರ್ಗದವರನ್ನು ವೃದ್ಧಿಗೊಳಿಸಲಾಗುತ್ತಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ನೀಡುವುದು ನಮ್ಮ ಆಶಯವಾಗಿದೆ.. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.