ಬಹುಕೋಟಿ ವಂಚನೆ ಪ್ರಕರಣ: ರೋಶನ್ ಸಲ್ಡಾನ್ಹಾ ವಿರುದ್ಧದ ನಾಲ್ಕು ಪ್ರಕರಣಗಳು ಸಿಐಡಿಗೆ ಹಸ್ತಾಂತರ

ಮಂಗಳೂರಿನ ಸೆನ್ ಪೊಲೀಸರು ಜು.17ರಂದು ರೋಶನ್ ಸಲ್ಡಾನ್ಹಾನನ್ನು ಆತನ ಮನೆಯಲ್ಲಿ ಬಂಧಿಸಿದ್ದರು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿತ್ತು.;

Update: 2025-08-16 09:57 GMT

ಬಹುಕೋಟಿ ಪ್ರಕರಣದ ಆರೋಪಿ ರೋಶನ್‌ ಸಲ್ಡಾನ್ಹಾ

ಬಹುಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಮಂಗಳೂರಿನ ಬಜಾಲ್ ಬೊಲ್ಲಗುಡ್ಡೆ ನಿವಾಸಿ ರೋಶನ್ ಸಲ್ಡಾನ್ಹಾ (43) ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳು ಸಿಐಡಿಗೆ ಹಸ್ತಾಂತರಗೊಂಡಿವೆ.

ಈ ಪ್ರಕರಣಗಳ ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮಾಡಲಿದ್ದಾರೆ. ಬಿಹಾರದ ಉದ್ಯಮಿಯೊಬ್ಬರಿಗೆ 10 ಕೋಟಿ ರೂ. ಮೋಸ ಮಾಡಿದ ಪ್ರಕರಣ ಸೇರಿ ಮಂಗಳೂರಿನ ಸೆನ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳು, ಹಾಗೂ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಮುಂಬೈ ಮೂಲದ ಉದ್ಯಮಿಗೆ 5 ಕೋಟಿ ರೂ. ಪಡೆದ ವಂಚನೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಿದೆ. ಇದಲ್ಲದೆ, ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ 14.74 ಲಕ್ಷ ರೂ. ವಂಚನೆ ಮಾಡಿದ ಎರಡು ಪ್ರಕರಣಗಳನ್ನು ಸಹ ಸಿಐಡಿ ತನಿಖೆ ನಡೆಸಲಿದೆ.

ಮಂಗಳೂರಿನ ಸೆನ್ ಪೊಲೀಸರು ಜುಲೈ 17ರಂದು ರೋಶನ್ ಸಲ್ಡಾನ್ಹಾನನ್ನು ಆತನ ಮನೆಯಲ್ಲಿ ಬಂಧಿಸಿದ್ದರು. ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆತನ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಹಲವು ಮಂದಿ ಉದ್ಯಮಿಗಳು ತಮಗಾದ ವಂಚನೆಗೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬಂದಿದ್ದರು. ಮಹಾರಾಷ್ಟ್ರದ ಉದ್ಯಮಿಗೆ 5 ಕೋಟಿ ರೂ. ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ 20 ಕೋಟಿ ರೂ. ವಂಚನೆ ಮಾಡಿರುವ ಕುರಿತಂತೆಯೂ ಪ್ರಕರಣ ದಾಖಲಾಗಿತ್ತು. ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಸಹ 1 ಕೋಟಿ ರೂ. ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದರು.

ಸುಮಾರು 200 ಕೋಟಿ ರೂ.ಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಪ್ರಕರಣದಲ್ಲಿ, ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಹೈಕೋರ್ಟ್ ಬಹುಕೋಟಿ ವಂಚಕ ರೋಶನ್ ಸಲ್ಡಾನ್ಹಾಗೆ ಕೊಂಚ ರಿಲೀಫ್ ನೀಡಿತ್ತು. ಇತ್ತೀಚೆಗೆ, ಸಾಲ ನೀಡುವ ನೆಪದಲ್ಲಿ ಭಾರೀ ವಂಚನೆ ನಡೆಸಿದ ಜಾಲದಲ್ಲಿ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರೋಶನ್ನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಆತನ ಐಷಾರಾಮಿ ಜೀವನ ಮತ್ತು ಸೀಕ್ರೆಟ್ಗಳು ಇಡೀ ಮಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಜನರನ್ನೇ ಬೆಚ್ಚಿಬೀಳಿಸಿತ್ತು.

Tags:    

Similar News