ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಫಲಪುಷ್ಪ ಪ್ರದರ್ಶನ: ನ. 27 ರಿಂದ ಆರಂಭ
ಈ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಇತರ ಇಲಾಖೆಗಳೊಂದಿಗೆ ಸಣ್ಣ ಜಂಟಿ ಕಾರ್ಯಕ್ರಮಗಳು ನಡೆದಿತ್ತಾದರೂ, ಇಲಾಖೆಯ ವತಿಯಿಂದ ಇಷ್ಟು ದೊಡ್ಡ ಪ್ರಮಾಣದ ಪ್ರದರ್ಶನವನ್ನು ಆಯೋಜಿಸುತ್ತಿರುವುದು ಇದೇ ಮೊದಲು.
ಕಬ್ಬನ್ ಪಾರ್ಕ್
ನಗರದ ಐತಿಹಾಸಿಕ ಕಬ್ಬನ್ ಪಾರ್ಕ್‌ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ತೋಟಗಾರಿಕಾ ಇಲಾಖೆ ಸಜ್ಜಾಗಿದೆ. ಈ ಪ್ರದರ್ಶನವು ನವೆಂಬರ್ 27 ರಂದು ಪ್ರಾರಂಭವಾಗಿ ಒಟ್ಟು 11 ದಿನಗಳವರೆಗೆ ನಡೆಯಲಿದ್ದು, ಡಿಸೆಂಬರ್ 7 ರಂದು ಮುಕ್ತಾಯಗೊಳ್ಳಲಿದೆ.
ಈ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಇತರ ಇಲಾಖೆಗಳೊಂದಿಗೆ ಸಣ್ಣ ಜಂಟಿ ಕಾರ್ಯಕ್ರಮಗಳು ನಡೆದಿತ್ತಾದರೂ, ಇಲಾಖೆಯ ವತಿಯಿಂದ ದೊಡ್ಡ ಪ್ರಮಾಣದ ಪ್ರದರ್ಶನವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ನಿಯಮಿತವಾಗಿ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದೊಂದು ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಜಿ. ಕುಸುಮಾ ಅವರು ʻದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಣ್ಮನ ಸೆಳೆಯಲಿವೆ 100ಕ್ಕೂ ಹೆಚ್ಚು ಬಗೆಯ ಹೂವುಗಳು
ಪ್ರದರ್ಶನದಲ್ಲಿ ವಿಶೇಷ ಇಕೆಬಾನಾಗಳು ಸೇರಿದಂತೆ 100 ಕ್ಕೂ ಹೆಚ್ಚು ರೀತಿಯ ಹೂವುಗಳು ಮತ್ತು ಸಸ್ಯಗಳನ್ನು ವೀಕ್ಷಿಸಬಹುದು. ಇದರ ಜೊತೆಗೆ, ನರ್ಸರಿ ಸಸ್ಯಗಳು, ತೋಟಗಾರಿಕೆ ಉಪಕರಣಗಳು, ಮನೆಯಲ್ಲಿ ತಯಾರಿಸಿದ ಸಸ್ಯೋತ್ಪನ್ನಗಳು ಮತ್ತು ಬಗೆಬಗೆಯ ಆಹಾರ ಪದಾರ್ಥಗಳನ್ನು ಒಳಗೊಂಡ 100 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುವುದು. ಈ ಕಾರ್ಯಕ್ರಮಕ್ಕಾಗಿ ಇಲಾಖೆ ಸುಮಾರು 40 ಲಕ್ಷವನ್ನು ನಿಗದಿಪಡಿಸಿದೆ. ಹೂವುಗಳೆಲ್ಲ ಕರ್ನಾಟಕ ಹಾಗೂ ಪುಣೆಯಿಂದ ತರಿಸಲಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚಣೆಯ ಥೀಮ್‌ನಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕಲಾ ಪ್ರದರ್ಶನ ಪ್ರಮುಖ ಆಕರ್ಷಣೆ
ಪ್ರತಿ ವರ್ಷ ಲಾಲ್‌ಬಾಗ್‌ನಲ್ಲಿ ನಡೆಯುವ ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕಿಂತ ಭಿನ್ನವಾಗಿ, ಕಬ್ಬನ್ ಪಾರ್ಕ್ ಪ್ರದರ್ಶನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ನಡೆಯುವ ಕಲಾ ಪ್ರದರ್ಶನ. ಕರ್ನಾಟಕದ ಪ್ರಸಿದ್ಧ ಕಲಾವಿದೆ ರುಮಾಲೆ ಚೆನ್ನಬಸವಯ್ಯ ಸೇರಿದಂತೆ ಹಲವಾರು ಕಲಾವಿದರ ವರ್ಣಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಇದರೊಂದಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ಪ್ರದರ್ಶನ ವಲಯವು ಬ್ಯಾಂಡ್‌ಸ್ಟ್ಯಾಂಡ್ ಬಳಿಯ ಫೌಂಟೇನ್ ವೃತ್ತದಿಂದ ಬಾಲ ಭವನದ ಗೇಟ್‌ವರೆಗೆ ಈ ಪ್ರದರ್ಶನ ವಿಸ್ತರಿಸಿದೆ ಎಂದು ಅವರು ತಿಳಿಸಿದರು.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್, ರುಮಾಲೆ ಆರ್ಟ್ ಹೌಸ್ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನಂತಹ ಗುಂಪುಗಳು ಈ ಸಂಘಟನಾ ಪ್ರಯತ್ನಗಳಿಗೆ ಬೆಂಬಲ ನೀಡಿವೆ. ಈ ಪ್ರದರ್ಶನವನ್ನು ನವೆಂಬರ್ 27 ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಆರಂಭವಾಗಿ ಸಂಜೆ 7ಗಂಟೆಯವರೆಗೆ ಈ ಪ್ರದರ್ಶನ ನಡೆಯಲಿದೆ. ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಡೊಳ್ಳು ಕುಣಿತ, ಪೂಜಾಕುಣಿತ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
2017ರಲ್ಲಿ ಬಾಲಭವನ ಮತ್ತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪುಪ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತ. ಆಗ ತೋಟಗಾರಿಕೆ ಇಲಾಖೆಯ ಸಹಯೋಗ ಮಾತ್ರ ಇತ್ತು. ಇದೀಗ ಸಂಪೂರ್ಣವಾಗಿ ತೋಟಗಾರಿಕೆ ಇಲಾಖೆ ಈ ಪ್ರದರ್ಶನವನ್ನು ಆಯೋಜಿಸುತ್ತಿದೆ. ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ 2010ರಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಈ ವರ್ಷ ಕೂಡ ಮಕ್ಕಳು ಹಾಗೂ ಮಹಿಳೆಯರಿಗಾಗಿ ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನೃತ್ಯ, ಛದ್ಮವೇಷ ಸ್ಪರ್ಧೆ, ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಈ ಸ್ಪರ್ಧೆಗೆ ಬರುವವ ಎಲ್ಲಾ ಮಕ್ಕಳು ಹಾಗೂ ಪೋಷಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‌ನ ಉಮೇಶ್ ಕೆ. ʼ ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪ್ರವೇಶ ಶುಲ್ಕ
ಪ್ರದರ್ಶನಕ್ಕೆ ಪ್ರವೇಶ ಶುಲ್ಕವನ್ನು ವಯಸ್ಕರಿಗೆ 30 ಮತ್ತು ಮಕ್ಕಳಿಗೆ 10 ಎಂದು ನಿಗದಿಪಡಿಸಲಾಗಿದೆ. ಗುರುತಿನ ಚೀಟಿ ಹೊಂದಿರುವ ಸಮವಸ್ತ್ರದಲ್ಲಿರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಪ್ರದರ್ಶನದ ಅವಧಿಗೆ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು.