Brand Bengaluru | ದೇವರು ಬೆಂಗಳೂರಿನ ಜನರ ಕೈಬಿಟ್ಟಿಲ್ಲ, ನಿಮ್ಮಿಂದ ಹಾಳಾಗಿದೆ; ಡಿಕೆಶಿ ವಿರುದ್ಧ ಮೋಹನ್​ದಾಸ್​​ ಪೈ ಕಿಡಿ!

Brand Bengaluru : ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ ಎಂದು ಡಿಸಿಎಂ ಡಿಕೆಶಿ ಅವರೇ ಹೇಳಿದ್ದಾರೆ.;

Update: 2025-02-22 11:37 GMT
ಡಿಕೆ ಶಿವಕುಮಾರ್ , ಮೋಹನ್​ದಾಸ್​ ಪೈ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಈಗ ಜನರ ವಿಮರ್ಶೆಗೆ ಒಳಪಡುತ್ತಿದೆ.  ಬೆಂಗಳೂರು ಸೇರಿದಂತೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಿಶ್ಚಲವಾಗಿದೆ ಎಂಬ ಅಭಿಪ್ರಾಯ ಜನರಲ್ಲಿ ನಿಧಾನವಾಗಿ ಮೂಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆಯೇ ಹೊರತು ಯಾವುದೇ ಕಾಮಗಾರಿಗಳು ನೆಟ್ಟಗೆ ಸಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.  ಇದೇ ಕಾರಣಕ್ಕೆ 1.5 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ಪ್ರಗತಿಯ ರೇಸ್​ನಲ್ಲಿ ಹಿಂದೆ ಬೀಳುತ್ತಿದೆ ಎಂಬ ಜನಾಭಿಪ್ರಾಯಕ್ಕೆ ಕಾರಣವಾಗಿದೆ. ಜನರ ಆರೋಪಗಳಿಗೆ ಯಾವುದೇ ಪುರಾವೆ ಇಲ್ಲ ಎಂದು ವಾದ ಮಾಡಬಹುದಾದರೂ, ಡಿಸಿಎಂ ಡಿಕೆಶಿ ಸ್ವಯಂ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. 

ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ ಎಂದು ಡಿಸಿಎಂ ಡಿಕೆಶಿ ಅವರೇ ಹೇಳಿದ್ದಾರೆ. ಆದರೆ, ನಾವು ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಅನುಷ್ಠಾನಕ್ಕೆ ತಂದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಡಿ.ಕೆ ಶಿವಕುಮಾರ್ ಹೇಳಿಕೆ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಾಗುವ ಜತೆಗೆ ಭಾರೀ ಚರ್ಚೆಗೂ ಕಾರಣವಾಗಿದೆ. ವಿಪಕ್ಷ ನಾಯಕರು ಇದಕ್ಕೆ ತಿರುಗೇಟು ನೀಡುವ ಜತೆಗೆ ಉದ್ಯಮಿ ಮೋಹನ್​ದಾಸ್​ ಪೈ ​ ಕೂಡ ಕಿಡಿ ಕಾರಿದ್ದಾರೆ. ‘ಬ್ರ್ಯಾಂಡ್ ಬೆಂಗಳೂರು’ ಕೇವಲ ಪ್ರಚಾರಕ್ಕೆ ಸೀಮಿತವೇ ಎಂದು ಪ್ರಶ್ನಿಸಿದ್ದಾರೆ.

ಮೋಹನ್ ದಾಸ್ ಪೈ ಕಿಡಿ!

ಉದ್ಯಮಿ ಮೋಹನ್ ದಾಸ್ ಪೈ ಪ್ರತಿಕ್ರಿಯೆ ನೀಡಿ, "ಆ ದೇವರು ಇನ್ನೂ ಬೆಂಗಳೂರನ್ನು ಕೈಬಿಟ್ಟಿಲ್ಲ. ಬಹುಶಃ ನಮ್ಮ ಮಂತ್ರಿಗಳು ಕೈಬಿಟ್ಟಿರಬಹುದು. ಇದು ಸಂಪೂರ್ಣವಾಗಿ ಆಡಳಿತ ವೈಫಲ್ಯ," ಎಂದು ಕಿಡಿಕಾರಿದ್ದಾರೆ. ದಯವಿಟ್ಟು ಬೆಂಗಳೂರು ಅಭಿವೃದ್ಧಿ ಮೇಲೆ ಗಮನಹರಿಸಿ ಮತ್ತು ನಮ್ಮ ಜೀವನ ಸುಧಾರಿಸಿ. ಬೆಂಗಳೂರು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮೆಟ್ರೊ ಪ್ರಯಾಣ ದರ ಹೆಚ್ಚಳವಾಗುವಂತೆ ಮಾಡಿ ಬರೋಬ್ಬರಿ 1 ಲಕ್ಷ ಮೆಟ್ರೋ ಪ್ರಯಾಣಿಕರು ಕಡಿಮೆ ಆಗುವಂತೆ ಮಾಡಿದ್ದೀರಿ,'' ಎಂದು ಅವರು ಆರೋಪ ಮಾಡಿದ್ದಾರೆ.

''ಡಿ.ಕೆ. ಶಿವಕುಮಾರ್ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿ 2 ವರ್ಷವಾಯಿತು. ನಿಮ್ಮನ್ನು ಪ್ರಬಲ ಸಚಿವರೆಂದು ನಾವು ಅಂದುಕೊಂಡಿದ್ದೆವು. ಆದರೆ ಈಗ ನಮ್ಮ ಜೀವನ ತುಂಬಾ ಕೆಟ್ಟದಾಗಿದೆ. ಸರ್ಕಾರದಿಂದ ಬೃಹತ್​ ಯೋಜನೆಗಳನ್ನು ಘೋಷಿಸಲಾಗಿದ್ದರೂ ಯಾವುದೇ ಯೋಜನೆಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುತ್ತಿಲ್ಲ,'' ಎಂದು ಹೇಳಿದ್ದಾರೆ.

ಡಿಕೆಶಿ ಹೇಳಿದ್ದೇನು?

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ "ನಮ್ಮ ರಸ್ತೆ - ವಿನ್ಯಾಸ ಕಾರ್ಯಾಗಾರ" ಉದ್ಘಾಟನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಸಿಎಂ ಶಿವಕುಮಾರ್​ “ಕೇವಲ ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ. ಆದರೆ ಗುಣಮಟ್ಟ ಮತ್ತು ಏಕರೂಪ ಕಾಪಾಡುವುದು ನಮ್ಮ ಗುರಿ” ಎಂದು ಹೇಳಿದ್ದರು.

ಪ್ರತಿಪಕ್ಷಗಳು ಹೇಳಿದ್ದೇನು ?

ಡಿಕೆಶಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಪ್ರತಿಕ್ರಿಯೆ ನೀಡಿ “ಕಳೆದ 2 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಮರೀಚಿಕೆಯಾಗಿದೆ. ಬೆಂಗಳೂರು ರಸ್ತೆ ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆಗೆ ಹೋಗುವವರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ನಾವು ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಕನಸು ಬಿತ್ತಿದ್ದರು. ಈಗ ಅದೇ ಸಚಿವರು ಕೈಚೆಲ್ಲಿ ಕುಳಿತಿದ್ದಾರೆ,'' ಎಂದು ಲೇವಡಿ ಮಾಡಿದ್ದಾರೆ.

ಸಾರ್ವಜನಿಕರ ಟೀಕೆ

ಡಿಕೆಶಿ ಹೇಳಿಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಅವರು ಇದೇ ರೀತಿ ಹೇಳಿಕೆ ನೀಡುವುದು ದೊಡ್ಡ ವೈಫಲ್ಯದ ಸಂಕೇತ ಎಂದು ಜನರು ಹೇಳಿದ್ದಾರೆ.

ಬೆಂಗಳೂರಿನ ರಿಯಲ್​ ಎಸ್ಟೇಟ್​ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರಾಜೇಶ್​​ ಎಂಬುವರು ಪ್ರತಿಕ್ರಿಯಿಸಿ, ''ಶಿವಕುಮಾರ್ ಅವರ ಹೇಳಿಕೆಯಿಂದ ಸರ್ಕಾರ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಳ್ಳುವಂತಾಗಿದೆ. ನಗರಾಭಿವೃದ್ಧಿ ಸಚಿವರಾಗಿರುವ ಅವರು ಸದ್ಯ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹಾರ ಮಾಡುವ ಜತೆಗೆ ಭಾರತದ ಬೇರೆ ನಗರಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಬೇಕು. ಅದನ್ನು ಬಿಟ್ಟು ಕೈಕಟ್ಟಿ ಕುಳಿತುಕೊಳ್ಳುವುದು, ಹತಾಶೆ ವ್ಯಕ್ತಪಡಿಸುವುದರಿಂದ ಉಪಯೋಗ ಇಲ್ಲ. ಮೋಹನ್​ದಾಸ್​ ಪೈ ಮಾಡಿರುವ ಟೀಕೆ ಸರಿಯಾಗಿಯೇ ಇದೆ,'' ಎಂದು ಹೇಳಿದ್ದಾರೆ.

ನಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಹರ್ಷ ಎಂಬುವರು ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ''ಶಿವಕುಮಾರ್ ಇಂಥ ಹೇಳಿಕೆಯನ್ನು ನೀಡುವುದು ಎಳ್ಳಷ್ಟೂ ಸರಿಯಲ್ಲ. ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಕಣ್ಣಿಗೆ ರಾಚುವಂತಿದೆ. ಅದಕ್ಕೆ ಪರಿಹಾರ ಕಂಡುಹಿಡಿಯುವುದೇ ಸರ್ಕಾರದ ಕೆಲಸವಾಗಬೇಕು,'' ಎಂದು ಹೇಳಿದ್ದಾರೆ. 

Tags:    

Similar News