ಗ್ರಾಮೀಣ ಪ್ರದೇಶದ ಇ-ಸ್ವತ್ತು ಖಾತೆ ಬದಲಾವಣೆಗೆ 1000 ರೂ. ಶುಲ್ಕ: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಬರೆ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2021ರ ನಿಯಮ 24ರಂತೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ, ಬದಲಾವಣೆಗೆ 1,000 ರೂ. ಶುಲ್ಕ ವಿಧಿಸಬಹುದಾಗಿದ್ದು ಖಾತೆ ವಿತರಿಸಿದ ಒಂದು ವರ್ಷದೊಳಗೆ ಗರಿಷ್ಠ ನಾಲ್ಕು ಕಂತುಗಳಲ್ಲಿ ಸಂಗ್ರಹಿಸುವಂತೆ ತಿಳಿಸಿದೆ.;
ಗ್ರಾಮಪಂಚಾಯಿತಿಗಳಲ್ಲಿ ವಿತರಿಸುವ ಇ-ಸ್ವತ್ತು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಮತ್ತೊಂದು ಆರ್ಥಿಕ ಆಘಾತ ಕೊಟ್ಟಿದೆ. ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಗೂ ಕಂದಾಯ ಭೂಮಿಗಳಲ್ಲಿ ವಾಸವಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆಯನ್ವಯ ಸಕ್ರಮಗೊಂಡಿರುವ ನಿವೇಶನ ಮತ್ತು ಮನೆಗಳಿಗೆ ನೀಡಲಾದ ಇ-ಸ್ವತ್ತು ಖಾತೆಗಳಲ್ಲಿ ಮಾಲೀಕರ ಹೆಸರು ಸೇರ್ಪಡೆ ಅಥವಾ ಬದಲಾವಣೆ ಮಾಡಲು ಇನ್ನು ಮುಂದೆ 1,000 ರೂಪಾಯಿಗಳ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಈ ಹೊಸ ನಿಯಮದಂತೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕರಣ 94(ಸಿ), 94(ಸಿ.ಸಿ) ಹಾಗೂ 94-(ಡಿ) ರ ಅಡಿಯಲ್ಲಿ ಸಕ್ರಮಗೊಳಿಸಲಾದ ನಿವೇಶನ ಮತ್ತು ಮನೆಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸಲಾಗುವ ನಮೂನೆ-9 ಮತ್ತು ನಮೂನೆ-11ಎ ದಾಖಲೆಗಳಲ್ಲಿನ ಮಾಲೀಕತ್ವದ ವಿವರಗಳನ್ನು ಮಾರ್ಪಡಿಸಲು ಈ ಶುಲ್ಕ ಅನ್ವಯವಾಗಲಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು 2021ರ ನಿಯಮ 24ರ ಅಡಿಯಲ್ಲಿ ಈ ಶುಲ್ಕವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವಾಗ ಹೆಸರು ಸೇರ್ಪಡೆ ಮಾಡಬಹುದು?
ಖಾತೆದಾರರು ಈ 1,000 ರೂಪಾಯಿ ಶುಲ್ಕವನ್ನು ಖಾತೆ ವಿತರಿಸಿದ ದಿನಾಂಕದಿಂದ ಒಂದು ವರ್ಷದೊಳಗೆ, ಗರಿಷ್ಠ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಇ-ಸ್ವತ್ತು ದಾಖಲೆಯಲ್ಲಿ ಒಬ್ಬರೇ ಮಾಲೀಕರಿದ್ದು, ಹೆಚ್ಚುವರಿ ಮಾಲೀಕರ ಹೆಸರನ್ನು ಸೇರಿಸಲು, ತಂದೆಯ ಹೆಸರಿನಿಂದ ಮಗನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲು ಅಥವಾ ನಿವೇಶನ/ಮನೆಯನ್ನು ಮಾರಾಟ ಮತ್ತು ಖರೀದಿ ಮಾಡುವ ಸಂದರ್ಭಗಳಲ್ಲಿ ಖಾತೆಯಲ್ಲಿನ ಮಾಲೀಕರ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲೆಲ್ಲಾ ಈ ಹೊಸ ಶುಲ್ಕ ಅನ್ವಯವಾಗಲಿದೆ.
ಕಂದಾಯ ಇಲಾಖೆಯು ಸಕ್ರಮಗೊಂಡ ನಿವೇಶನ ಮತ್ತು ಮನೆಗಳಿಗೆ ಅಧಿಕೃತ ಖಾತೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಇ-ಸ್ವತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ತಂತ್ರಾಂಶದ ಮೂಲಕವೇ ನಮೂನೆ 9 ಹಾಗೂ ನಮೂನೆ 11ಎ ನಲ್ಲಿ ಇ-ಸ್ವತ್ತುಗಳನ್ನು ವಿತರಿಸುತ್ತಿದ್ದಾರೆ. ಒಂದು ವೇಳೆ, ನಿಗದಿತ ಒಂದು ವರ್ಷದೊಳಗೆ ಈ ಶುಲ್ಕವನ್ನು ಪಾವತಿಸಲು ವಿಫಲವಾದರೆ, ಸಂಬಂಧಪಟ್ಟ ಇ-ಸ್ವತ್ತು ದಾಖಲೆಯು ನಿಷ್ಕ್ರಿಯಗೊಳ್ಳಲಿದೆ. ನಂತರ, ಹೆಸರು ಬದಲಾವಣೆ ಮಾಡಲು ಬಯಸಿದಲ್ಲಿ, ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಸರ್ಕಾರದ ಈ ನಿರ್ಧಾರವು ಗ್ರಾಮೀಣ ಭಾಗದ ಜನರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡವನ್ನು ಹೇರಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.