Series-1|ಜಿ.ಪಂ, ತಾ.ಪಂ. ಚುನಾವಣೆ : ಸರ್ಕಾರ - ರಾಜ್ಯ ಚುನಾವಣಾ ಆಯೋಗ ನಡುವೆ ತಿಕ್ಕಾಟ
ಸರ್ಕಾರವು 2021ರಲ್ಲಿ ಪಂಚಾಯತ್ ರಾಜ್‌ಗೆ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲಾ ಅಧಿಕಾರವನ್ನು ಸರ್ಕಾರವೇ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದು ಚುನಾವಣಾ ಆಯೋಗಕ್ಕೆ ಅಧಿಕಾರ ಇಲ್ಲದಂತಾಗಿದೆ;
ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಗ್ರಹಣ ಹಿಡಿದಿದ್ದು, ಮೀಸಲಾತಿ ಪಟ್ಟಿ ಸಂಬಂಧ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ತಾಂತ್ರಿಕ ತಿಕ್ಕಾಟ ನಡೆಯುತ್ತಲೇ ಇದೆ. ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸುವ ಸಂಬಂಧ ಹೈಕೋರ್ಟ್ ಸೂಚನೆ ಇದ್ದರೂ ರಾಜ್ಯ ಸರ್ಕಾರ ಎರಡು ಬಾರಿ ನ್ಯಾಯಾಂಗ ನಿಂದನೆ ಎದುರಿಸಿದೆ. ಮೀಸಲಾತಿ ಪಟ್ಟಿ ಪ್ರಕಟಿಸಿರುವುದು ಸರ್ಕಾರದ ಹಿಡಿತದಲ್ಲಿರುವುದರಿಂದ ಚುನಾವಣೆ ನಡೆಸಲು ನಡೆಸಲು ಸಾಧ್ಯವಾಗದೆ ರಾಜ್ಯ ಚುನಾವಣಾ ಆಯೋಗದ ಕೈ ಕಟ್ಟಿಹಾಕಿದಂತಾಗಿದೆ.
2021ರ ಮೇ ತಿಂಗಳಲ್ಲಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅವಧಿ ಮುಕ್ತಾಯಗೊಂಡಿತು. ಆಗ ಚುನಾವಣಾ ನಡೆಸಲು ಸಕಲ ಸಿದ್ಧತೆಯನ್ನು ರಾಜ್ಯ ಚುನಾವಣಾ ಆಯೋಗವು ಕೈಗೊಂಡಿತು. ಆದರೆ, ಆಗಿನ ಬಿಜೆಪಿ ಆಡಳಿತದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವಧಿಯಲ್ಲಿ ರಾಜಕೀಯ ಉದ್ದೇಶಕ್ಕಾಗಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಚುನಾವಣಾ ನಡೆಸುವುದು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಧಿಕಾರಗಳನ್ನು ಸರ್ಕಾರದ ವ್ಯಾಪ್ತಿಗೆ ತರಲಾಯಿತು. ಇದು ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ಸಮರಕ್ಕೆ ಕಾರಣವಾಗಿದೆ.
ಜಿಲ್ಲಾ ಮತ್ತು ತಾಲೂಕಿನ ಮೀಸಲಾತಿ ಸಮರ ಹೈಕೋರ್ಟ್ ಮೆಟ್ಟಿಲೇರಿದರೂ ಮುಗಿಯದಂತಾಗಿದೆ. ಸರ್ಕಾರಕ್ಕೂ ಸದ್ಯಕ್ಕಂತೂ ಚುನಾವಣೆಗಳನ್ನು ನಡೆಸುವ ಮನಸ್ಸು ಇರುವಂತಿಲ್ಲ. ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವಿನ ನ್ಯಾಯಾಲಯದ ಸಮರದ ಬೆಳವಣಿಗೆಗಳನ್ನು ಗಮನಿಸಿದರೆ ಈ ವರ್ಷವೂ ಚುನಾವಣೆ ನಡೆಯುವುದು ಅನುಮಾನ ಎಂಬಂತಾಗಿದೆ.
ಚುನಾವಣೆಗಾಗಿ ತೆಕ್ಕೆಗೆ ತೆಗೆದುಕೊಂಡ ಸರ್ಕಾರ..!
2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಬೇಕು ಎಂಬ ರಾಜಕೀಯ ಉದ್ದೇಶಕ್ಕಾಗಿ ಆಗಿನ ಬಿಜೆಪಿ ಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸದೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 2021ರಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಜ್ಜಾಗಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿತ್ತು.
ಜಿಲ್ಲಾ ಮತ್ತು ತಾಲೂಕು ಚುನಾವಣೆ ನಡೆದರೆ ಅದರಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಹೆಚ್ಚಿನ ಸ್ಥಾನ ಗಳಿಸುವ ಮಾಹಿತಿ ಲಭ್ಯವಾಗಿತ್ತು. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ ಇತ್ತು. ಇದರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಮುಂದೂಡಲು ಮೀಸಲಾತಿ ಪಟ್ಟಿ ಮತ್ತು ಗಡಿ ನಿಗದಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದು ಹಿಡಿತ ಸಾಧಿಸಿತು. ಸರ್ಕಾರದ ಕಪಿಮುಷ್ಠಿಯಲ್ಲಿದ್ದರೆ ಜಿಲ್ಲಾ, ತಾಲೂಕು ಪಂಚಾಯತ್‌ನಲ್ಲಿ ಯಾವ ಸದಸ್ಯರು ಇಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಅಧಿಕಾರ ಗದ್ದುಗೆ ಹಿಡಿಯಬಹುದು ಎಂಬ ಲೆಕ್ಕಾಚಾರ ಇತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸದೆ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಪಂಚಾಯತ್‌ಗೆ ತಿದ್ದುಪಡಿ ಮಾಡಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಆದರೂ, ವಿಧಾನಸಭೆಯಲ್ಲಿ ಬಿಜೆಪಿ ಸೋಲನುಭವಿಸಬೇಕಾಯಿತು. ಕಾಂಗ್ರೆಸ್ 135 ಸ್ಥಾನಗಳಲ್ಲಿ ಭರ್ಜರಿಗೆ ಗೆಲುವು ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಿತು. ಬಿಜೆಪಿ 66, ಜೆಡಿಎಸ್ 19 ಮತ್ತು ಇತರರು ನಾಲ್ಕು ಸ್ಥಾನ ಪಡೆದುಕೊಂಡರು.
ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ವಿಳಂಬ
ರಾಜ್ಯದ 31 ಜಿಲ್ಲೆಗಳ 1,130 ಜಿಲ್ಲಾಪಂಚಾಯತ್ ಕ್ಷೇತ್ರಗಳು ಹಾಗೂ 239 ತಾಲೂಕುಗಳ 3,671 ತಾಲೂಕು ಪಂಚಾಯತ್ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರವು ಚುನಾವಣ ಆಯೋಗಕ್ಕೆ ಸಲ್ಲಿಸಬೇಕಿದೆ. ಆದರೆ, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ವಿಳಂಬವಾಗುತ್ತಿದೆ. ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಸಹ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ 2021ರ ಮೇಯಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನನೆಗುದಿಗೆ ಬಿದ್ದಿದೆ. ಈ ವಿಚಾರವಾಗಿ 2021ರ ನವೆಂಬರ್ ತಿಂಗಳಲ್ಲಿ ರಾಜ್ಯ ಚುನಾವಣ ಆಯೋಗ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋವಿಡ್, ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಗೊಂದಲ, ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ರಾಜ್ಯ ಚುನಾವಣ ಆಯೋಗದಿಂದ ವಾಪಸ್ ಪಡೆದಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ನ್ಯಾ. ಭಕ್ತವತ್ಸಲ ಸಮಿತಿ ರಚನೆ, ವಿಧಾನಸಭೆ ಚುನಾವಣೆ ಇತ್ಯಾದಿ ಕಾರಣಗಳಿಂದ 4 ವರ್ಷಗಳಿಂದ ಚುನಾವಣೆ ನಡೆದಿಲ್ಲ.
ಚುನಾವಣಾ ವಿಳಂಬಕ್ಕೆ ಕಾರಣಗಳು
ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿದ ಅಂದಿನ ಬಿಜೆಪಿ ಸರ್ಕಾರವು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ನ ಗಡಿ ನಿಗದಿ (Delimitation) ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಲಾಗಿತ್ತು. ಅದರ ವರದಿ ಬಂದ ಮೇಲೆ ಮೀಸಲಾತಿ ಪ್ರಕಟಿಸಿ ಸರ್ಕಾರ ಚುನಾವಣೆ ನಡೆಸಲು ಉದ್ದೇಶಿಸಿತ್ತು.
ಈ ಹಿಂದೆ ಸ್ಥಳೀಯ ಸಂಸ್ಥೆಗಳ ಗಡಿ ನಿರ್ಣಯ ಮತ್ತು ಮೀಸಲಾತಿಯನ್ನು ರಾಜ್ಯ ಚುನಾವಣ ಆಯೋಗ ಸರಿಯಾಗಿ ನಿಗದಿಪಡಿಸಿಲ್ಲ. ಇದರಿಂದ ಅನೇಕರಿಗೆ ಅನ್ಯಾಯ ಆಗಲಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೀಮಾ ನಿರ್ಣಯ ಆಯೋಗ ರಚಿಸಲಾಗಿತ್ತು. ಈ ಮಧ್ಯೆ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ನ್ಯಾ.ಭಕ್ತವತ್ಸಲ ನೇತೃತ್ವದ ಆಯೋಗ ರಚನೆಗೆ ಕ್ರಮ ಕೈಗೊಂಡಿತು.
ಲಕ್ಷ್ಮೀನಾರಾಯಣ ನೇತೃತ್ವದ ಆಯೋಗದ ವರದಿಯು ಸಮಂಜಸವಾಗಿಲ್ಲ ಎಂದು ಸರ್ಕಾರವು ಮತ್ತೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಕಾಂಬ್ಳೆ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತು. ಈ ಆಯೋಗವು ಸಹ ಗಡಿ ನಿರ್ಣಯ ಕೈಗೊಂಡು ವರದಿಯನ್ನು ಸರ್ಕಾರಕ್ಕೆ ನೀಡಿದೆ. ನ್ಯಾಯಾಲಯದ ಮುಂದೆ ಸರ್ಕಾರವು ಗಡಿ ಗುರುತು ಕೆಲಸ ಮುಗಿದಿದೆ ಎಂದು ಹೇಳಿದೆ. ಅಲ್ಲದೇ, ಮೀಸಲಾತಿಯ ಕರಡು ಪಟ್ಟಿಯೂ ಸಹ ಸಿದ್ದವಿದೆ ಎಂದು ಹೇಳಿದೆ. ಆದರೆ, ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಸರ್ಕಾರ ಈ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ನ್ಯಾಯಾಲಯದಲ್ಲಿ ಮುಂದುವರಿದ ಹೋರಾಟ
2021ರಲ್ಲಿ ಸರ್ಕಾರವು ಮೀಸಲಾತಿ ಪಟ್ಟಿ ಪ್ರಕಟಿಸುವುದಾಗಿ ಹೇಳಿ ಆಯೋಗದ ಅಧಿಕಾರವನ್ನು ಕಿತ್ತುಕೊಂಡ ಬಳಿಕ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರ ನಡುವೆ ಕಾನೂನು ಸಮರ ತೀವ್ರಗೊಂಡಿತು. ಅದಕ್ಕೂ ಮುನ್ನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ 5 ಲಕ್ಷ ರೂ. ದಂಡ ವಿಧಿಸಿತ್ತು.
2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸಿತ್ತು. ಆದರೆ, ಸರ್ಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿತ್ತು. ಇದಕ್ಕಾಗಿ ಪ್ರತ್ಯೇಕ ಸೀಮಾ ನಿರ್ಣಯ ಆಯೋಗ ರಚಿಸಿ ಅದಕ್ಕೆ ಹೊಣೆ ವಹಿಸಿತ್ತು. ಆಯೋಗವು ಈ ಕ್ರಮವನ್ನು ಪ್ರಶ್ನಿಸಿತ್ತು. ಆಗಿನಿಂದಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಮೀಸಲಾತಿ ಪ್ರಕಟಿಸುವ ಬಗ್ಗೆ ಅಶ್ವಾಸನೆ ನೀಡುತ್ತಿದೆಯಾದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಎರಡು ಬಾರಿ ನ್ಯಾಯಾಂಗ ನಿಂದನೆಯನ್ನು ಸರ್ಕಾರ ಅನುಭವಿಸಿದೆ. ಈಗಲಾದರೂ ಸರ್ಕಾರ ಮೀಸಲಾತಿ ಪ್ರಕಟಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.
ಚುನಾವಣಾ ಆಯೋಗಕ್ಕೆ ಈ ಹಿಂದೆ ಅಧಿಕಾರ ಇತ್ತು, ಈಗ ಇಲ್ಲ!
ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರಕ್ಕೆ ಇತ್ತು. ಆಗ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯುತ್ತಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿತ್ತು. ಜನಪ್ರತಿನಿಧಿಗಳು ಜನರಿಗೆ ಸುಲಭವಾಗಿ ಸಿಗುತ್ತಿದ್ದು, ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಎಲ್ಲದಕ್ಕೂ ಶಾಸಕರ ಮೇಲೆ ಅವಲಂಬಿತರಾಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿದೆ.
ಆದರೆ, ಸರ್ಕಾರವು 2021ರಲ್ಲಿ ಪಂಚಾಯತ್ ರಾಜ್‌ಗೆ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲಾ ಅಧಿಕಾರವನ್ನು ಸರ್ಕಾರವೇ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಮೀಸಲಾತಿ ಪಟ್ಟಿಯನ್ನು ಪ್ರಸ್ತುತ ರಾಜ್ಯ ಸರ್ಕಾರವೇ ಪ್ರಕಟಿಸಬೇಕಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲದಂತಾಗಿದೆ. ರಾಜ್ಯ ಚುನಾವಣಾ ಆಯೋಗವು ಹಲ್ಲು ಕಿತ್ತಿದ ಹಾವಿನಂತಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳು ಇಲ್ಲದೆ, ಯಾವುದೇ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸದಂತಾಗಿದೆ. ಎಲ್ಲವೂ ಶಾಸಕರ ಕೈಯಲ್ಲಿಯೇ ಅಧಿಕಾರ ಇರುವಂತಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರ ಬಳಿ ಹೋಗಲು ಸಾಧ್ಯವಿಲ್ಲದಂತಾಗಿದೆ ಎಂಬ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬಂದಿದೆ.
ನ್ಯಾಯಾಲಯದ ಮೊರೆ ಹೋಗಲು ಚಿಂತನೆ; ಅಧಿಕಾರ ವಾಪಸಾತಿಗೆ ಕಸರತ್ತು
ಈ ಮೊದಲು ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಮತ್ತೊಮ್ಮೆ ಮರಳಿ ತರಲು ಚಿಂತನೆ ನಡೆಸಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ರಿಟ್ ಅರ್ಜಿ ಹಾಕುವ ಬಗ್ಗೆ ಯೋಚನೆ ಮಾಡಿದೆ. ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್.ಸಂಗ್ರೇಶಿ, ಮತ್ತೊಮ್ಮೆ ಆಯೋಗದ ವ್ಯಾಪ್ತಿಗೆ ಮೀಸಲಾತಿ ನಿಗದಿ ಅಧಿಕಾರವನ್ನು ಪಡೆಯಲು ಕಾನೂನು ಹೋರಾಟ ನಡೆಸಬೇಕಾಗಿದೆ. ಈ ಬಗ್ಗೆ ಕಾನೂನು ತಜ್ಞರ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
"ಒಂದು ವೇಳೆ ಆಯೋಗವೇ ಮೀಸಲಾತಿ ಪಟ್ಟಿ ನಿಗದಿ ಪಡಿಸುವ ಅಧಿಕಾರಿ ಮರಳಿ ಪಡೆದರೆ ಕಾಲಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ಸರ್ಕಾರದ ಹಿಡಿತದಲ್ಲಿರುವ ಕಾರಣ ಮೀಸಲಾತಿ ಪಟ್ಟಿ ಹೊರಡಿಸುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿದೆ. ಅಧಿಕಾರವನ್ನು ಮತ್ತೊಮ್ಮೆ ಪಡೆಯಲು ನ್ಯಾಯಾಲಯಕ್ಕೆ ರಿಟ್ ಅರ್ಜಿ ಹಾಕುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕಾರ್ಯ ಕುಂಠಿತ
ನಾಲ್ಕು ವರ್ಷಗಳಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಜನಪ್ರತಿನಿಧಿಗಳೇ ಇಲ್ಲ. ಇದು ಸ್ಥಳೀಯ ಮಟ್ಟದಲ್ಲಿ ರಾಜಕೀಯ, ಆಡಳಿತಾತ್ಮಕ ಸಹಿತ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಜನಪ್ರತಿನಿಧಿಗಳು ಸ್ಥಳೀಯಮಟ್ಟದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜನರ ಸಮಸ್ಯೆಗಳನ್ನು ಆಲಿಸುವುದಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು ಸುಲಭವಾಗಿ ಕೈಗೆ ಸಿಗುತ್ತಾರೆ. ಆದರೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗೆ ಸದಸ್ಯರೇ ಇಲ್ಲದ ಕಾರಣ ಜನರ ಸಮಸ್ಯೆಗಳನ್ನು ಆಲಿಸಲು ಯಾರು ಇಲ್ಲದಂತಾಗಿದೆ.
ಅಧಿಕಾರ ವಿಕೇಂದ್ರಿಕರಣಕ್ಕೆ ಸರ್ಕಾರವೇ ಹೇಗೆ ಅಡ್ಡಿ?
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅಧಿನಿಯಮ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 3 ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿರುತ್ತವೆ. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ವ್ಯವಸ್ಥೆ ಇದೆ. ರಾಜ್ಯದ ಗ್ರಾಮೀಣ ಪ್ರದೇಶದ ಆಡಳಿತದಲ್ಲಿ ಪ್ರಜಾಪ್ರಭುತ್ವದ ವಿಕೇಂದ್ರಿಕರಣವನ್ನು ಸಾಧಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ.
ಅಧಿಕಾರ ವಿಕೇಂದ್ರಿಕರಣದಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ. ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯು ಕರ್ನಾಟಕ ಮಾದರಿಯಾಗಿದೆ. ಆದರೆ, ಇತ್ತೀಚಿಗಿನ ಸರ್ಕಾರಗಳು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸುವ ಮೂಲಕ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತು ನೀಡಬೇಕಾಗಿತ್ತು. ಆದರೆ, ಅದರ ಬದಲಿಗೆ ಗಡಿ, ಮೀಸಲಾತಿ ನೆಪದಲ್ಲಿ ನಾಲ್ಕು ವರ್ಷದಿಂದ ಚುನಾವಣೆ ನಡೆಸದೆ ದಿನದೂಡುತ್ತಿದೆ. ದೇಶದಲ್ಲಿಯೇ ಅಧಿಕಾರ ವಿಕೇಂದ್ರಿಕರಣಕ್ಕೆ ಮಾದರಿಯಾಗಿರುವ ರಾಜ್ಯದ ಹೆಸರಿಗೆ ಅಪಕೀರ್ತಿ ಬಾರದಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
(ವಿಶೇಷ ವರದಿಗಳ ಸರಣಿ ಮುಂದುವರಿಯಲಿದೆ. ಎರಡನೇ ಭಾಗದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸದಿರುವುದಕ್ಕೆ ಎಲ್ಲೆಡೆ ಅಸಮಾಧಾನ ಕುರಿತ ವಿವರ ವರದಿ ಪ್ರಕಟವಾಗಲಿದೆ.)