
ಮೀಸಲಾತಿ ಪ್ರಕಟಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು:ಸಂಗ್ರೇಶಿ
ಸುಪ್ರೀಂಕೋರ್ಟ್ ಮುಂದೆ ಸರ್ಕಾರವೇ ಮೇ.31ರೊಳಗೆ ಮೀಸಲಾತಿ ಹೊರಡಿಸಲಾಗುವುದು ಎಂದು ತಿಳಿಸಿತ್ತು. ಆದರೂ ಈವರೆಗೆ ಮೀಸಲಾತಿ ಪ್ರಕಟಿಸಿಲ್ಲ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ನ್ಯಾಯಾಲಯದ ಮೂಲಕ ಜೈಲಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್.ಸಂಗ್ರೇಶಿ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದ ಆದೇಶವಿದ್ದರೂ ಸರ್ಕಾರವು ಮೀಸಲಾತಿ ಪ್ರಕಟಿಸದಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಸುಪ್ರೀಂಕೋರ್ಟ್ ಮುಂದೆ ಸರ್ಕಾರವೇ ಮೇ.31ರೊಳಗೆ ಮೀಸಲಾತಿ ಹೊರಡಿಸಲಾಗುವುದು ಎಂದು ತಿಳಿಸಿತ್ತು. ಆದರೂ ಈವರೆಗೆ ಮೀಸಲಾತಿ ಪ್ರಕಟಿಸಿಲ್ಲ. ಮೀಸಲಾತಿ ಪ್ರಕಟಿಸುವ ವಿಚಾರದಲ್ಲಿ ಎರಡು ಬಾರಿ ನ್ಯಾಯಾಂಗ ನಿಂದನೆಯಾಗಿದೆ. ಆದರೂ ಸರ್ಕಾರವು ಎಚ್ಚೆತ್ತು ಕೊಂಡಿಲ್ಲ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಲಾಗುವುದು. ಮೀಸಲಾತಿ ಪಟ್ಟಿ ಪ್ರಕಟಿಸಲು ವಿಳಂಬವಾಗಲು ಕಾರಣರಾದ ಅಧಿಕಾರಿಗಳನ್ನು ನ್ಯಾಯಾಲಯದ ಮೂಲಕವೇ ಜೈಲಿಗೆ ಕಳುಹಿಸುವ ಕಾರ್ಯ ಮಾಡಲಾಗುವುದು ಎಂದು ಸರ್ಕಾರ ನಡೆಯ ವಿರುದ್ಧ ಕಿಡಿಕಾರಿದರು.
ಆಯೋಗವು ಮತ್ತೊಮ್ಮೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಈ ಬಾರಿ ನ್ಯಾಯಾಲಯದಲ್ಲಿ ಅಧಿಕಾರಿಗಳು ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಪದೇ ಪದೇ ನ್ಯಾಯಾಂಗ ನಿಂದನೆಯನ್ನು ಮಾಡುತ್ತಿದೆ. ಇದು ಸರಿಯಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕು.ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಆದರೆ, ಸರ್ಕಾರ ವಿಳಂಬ ಧೋರಣೆಯಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಚುನಾವಣೆ ವಿಳಂಬದಲ್ಲಿ ಆಯೋಗದ ಯಾವುದೇ ಪಾತ್ರ ಇಲ್ಲ. ಸರ್ಕಾರಕ್ಕೆ ಆಸಕ್ತಿ ಇದೆಯೋ, ಇಲ್ಲವೋ ಎಂಬುದನ್ನು ನಾವು ಹೇಳುವುದಿಲ್ಲ. ಸರ್ಕಾರ ಆದಷ್ಟು ಬೇಗ ಮೀಸಲಾತಿ ಪಟ್ಟಿ ಕೊಡಬೇಕು. ಮೀಸಲಾತಿ ಪಟ್ಟಿ ಸಲ್ಲಿಸದಿದ್ದರೆ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ನಾವು ಭಾವಿಸಬೇಕಾಗುತ್ತದೆ. ಸರ್ಕಾರಕ್ಕೆ ನಾವು ಪತ್ರದ ಮೂಲಕ ತಿಳಿಸಿದ್ದೇವೆ. ಆದರೆ ಇದುವರೆಗೆ ನಮಗೆ ಮೀಸಲಾತಿ ಪಟ್ಟಿ ಸಿಕ್ಕಿಲ್ಲ. ಸಾಂವಿಧಾನಿಕವಾಗಿ ರಚನೆಗೊಂಡ ರಾಜ್ಯ ಚುನಾವಣಾ ಆಯೋಗ ಕೈ ಕಟ್ಟಿ ಕೂರುವಂತಾಗಿದೆ. ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುವುದು ಅಥವಾ ನ್ಯಾಯಾಲಯಕ್ಕೆ ಹೋಗುವುದು ಮಾತ್ರ ಆಯೋಗದ ಬಳಿ ಉಳಿದಿರುವ ದಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಪಷ್ಟತೆ ಕೋರಿ ಸರ್ಕಾರಕ್ಕೆ ಪತ್ರ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಐದು ಮಹಾನಗರ ಪಾಲಿಕೆಗಳಾಗಿ ಮಾಡಲಾಗಿದೆ. ಹೊಸ ಕಾಯ್ದೆಯಲ್ಲಿ ಮತದಾರರ ಪಟ್ಟಿ ಸಿದ್ದಪಡಿಸುವ ಸಂಬಂಧ ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡಿಲ್ಲ. ವಿಧಾನಸಭೆಯ ಮತದಾರರ ಪಟ್ಟಿಯನ್ನೇ ಅನುಸರಿಸಬೇಕೋ? ಅಥವಾ ಆಯೋಗವೇ ಸಿದ್ದಪಡಿಸಿಕೊಳ್ಳಬಹುದೇ ಎಂಬುದರ ಬಗ್ಗೆ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಹೊಸದಾಗಿ ಗಡಿ ಗುರುತಿಸಬೇಕಿದೆ. ಅಲ್ಲದೇ, ಮೀಸಲಾತಿ ಪಟ್ಟಿಯನ್ನು ಸಹ ಪ್ರಕಟಿಸಬೇಕಾಗಿದೆ. ಸರ್ಕಾರವು ಈ ಎರಡು ಕೆಲಸ ಮಾಡಬೇಕಾಗಿದೆ. ಪಾಲಿಕೆಗೆ ಮೀಸಲಾತಿ ಪಟ್ಟಿಯನ್ನು ನೀಡುವ ಸಂಬಂಧವೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಮೀಸಲಾತಿ ಪಟ್ಟಿ ಹೊರಡಿಸಿದ ಬಳಿಕ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಫೆಬ್ರವರಿ ವೇಳೆಗೆ ಚುನಾವಣೆ ನಡೆಸಬಹುದಾಗಿದೆ ಎಂದು ತಿಳಿಸಿದರು
ಮೀಸಲಾತಿ ಪಡೆಯಲು ನ್ಯಾಯಾಲಯದ ಮೊರೆ:
ಮೀಸಲಾತಿ ಪಟ್ಟಿಯನ್ನು ಪ್ರಸ್ತುತ ರಾಜ್ಯ ಸರ್ಕಾರವೇ ಪ್ರಕಟಿಸುತ್ತಿದೆ. ಆದರೆ, ಮೊದಲು ಈ ಅಧಿಕಾರ ಆಯೋಗದ ಅಧೀನದಲ್ಲಿತ್ತು. ಮತ್ತೊಮ್ಮೆ ಆಯೋಗದ ಅಧಿಕಾರ ವ್ಯಾಪ್ತಿಗೆ ತರಲು ಕಾನೂನು ಹೋರಾಟ ನಡಸುವ ಚಿಂತನೆ ಇದೆ. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಹಾಕುವ ಬಗ್ಗೆ ಆಯೋಗದ ಚಿಂತನೆ ಇದೆ. ಒಂದು ವೇಳೆ ಆಯೋಗವೇ ಮೀಸಲಾತಿ ಪಟ್ಟಿ ನಿಗದಿ ಪಡಿಸುವ ಅಧಿಕಾರಿ ಮರಳಿ ಪಡೆದರೆ ಕಾಲಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ಸರ್ಕಾರದ ಹಿಡಿತದಲ್ಲಿರುವ ಕಾರಣ ಮೀಸಲಾತಿ ಪಟ್ಟಿ ಹೊರಡಿಸುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿದೆ. ಅಧಿಕಾರವನ್ನು ಮತ್ತೊಮ್ಮೆ ಪಡೆಯಲು ನ್ಯಾಯಾಲಯಕ್ಕೆ ರಿಟ್ ಅರ್ಜಿ ಹಾಕುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.