Federal Explainer | ವಿವಾದಗಳ ಮಧ್ಯೆ ಪುನಶ್ಚೇತನದ ಪ್ರಯತ್ನ; ಎಚ್‌ಎಂಟಿಗೆ ಬರಲಿದೆಯೇ ಮರುಜೀವ?
ಆರ್ಥಿಕ ನೀತಿಗಳು ಹಾಗೂ ಅದಕ್ಷ ನಿರ್ವಹಣೆಯಿಂದ ಅಧಃಪತನಕ್ಕೆ ಸಾಗಿದ್ದ ಎಚ್‌ಎಂಟಿ ಕಾರ್ಖಾನೆಯನ್ನು ಮರಳಿ ಹಳಿಗೆ ತರುವ ಪ್ರಯತ್ನಗಳಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮುಂದಾಗಿದ್ದಾರೆ.;
ದೇಶದ ಹೆಮ್ಮೆಯ ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (ಎಚ್ಎಂಟಿ) ತೆರೆಮರೆಗೆ ಸರಿದು ವರ್ಷಗಳೇ ಕಳೆದಿವೆ. ಬೆಂಗಳೂರಿನ ಲಾಲ್‌ಬಾಗ್ ಸೇರಿದಂತೆ ಹಲವೆಡೆ ಇಂದಿಗೂ ನಿರಂತರ ಸುತ್ತುತ್ತಿರುವ ಗಡಿಯಾರ ಮುಳ್ಳು ಕಾರ್ಖಾನೆಯ ಗತವೈಭವವನ್ನು ನೆನಪಿಸುತ್ತದೆ. ಎಚ್ಎಂಟಿ ಹಾಡಿದ್ದ ಚರಮಗೀತೆಯ ನಡುವೆಯೇ ಪುನಶ್ಚೇತನದ ಬೆಳವಣಿಗೆಗಳು ಗರಿಗೆದರಿವೆ.
1953ರಲ್ಲಿ ಅಂದಿನ ಪ್ರಧಾನಿ ಜವಹಾರ್‌ಲಾಲ್ ನೆಹರು ನೇತೃತ್ವದ ಸರ್ಕಾರದಲ್ಲಿ ಆರಂಭವಾದ ಎಚ್ಎಂಟಿ ಕಾರ್ಖಾನೆಯು ಸುಮಾರು ಆರೂವರೆ ದಶಕದಲ್ಲಿ ಕೈಗಾರಿಕಾ ಕ್ರಾಂತಿ ಸೃಷ್ಟಿಸಿತ್ತು. ಆದರೆ, ತದನಂತರದ ಆರ್ಥಿಕ ನೀತಿಗಳು ಹಾಗೂ ಅದಕ್ಷ ನಿರ್ವಹಣೆಯಿಂದ ಅಷ್ಟೇ ಬೇಗನೇ ಅದಃಪತನದ ಹಾದಿ ಹಿಡಿಯಿತು. ಆರ್ಥಿಕ ನಷ್ಟದ ಪರಿಣಾಮ ರೋಗಗ್ರಸ್ಥ ಕೈಗಾರಿಕೆಗಳ ಪಟ್ಟಿಗೆ ಸೇರಿಸಿ 2016 ರಲ್ಲಿ ಎಚ್ಎಂಟಿ ಕಾರ್ಖಾನೆ ಮುಚ್ಚಲು ತೀರ್ಮಾನಿಸಲಾಯಿತು.
ಈಗ ಎನ್‌ಡಿಎ ನೇತೃತ್ವದ ಮೂರನೇ ಅವಧಿಯ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಅವರು ಎಚ್ಎಂಟಿ ಪುನಶ್ಚೇತನಕ್ಕೆ ಪಣ ತೊಟ್ಟಿದ್ದಾರೆ. ಈ ಮಧ್ಯೆ ಕಾರ್ಖಾನೆಯ ಜಾಗದ ವಿವಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷ ಸೃಷ್ಟಿಸಿದೆ. ಪುನಶ್ಚೇತನದ ಮಾತುಕತೆಗಳ ನಡುವೆ ಸೋಮವಾರ ಕೇಂದ್ರ ಸಚಿವರನ್ನು ಭೇಟಿಯಾದ ಎಚ್ಎಂಟಿ ಹಾಲಿ ಹಾಗೂ ನಿವೃತ್ತ ನೌಕರರ ನಿಯೋಗ ಬಾಕಿ ವೇತನ ಪಾವತಿಗೆ ಪಟ್ಟು ಹಿಡಿದಿದ್ದು, ಹೊಸ ಸಂಕಷ್ಟ ಎದುರಾಗಿದೆ.
ಎಚ್ಎಂಟಿ ಮುಚ್ಚಿದ್ದು ಏಕೆ?
ಆರ್ಥಿಕ ಉದಾರೀಕರಣ, ಸರ್ಕಾರದ ನೀತಿಗಳಿಂದಾಗಿ ಎಚ್ಎಂಟಿ ಕಾರ್ಖಾನೆಯು ಖಾಸಗಿ ಕಂಪೆನಿಗಳಿಂದ ತೀವ್ರ ಪೈಪೋಟಿ ಎದುರಿಸಿತು. ಕೈಗಡಿಯಾರ, ಟ್ರ್ಯಾಕ್ಟರ್, ಬೇರಿಂಗ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಹಾಗೂ ಎಂಜಿನಿಯರಿಂಗ್ ಉಪಕರಣಗಳ ಉತ್ಪಾದನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಖಾಸಗಿ ಕಂಪನಿಗಳು ಮುನ್ನೆಲೆಗೆ ಬಂದವು. 80 ರ ದಶಕದ ಮಧ್ಯಭಾಗದಲ್ಲಿ ಆಮದು ನೀತಿ ಪರಿಷ್ಕರಣೆ ಬಳಿಕ ಗಡಿಯಾರ ಉತ್ಪಾದನೆ ಕುಸಿಯಿತು. ಟೈಟಾನ್ ಸೇರಿ ಹಲವು ಖಾಸಗಿ ಕಂಪನಿಗಳು ಉದ್ಯಮವನ್ನು ಆವರಿಸಿದವು. ಬೆಲೆ ಸಮರಕ್ಕಿಳಿದ ಪರಿಣಾಮ ಎಚ್ಎಂಟಿ ನಷ್ಟದ ಸುಳಿಗೆ ಸಿಲುಕಿತು.
ಎಚ್ಎಂಟಿ ಪುನಶ್ಚೇತನ ಪ್ರಯತ್ನ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಎಚ್ಎಂಟಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆಗೆ ವೇಗ ನೀಡಿದ್ದಾರೆ. ವೈಜಾಗ್ ಸ್ಟೀಲ್, ಭದ್ರಾವತಿ ಉಕ್ಕು ಕಾರ್ಖಾನೆ ಜೊತೆಗೆ ಎಚ್ಎಂಟಿಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಹಣಕಾಸು ಸಚಿವರೊಂದಿಗೆ ಸಭೆಗಳನ್ನು ನಡೆಸಿದ್ದರು. ಎಚ್‌ಎಂಟಿ ಪುನರಾರಂಭಕ್ಕೆ ಒತ್ತು ನೀಡುವ ಭಾಗವಾಗಿ ತಾವು ಹಾಗೂ ತಮ್ಮ ಪುತ್ರ ನಿಖಿಲ್ ಅವರು ಎಚ್‌ಎಂಟಿ ಗಡಿಯಾರಗಳನ್ನು ಧರಿಸಿದ್ದರು. ಅಲ್ಲದೇ ಎಲ್ಲರೂ ಎಚ್‌ಎಂಟಿ ವಾಚ್ ಧರಿಸುವಂತೆ ಪ್ರೇರೆಪಿಸಿದ್ದರು. ಆದರೆ, ಈಚೆಗೆ ರಾಜ್ಯ ಅರಣ್ಯ ಇಲಾಖೆ ಹಾಗೂ ಎಚ್ಎಂಟಿ ನಡುವೆ ಭೂ ವಿವಾದ ಉದ್ಭವಿಸಿದ್ದು, ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಎಚ್ಎಂಟಿ ವಿಲೀನಕ್ಕೆ ಒತ್ತಾಯ
ಎಚ್ ಎಂಟಿ ಆಸ್ತಿಗಳ ಮಾರಾಟ, ಕಾರ್ಖಾನೆಯನ್ನು ಸಂಪೂರ್ಣ ಮುಚ್ಚುವ ಆತಂಕದ ಮಧ್ಯೆ ಹಾಲಿ ಹಾಗೂ ನಿವೃತ್ತ ನೌಕರರು ಕೇಂದ್ರ ಸಚಿವರನ್ನು ಭೇಟಿಯಾಗಿ ಬಾಕಿ ವೇತನ ನೀಡಬೇಕು. ಕಾರ್ಖಾನೆ ಮುಚ್ಚುವ ಬದಲು ಇತರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ವಿಲೀನ ಮಾಡುವಂತೆ ಮನವಿ ಮಾಡಿದ್ದಾರೆ .
ಬಿಹೆಚ್ ಇಎಲ್, ಬಿಇಎಲ್, ಬಿಇಎಂಎಲ್ ದಂತಹ ಕಂಪನಿಗಳಲ್ಲಿ ಹೆಚ್ ಎಂಟಿಯನ್ನು ವಿಲೀನ ಮಾಡಬೇಕು. ಎಚ್ಎಂಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಮಾಡಿಕೊಡಬೇಕು ಎಂದು ನೌಕರರ ನಿಯೋಗ ಒತ್ತಾಯಿಸಿದೆ. ವಿಆರ್‌ಎಸ್ ಪಡೆದ ನಂತರ ಬಹಳಷ್ಟು ನೌಕರರಿಗೆ ಕಂಪೆನಿಯಿಂದ ಸೌಲಭ್ಯಗಳು ಸಿಕ್ಕಿಲ್ಲ. ನೌಕರರ ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಬಾಕಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪುನಶ್ಚೇತನದ ಸವಾಲು ಏನು?
ಹೆಚ್ ಎಂಟಿ ಕಾರ್ಖಾನೆ ಪುನಚ್ಛೇತನ ದೊಡ್ಡ ಸವಾಲಾಗಿದೆ. ಎಚ್ಎಂಟಿ ಕಾರ್ಖಾನೆಯನ್ನು ರೋಗಗ್ರಸ್ಥ ಕಾರ್ಖಾನೆಗಳ ಪಟ್ಟಿಗೆ ಸೇರಿಸಿದಾಹ ಹಲವು ನೌಕರರಿಗೆ ವಿಆರ್ಎಸ್ ನೀಡಲಾಗಿದೆ. ಇನ್ನು ಕೆಲವರು ನಿವೃತ್ತ ಹೊಂದಿದರೆ, ಮತ್ತೆ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರ ಬಾಕಿ ವೇತನ 361 ಕೋಟಿ ಪಾವತಿಸುವುದು ಕೂಡ ಸರ್ಕಾರದ ಮುಂದಿರುವ ಸವಾಲಾಗಿದೆ.
ಎಚ್ಎಂಟಿ ಕಾರ್ಖಾನೆಯನ್ನು ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಯೋಜನೆಗಳ ಅಡಿ ಪುನಶ್ಚೇತನಗೊಳಿಸಲು ಕೇಂದ್ರ ಸಚಿವರು ಹೊರಟಿದ್ದಾರೆ. ಈಗಾಗಲೇ ಪ್ರಧಾನಿ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ಅಥವಾ ರೋಗಗ್ರಸ್ಥ ಕೈಗಾರಿಕೆಗಳಿಗೆ ಮರುಜೀವ ಕೊಡುವ ಪ್ರಯತ್ನ ನಡೆಯುತ್ತಿದೆ.
ಎಚ್ಎಂಟಿ ಭೂ ವಿವಾದ
ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ನಲ್ಲಿರುವ 443 ಎಕರೆ ಜಾಗದ ಮಾಲೀಕತ್ವದ ವಿಷಯದಲ್ಲಿ ಎಚ್ಎಂಟಿ ಹಾಗೂ ಅರಣ್ಯ ಇಲಾಖೆ ನಡುವಿನ ಸಂಘರ್ಷ ಏರ್ಪಟ್ಟಿದೆ. ಎಚ್ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ಆರಂಭಿಸಿದ್ದಾರೆ. ಈ ಮಧ್ಯೆ ಅರಣ್ಯ ಸಚಿವರ ಭೂಮಿ ಸ್ವಾಧೀನದ ಆದೇಶ ಪ್ರಶ್ನಿಸಿ ಎಚ್ಎಂಟಿ ಕಾರ್ಖಾನೆ ಆಡಳಿತ ಮಂಡಳಿ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
₹14,300 ಕೋಟಿ ಮೌಲ್ಯದ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಚ್ಎಂಟಿ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕು ಎಂದು ಕೋರಲಾಗಿದೆ. ರಾಜ್ಯ ಸರ್ಕಾರವು ಎಚ್ಎಂಟಿ ಅಧೀನದ ಭೂಮಿಯನ್ನು ವಶಪಡಿಸಿಕೊಂಡರೆ ಪುನಶ್ಚೇತನ ಕಾರ್ಯಕ್ಕೆ ಹೊಡೆತ ಬೀಳಲಿದೆ ಎಂಬುದು ಎಚ್ಎಂಟಿ ವಾದ.
ವಿವಾದಿತ ಜಾಗದ ಹಿನ್ನೆಲೆ ಏನು?
ಎಚ್ಎಂಟಿ ಕಾರ್ಖಾನೆ ಸ್ಥಾಪಿಸುವ ಸಂಬಂಧ ಜಾರಕಬಂಡೆ ಕಾವಲ್ನಲ್ಲಿರುವ 649 ಎಕರೆ ಜಾಗವನ್ನು 1960-1965ರಲ್ಲಿ ರಾಜ್ಯ ಸರ್ಕಾರ ಎಚ್ಎಂಟಿಗೆ ನೀಡಿತ್ತು. ಇದರಲ್ಲಿ ಬೇರೆ ಬೇರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಜಾಗ ನೀಡಿದ ಬಳಿಕ 443 ಎಕರೆ ಎಚ್ಎಂಟಿ ಸ್ವಾಧೀನದಲ್ಲಿದೆ. ಈ ಜಾಗದಲ್ಲಿ ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆ 5 ಎಕರೆಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಇನ್ನು ಖಾಸಗಿ ಕಂಪನಿಗಳಿಗೆ ಎಚ್ಎಂಟಿ ಮಾರಾಟ ಮಾಡಿರುವ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಎಚ್ಎಂಟಿಯಿಂದ 159 ಎಕರೆ ಪರಭಾರೆ
ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿಯಿಂದ ಪಾರಾಗಲು ಎಚ್ಎಂಟಿಯ ಮೂರು ಸಂಸ್ಥೆಗಳನ್ನು ಮುಚ್ಚಲು ಭಾರಿ ಕೈಗಾರಿಕೆ ಇಲಾಖೆ 2016ರಲ್ಲಿ ಒಪ್ಪಿಗೆ ನೀಡಿತ್ತು. ಜೊತೆಗೆ ವಿವಿಧೆಡೆ ಸಂಸ್ಥೆಯ 3,588 ಕೋಟಿ ರೂ.ಮೊತ್ತದ ಸ್ಥಿರಾಸ್ತಿ ಮಾರಲು ಅನುಮೋದನೆ ನೀಡಿತ್ತು. ಅದರಂತೆ ಪೀಣ್ಯದ ಪ್ಲಾಂಟೇಷನ್ನಲ್ಲಿ ಆದಾಯ ತೆರಿಗೆ ಇಲಾಖೆಗೆ 5.80 ಎಕರೆ, ರಾಮನ್ ಸಂಶೋಧನಾ ಸಂಸ್ಥೆಗೆ 0.74 ಎಕರೆ, ಇಸ್ರೋ ಸಂಸ್ಥೆಗೆ 88 ಎಕರೆ, ಗೇಲ್ ಸಂಸ್ಥೆಗೆ 1 ಎಕರೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ 111 ಎಕರೆ ಹಾಗೂ ಖಾಸಗಿ ಸಂಸ್ಥೆಗಳಿಗೆ 48 ಎಕರೆ ಮಾರಾಟ ಮಾಡಿತ್ತು.
ಪಟ್ಟು ಬಿಡದ ಅರಣ್ಯ ಸಚಿವ
ಪೀಣ್ಯ ಪ್ಲಾಂಟೇಷನ್ನಲ್ಲಿ ಅರಣ್ಯ ಇಲಾಖೆಗೆ ಸೇರಿದ 599 ಎಕರೆ ಭೂಮಿಯನ್ನು ಒತ್ತುವರಿ ತೆರವು ಮಾಡಿ ಸ್ವಾಧೀನಪಡಿಸಿಕೊಳ್ಳುವಂತೆ ಸಚಿವ ಈಶ್ವರ ಖಂಡ್ರೆ ಅವರು ಆಗಸ್ಟ್ ತಿಂಗಳಲ್ಲಿ ಆದೇಶಿಸಿದ್ದರು.
ಅರಣ್ಯ ಇಲಾಖೆಯಿಂದ 443 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿ ಎಚ್ಎಂಟಿಗೆ ಹಸ್ತಾಂತರಿಸುವ ಕುರಿತು 2020ರಲ್ಲಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ವಾಪಸ್ ಪಡೆಯಬೇಕು. ಪ್ರಮಾಣಪತ್ರ ಸಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.