ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡುತ್ತಾರೆ: ಬಿ ಕೆ ಹರಿಪ್ರಸಾದ್
“ರಾಜ್ಯದ ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯಪಾಲರು ರಾಜ್ಯ ಬಿಜೆಪಿಯ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ಧಾರೆ ಎನಿಸುತ್ತದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜಭವನ ದುರುಪಯೋಗವಾಗುತ್ತಿದೆ. ರಾಜ್ಯಪಾಲರು ರಾಜಭವನವನ್ನು ಬಳಸಿಕೊಂಡು ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿಯ ಅಧ್ಯಕ್ಷರಂತೆ, ಆ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿರುವವರು ಆ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಅದು ಬಿಟ್ಟು ಬಿಜೆಪಿಯ ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದಿಲ್ಲ” ಎಂದು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.
“ಈ ಹಿಂದೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡುವುತ್ತಿತ್ತು. ಇದೀಗ ರಾಜ್ಯಪಾಲರನ್ನು ಬಳಸಿಕೊಂಡು ಆ ವಾಮಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಸಿದ್ದರಾಮಯ್ಯ ಮೇಲೆ ಮಾಡುತ್ತಿರುವ ಆರೋಪಗಳು ಕಪೋಲಕಲ್ಪಿತವಾಗಿವೆ” ಎಂದು ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು.
“ರಾಜ್ಯಪಾಲರಾದ ಗೆಲ್ಹೋಟ್ ಅವರು ಈ ಮೊದಲು ರಾಜಕಾರಣಿಯಾಗಿದ್ದರು. ರಾಜಕಾರಣಿಯಾಗಿ ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ದಲಿತರು ಎಂಬುದನ್ನು ಮುಂದೆ ತಂದು ರಾಜಕಾರಣ ಮಾಡುವ ಬಿಜೆಪಿಗರು, ತಮಗೆ ದಲಿತರ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ಸಂವಿಧಾನ ಬದಲಾವಣೆಯ ಬಗ್ಗೆ ಯಾಕೆ ಮಾತನಾಡುತ್ತಿದ್ದರು?” ಎಂದು ಪ್ರಶ್ನಿಸಿದ ಅವರು, “ಸಂವಿಧಾನಿಕ ಹುದ್ದೆಯಲ್ಲಿದ್ದವರ ಬಗ್ಗೆ ನಾವು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ, ಕಾನೂನು ಹೋರಾಟ ಮಾಡುತ್ತೇವೆ” ಎಂದು ಹೇಳಿದರು.