ಮಲೆನಾಡಿನ ಮಂದಿಯ ಪ್ರಾಣ ಹಿಂಡುವ ಮಂಗನ ಕಾಯಿಲೆ; ಲಸಿಕೆಗೆ 2 ಕೋಟಿ ಖರ್ಚು ಮಾಡಲೂ ಸರ್ಕಾರದ ಬಳಿ ದುಡ್ಡಿಲ್ಲ!
ಈ ಮೊದಲು ನೀಡುತ್ತಿದ್ದ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವುದರಿಂದ ಸರ್ಕಾರವೇ 2022ರಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಿತು. ಆ ಬಳಿಕ ಕಾಯಿಲೆಗೆ ಇಲ್ಲಿಯವರೆಗೂ ನಿರ್ದಿಷ್ಟವಾದ ಲಸಿಕೆ ಕಂಡುಹಿಡಿಯದಿರುವುದು ದರುಂತವೇ ಸರಿ.;
ಕರ್ನಾಟಕದ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ - KFD) ಭೀತಿ ಮುಂದುವರಿದಿದೆ. 2019ರಿಂದ 2025ರವರೆಗೆ ಈ ಮಾರಣಾಂತಿಕ ಕಾಯಿಲೆಗೆ ಒಟ್ಟು 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2025ರಲ್ಲಿ ಒಟ್ಟು 8 ಮಂದಿ ಮೃತಪಟ್ಟಿರುವುದಾಗಿಯೂ ವರದಿಯಾಗಿದೆ. ಈ ವೈರಲ್ ಸೋಂಕು ಮಲೆನಾಡಿನ ಜನರನ್ನು ಸತತವಾಗಿ ಬಾಧಿಸುತ್ತಿರುವ ಹೊರತಾಗಿಯೂ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಲಸಿಕೆ ಕಂಡು ಹಿಡಿಯಲು ಸರ್ಕಾರ 2 ಕೋಟಿ ರೂಪಾಯಿ ಖರ್ಚು ಮಾಡುತ್ತಿಲ್ಲ ಎಂಬುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಡಿನಂಚಿನ ಪ್ರದೇಶಗಳಲ್ಲಿ ಹರಡುವ ಈ ಕಾಯಿಲೆಗೆ ಇದುವರೆಗೂ ನಿರ್ದಿಷ್ಟ ಲಸಿಕೆಯೊಂದು ಕಂಡುಹಿಡಿಯದಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗೆಂದು ಲಸಿಕೆ ಕಂಡು ಹಿಡಿಯಲು ಮುಂದಾಗಿರುವವರಿಗೂ ಸರ್ಕಾರ ನಿರಾಸೆ ಮೂಡಿಸಿದ್ದು, ಜನರ ಸಾವಿಗೆ ಕೊನೆಯೇ ಇಲ್ಲ ಎಂಬಂತಾಗಿದೆ.
ಲಸಿಕೆ ಅಭಿವೃದ್ಧಿಯಲ್ಲಿ ವಿಳಂಬ ಮತ್ತು ರೋಗ ಪತ್ತೆಯಲ್ಲಿ ಪ್ರಗತಿ
ಮಂಗನ ಕಾಯಿಲೆಗೆ ಇದುವರೆಗೂ ಪರಿಣಾಮಕಾರಿ ಲಸಿಕೆ ಲಭ್ಯವಿಲ್ಲ. ಹಿಂದೆ ನೀಡಲಾಗುತ್ತಿದ್ದ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಕಾರಣ, ಸರ್ಕಾರವೇ 2022ರಲ್ಲಿ ಅದರ ಬಳಕೆ ನಿಲ್ಲಿಸಿತು. ಆದರೆ, ಆ ಬಳಿಕ ಲಸಿಕೆ ಅಭಿವೃದ್ಧಿಗೆ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂಬುದೇ ಅಚ್ಚರಿಯ ವಿಚಾರ. ಕೊರೊನಾ ಸೇರಿದಂತೆ ನಾನಾ ಸೋಂಕುಗಳ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರ ಒಂದು ಪ್ರದೇಶದ ಜನರು ಪರಿತಪಿಸುವಂತೆ ಮಾಡುವ ಕಾಯಿಲೆ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವುದು ಅಚ್ಚರಿ.
ಸೋಂಕಿಗೆ ಶಾಶ್ವತ ಪರಿಹಾರ ಕೊಡಬಹುದಾದ ಲಸಿಕೆ ಅಭಿವೃದ್ಧಿಗೆ ಕುವೆಂಪು ವಿಶ್ವವಿದ್ಯಾನಿಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರೊ. ಎನ್.ಬಿ.ತಿಪ್ಪೇಸ್ವಾಮಿ ಅವರು 2 ಕೋಟಿ ರೂಪಾಯಿ ಸಹಾಯಧನಕ್ಕಾಗಿ ಮನವಿ ಸಲ್ಲಿಸಿದ್ದರೂ, ಸರ್ಕಾರ ಅದನ್ನು ತಿರಸ್ಕರಿಸಿದೆ. ಸರ್ಕಾರದ ಬೆಂಬಲವಿಲ್ಲದಿದ್ದರೂ ಲಸಿಕೆ ಅಭಿವೃದ್ಧಿ ಪ್ರಗತಿಯಲ್ಲಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಲಭ್ಯವಾಗಲಿದೆ ಎಂದು ಪ್ರೊ. ತಿಪ್ಪೇಸ್ವಾಮಿ 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರ್ಕಾರ ಮನಸ್ಸು ಮಾಡಿದ್ದರೆ ಇನ್ನಷ್ಟು ಬೇಗ ಲಸಿಕೆ ಪತ್ತೆ ಕಾರ್ಯ ಪೂರ್ಣಗೊಂಡು ಮಲೆನಾಡಿನ ಜನರಿಗೆ ಸಮಾಧಾನ ಸಿಗುತ್ತಿತ್ತು.
ಈ ನಡುವ ಕೆಎಫ್ಸಿ ರೋಗ ಪತ್ತೆಯಲ್ಲಿ ಪ್ರಗತಿ ಕಂಡುಬಂದಿದೆ. ಪ್ರೊ. ತಿಪ್ಪೇಸ್ವಾಮಿ ಅವರು ಸೋಂಕಿತರ ತ್ವರಿತ ರಕ್ತ ಪರೀಕ್ಷೆಗಾಗಿ ಸರಳ ವಿಧಾನದ ಕಿಟ್ ಅಭಿವೃದ್ಧಿಪಡಿಸಿದ್ದು, ಇದು ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ. 2018ರಿಂದ ಶಿವಮೊಗ್ಗದಲ್ಲಿ ಪರಮಾಣು ಕ್ರಿಮಿ ಪ್ರಯೋಗಾಲಯ ಆರಂಭಗೊಂಡಿದ್ದರಿಂದ, ರಕ್ತದ ಮಾದರಿಗಳನ್ನು ಸ್ಥಳೀಯವಾಗಿಯೇ ಪರೀಕ್ಷಿಸಲಾಗುತ್ತಿದೆ. ಇದರಿಂದ 24 ಗಂಟೆಗಳ ಒಳಗೆ ವರದಿ ಲಭ್ಯವಾಗುತ್ತಿದೆ. ಸದ್ಯ ಸೋಂಕಿತರಿಗೆ ಇದೊಂದೇ ಸಮಾಧಾನ.
ಕಾಯಿಲೆಯ ವ್ಯಾಪ್ತಿ ಮತ್ತು ಮರಣ ದತ್ತಾಂಶ
ಮಂಗನ ಕಾಯಿಲೆ ಮೊದಲು 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಯಿತು. ಕಾಡಿನ ಮಂಗಗಳು ಸತ್ತು ಬೀಳುವುದರೊಂದಿಗೆ ಆರಂಭವಾಗಿದ್ದರಿಂದ ಇದನ್ನು 'ಮಂಗನ ಕಾಯಿಲೆ' ಎಂದು ಕರೆಯಲಾಯಿತು. ಆರಂಭದಲ್ಲಿ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಪ್ರದೇಶಗಳ 600 ಚದರ ಕಿ.ಮೀ. ವ್ಯಾಪ್ತಿಗೆ ಸೀಮಿತವಾಗಿದ್ದ ಕಾಯಿಲೆ, ಮಾನವನ ಅರಣ್ಯ ನಾಶದಿಂದಾಗಿ ಕೋತಿಗಳು ಇನ್ನಷ್ಟು ಊರಿಗೆ ಹೋಗುವ ಕಾರಣ ಕಾಯಿಲೆಯೂ ವಿಸ್ತರಿಸಿದೆ. ಈಗ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 6,000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿದೆ.
2019ರಿಂದ 2025ರ ಮೇ 27ರವರೆಗೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಈ ರೀತಿ ಇದೆ. 2019 ರಲ್ಲಿ 15, 2020ರಲ್ಲಿ 4, 2021 ರಲ್ಲಿ 2, 2022 - ಸಾವಿಲ್ಲ , 2023ರಲ್ಲಿ 2, 2024 - 12, 2025 (ಮೇ 27ರವರೆಗೆ) 8 ಮಂದಿ ಮೃತಪಟ್ಟಿದ್ದಾರೆ. ಈ ರೀತಿಯಾಗಿ ಕನಿಷ್ಠ 42 ಸಾವುಗಳು ವರದಿಯಾಗಿವೆ.
ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಾಲಯದ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹರ್ಷವರ್ಧನ್ 'ದ ಫೆಡರಲ್' ಜತೆ ಮಾತನಾಡಿ ''ಇತ್ತೀಚಿನ ದಿನಗಳಲ್ಲಿ ರೋಗದ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ ವರ್ಷ 303 ಪ್ರಕರಣಗಳಿದ್ದರೆ, ಈ ವರ್ಷ (ಮೇ 27ರವರೆಗೆ) 127 ಪ್ರಕರಣಗಳು ಪತ್ತೆಯಾಗಿವೆ,'' ಎಂದು ಹೇಳಿದ್ದಾರೆ.
ಹರಡುವಿಕೆ, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನ
ಪ್ರತಿ ವರ್ಷ ನವೆಂಬರ್‌ನಿಂದ ಜೂನ್‌ವರೆಗೆ ಮಂಗನ ಕಾಯಿಲೆಯ ಹರಡುವಿಕೆ ತೀವ್ರವಾಗಿರುತ್ತದೆ. ಬೇಸಿಗೆಯಲ್ಲಿ ಉಣ್ಣೆಗಳ ಸಂತಾನೋತ್ಪತ್ತಿ ಹೆಚ್ಚಾಗುವುದರಿಂದ ಮತ್ತು ಕಾಡಿಗೆ ಹೋಗುವ ರೈತರಿಂದ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ಉಣ್ಣೆ ಕಚ್ಚಿದ ಒಂದು ವಾರದ ನಂತರ ತೀವ್ರ ಜ್ವರ, ದೇಹಭಾರ, ತಲೆನೋವು, ಆಯಾಸ, ರಕ್ತಸ್ರಾವ, ಮಿದುಳಿನ ಉರಿಯೂತದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 15-20 ದಿನಗಳವರೆಗೆ ಸ್ಥಿತಿ ಗಂಭೀರವಾಗಿದ್ದರೂ, ಶೇ. 90ರಷ್ಟು ರೋಗಿಗಳು ಚೇತರಿಸಿಕೊಳ್ಳುತ್ತಾರೆ ಎಂಬುದೇ ಸಮಾಧಾನದ ವಿಷಯ.