ತುಮಕೂರಿಗೆ ʼನಮ್ಮ ಮೆಟ್ರೋʼ ವಿಸ್ತರಣೆ; ಡಿಪಿಆರ್‌ ಸಿದ್ಧಪಡಿಸಲು ಟೆಂಡರ್‌ ಕರೆದ ಬಿಎಂಆರ್‌ಸಿಎಲ್‌

ಬಿಡ್ ಸಲ್ಲಿಸಲು ನ.20ರವರೆಗೆ ಗಡುವು ನೀಡಲಾಗಿದೆ. ನ. 21ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ. ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಐದು ತಿಂಗಳ ಅವಧಿ ನೀಡಲಾಗಿದೆ.

Update: 2025-11-17 07:03 GMT

ಬೆಂಗಳೂರಿನ ಮಾದಾವರದಿಂದ ತುಮಕೂರಿನ ಶಿರಾ ಗೇಟ್‌ವರೆಗೆ ಒಟ್ಟು 59.6 ಕಿ.ಮೀ. ʼನಮ್ಮ ಮೆಟ್ರೋʼ ಹಸಿರು ಮಾರ್ಗ ವಿಸ್ತರಣೆಗೆ ಸಂಬಂಧಿಸಿದಂತೆ ʼವಿಸ್ತ್ರತ ಯೋಜನಾ ವರದಿʼ (DPR) ತಯಾರಿಸಲು ಬಿಎಂಆರ್‌ಸಿಎಲ್‌ ಟೆಂಡರ್ ಆಹ್ವಾನಿಸಿದೆ. 

ಪಿಪಿಪಿ (ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲಿ ಯೋಜನೆ ಅಭಿವೃದ್ಧಿಪಡಿಸಲು ನೋಂದಾಯಿತ ಕಂಪನಿಗಳು 4.5 ಲಕ್ಷ ರೂ. ಠೇವಣಿ ಇಡಬೇಕು. ಬಿಡ್ ಸಲ್ಲಿಸಲು ನ.20ರವರೆಗೆ ಗಡುವು ನೀಡಲಾಗಿದೆ. ನ. 21ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ. ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಐದು ತಿಂಗಳ ಅವಧಿ ನೀಡಲಾಗಿದೆ.

ತುಮಕೂರಿನಿಂದ ಬೆಂಗಳೂರಿಗೆ ಪ್ರತಿ ನಿತ್ಯ ಸಾವಿರಾರು ಜನ ಉದ್ಯೋಗ, ಇನ್ನಿತರೆ ಕೆಲಸಗಳಿಗಾಗಿ ಬಂದು ಹೋಗುತ್ತಿದ್ದಾರೆ. ಬೆಂಗಳೂರು-ತುಮಕೂರು ನಡುವೆ ನೆಲಮಂಗಲ, ದಾಬಸ್ಪೇಟೆ ಸಮೀಪ ಸಾಕಷ್ಟು ಕೈಗಾರಿಕೆಗಳು ತಲೆ ಎತ್ತಿದ್ದು, ಜನ ಸಂಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಮೆಟ್ರೋ ವಿಸ್ತರಣೆಗೆ ತೀರ್ಮಾನಿಸಲಾಗಿದೆ. ಮಾದಾವರದಿಂದ ತುಮಕೂರಿಗೆ ಮೆಟ್ರೋ ಮಾರ್ಗ ವಿಸ್ತರಣೆಯಾದರೆ ಪ್ರತಿ ಗಂಟೆಗೆ 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

ಹಸಿರು ಮಾರ್ಗದ ಮೆಟ್ರೋ ಪ್ರಸ್ತುತ ಮಾದಾವರದವರೆಗೆ ಇದೆ. ಅಲ್ಲಿಂದ ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತ್ಸಂದ್ರ ಮೂಲಕ ತುಮಕೂರಿನ ಶಿರಾಗೇಟ್‌ವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದ ಯೋಜನೆಗೆ 20,649 ಕೋಟಿ ರೂ.ವೆಚ್ಚವಾಗುವ ಅಂದಾಜು ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು 2024–25ರ ಬಜೆಟ್‌ನಲ್ಲಿ  ಯೋಜನೆ ಘೋಷಿಸಿದ್ದರು.

ತುಮಕೂರು -ಬೆಂಗಳೂರು ನಡುವೆ ಮೆಟ್ರೋ ಯೋಜನೆ ಆರಂಭಿಸುವ ಕುರಿತು ಖಾಸಗಿ ಸಂಸ್ಥೆಯೊಂದು ಕಾರ್ಯಸಾಧ್ಯತಾ ಪರೀಕ್ಷಾ ವರದಿ ತಯಾರಿಸಿ ಬಿಎಂಆರ್‌ಸಿಎಲ್‌ಗೆ ಸಲ್ಲಿಸಿತ್ತು. ಈ ವರದಿ ಆಧಾರದ ಮೇಲೆ ಬಿಎಂಆರ್‌ಸಿಎಲ್‌ ಇದೀಗ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಕರೆದಿದೆ.

ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆಯನ್ನು ಪ್ರಸ್ತುತ ಕಾರ್ಯ ಹಂತದಲ್ಲಿರುವ ಹಳದಿ, ಗುಲಾಬಿ, ನೀಲಿ ಮಾರ್ಗ ಪೂರ್ಣಗೊಂಡ ನಂತರ ಆರಂಭಿಸಲು ಉದ್ದೇಶಿಸಲಾಗಿದೆ. ಅಂದಾಜಿನ ಪ್ರಕಾರ 2035 ವೇಳೆಗೆ ಯೋಜನೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತುಮಕೂರುವರೆಗೆ ಎಲ್ಲೆಲ್ಲಿ ನಿಲ್ದಾಣ?

ಮಾದಾವರ ನಿಲ್ದಾಣದಿಂದ ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೊನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್‌, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್ ಹಾಗೂ ನಾಗಣ್ಣನಪಾಳ್ಯ ಹಾಗೂ ಶಿರಾ ಗೇಟ್ ಬಳಿ ಮೆಟ್ರೋ ನಿಲ್ದಾಣಗಳು ಇರಲಿವೆ.

ಮಾದಾವರದಿಂದ ಮೊದಲು ನೆಲಮಂಗಲದವರೆಗೆ ಒಟ್ಟು 11ಕಿ.ಮೀ.ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಆ ನಂತರ ನೆಲಮಂಗಲದಿಂದ ತುಮಕೂರುವರೆಗೆ 40 ಕಿ.ಮೀ ಮಾರ್ಗ ನಿರ್ಮಿಸುವ ಯೋಜನೆ ಬಿಎಂಆರ್‌ಸಿಎಲ್‌ ಮುಂದಿದೆ ಎಂದು ತಿಳಿದು ಬಂದಿದೆ.

ಮೆಟ್ರೋ ವಿಸ್ತರಣೆಯಿಂದ ಅನುಕೂಲವೇನು?

ತುಮಕೂರುವರೆಗೆ ಮೆಟ್ರೋ ಯೋಜನೆ ವಿಸ್ತರಣೆಯಿಂದ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನೆಲಮಂಗಲ, ಸೋಂಪುರ, ದಾಬಸ್ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ ಸೇರಿದಂತೆ ಹಲವು ಕೈಗಾರಿಕೆಗಳಿದ್ದು, ತುಮಕೂರಿನಿಂದ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಮೆಟ್ರೋ ಸೇವೆ ಆರಂಭವಾದರೆ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಂದ ಬರುವವರು ತುಮಕೂರಿನಿಂದ ಬಸ್ ಮೂಲಕ ಬರಬೇಕಾಗಿದೆ. ಮೆಟ್ರೋ ಆರಂಭವಾದರೆ ಯಾವುದೇ ಸಂಚಾರ ದಟ್ಟಣೆಯ ಅಡೆತಡೆಯಿಲ್ಲದೇ ಬೆಂಗಳೂರು ನಗರ ಪ್ರವೇಶಿಸಬಹುದಾಗಿದೆ. ಬೆಂಗಳೂರಿಗೆ ಸಮಾನಾಂತರವಾಗಿ ತುಮಕೂರು ಕೂಡ ಅಭಿವೃದ್ಧಿಯಾಗಲಿದೆ.

ದಾಬಸ್‌ಪೇಟೆ ಸಮೀಪ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಕ್ವಿನ್ ಸಿಟಿ ತಲೆ ಎತ್ತಲಿದೆ. ಉದ್ದೇಶಿತ ಮೆಟ್ರೋ ಮಾರ್ಗ ಸೋಂಪುರ ಕೈಗಾರಿಕಾ ಪ್ರದೇಶದವರೆಗೂ ಬರಲಿದ್ದು, ಇದರಿಂದ ಕ್ವಿನ್ ಸಿಟಿಗೆ ಪೂರಕ ಸಾರಿಗೆಯಾಗಿ ಬದಲಾಗಲಿದೆ.

ಮೆಟ್ರೋ ಮಾರ್ಗ ಆರಂಭವಾದ ಬಳಿಕ ನೂರಾರು ಕಂಪನಿಗಳು ಕಾರ್ಯಾರಂಭಿಸಲಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದೆ.

ತುಮಕೂರಿಗೆ ಲಾಭವೇನು?

ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆಯಾಗುವುದರಿಂದ ಬೆಂಗಳೂರಿಗೆ ಸರಿಸಮನಾಗಿ ಅಭಿವೃದ್ಧಿ ಕಾಣಲಿದೆ. ತುಮಕೂರು ಸುತ್ತಮುತ್ತ ಹೆಚ್ಚಿನ ಕೈಗಾರಿಕೆಗಳು ತಲೆ ಎತ್ತಲಿವೆ. ಈಗಾಗಲೇ ತುಮಕೂರಿನಲ್ಲಿ ಅಂತರಸನಹಳ್ಳಿ, ವಸಂತನರಸಾಪುರ ಕೈಗಾರಿಕಾ ಪ್ರದೇಶ ಸಾವಿರಾರು ಎಕರೆಯಲ್ಲಿ ತಲೆ ಎತ್ತಿದೆ. ಮೆಟ್ರೋ ಮಾರ್ಗ ಶಿರಾ ಗೇಟ್ ವರೆಗೆ ಬರುವುದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ನೆರವಾಗಲಿದೆ.

ಒಟ್ಟಾರೆ ಬೆಂಗಳೂರು -ತುಮಕೂರು ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಪರೀಕ್ಷೆಯ ವರದಿ ಸಿದ್ಧವಾಗಿದೆ. ಬಿಎಂಆರ್‌ಸಿಎಲ್‌ ಸಲ್ಲಿಸಿರುವ ವರದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ, ಕೇಂದ್ರ ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ ಇರಲಿದೆ.

ಮಾದಾವರದಿಂದ ಮೊದಲು ನೆಲಮಂಗಲದವರೆಗೆ ಒಟ್ಟು 11ಕಿ.ಮೀ.ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಆ ನಂತರ ನೆಲಮಂಗಲದಿಂದ ತುಮಕೂರುವರೆಗೆ 40 ಕಿ.ಮೀ ಮಾರ್ಗ ನಿರ್ಮಿಸುವ ಯೋಜನೆ ಬಿಎಂಆರ್‌ಸಿಎಲ್‌ ಮುಂದಿದೆ ಎಂದು ತಿಳಿದು ಬಂದಿದೆ.

Tags:    

Similar News