ಮುಟ್ಟಿನ ರಜೆ ಕಡ್ಡಾಯ: ಕಾರ್ಮಿಕ ಇಲಾಖೆಯಿಂದ ಅಧಿಕೃತ ಆದೇಶ
ಮಹಿಳಾ ನೌಕರರಿಗೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಲಭ್ಯವಾಗಲಿದೆ. ಆಯಾ ತಿಂಗಳ ರಜೆಯನ್ನು ಅದೇ ತಿಂಗಳಲ್ಲಿ ತೆಗೆದುಕೊಳ್ಳಬೇಕಾಗಿದೆ.
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಮುಟ್ಟಿನ ರಜೆ ನೀತಿ ಜಾರಿಗೊಳಿಸಿ ಕಾರ್ಮಿಕ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅಂದರೆ, ಮಹಿಳಾ ನೌಕರರಿಗೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಲಭ್ಯವಾಗಲಿದೆ.
ಈ ನೀತಿಯು 18 ರಿಂದ 52 ವರ್ಷ ವಯೋಮಿತಿಯ ಎಲ್ಲಾ ಮಹಿಳಾ ನೌಕರರಿಗೆ ಅನ್ವಯಿಸುತ್ತದೆ. ಕಾಯಂ ಉದ್ಯೋಗಿಗಳು, ಗುತ್ತಿಗೆ ಆಧಾರದ ಮೇಲೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಮಹಿಳೆಯರಿಗೂ ಇದು ಕಡ್ಡಾಯವಾಗಿ ಅನ್ವಯವಾಗುತ್ತದೆ.
ಕಾರ್ಖಾನೆಗಳ ಕಾಯ್ದೆ-1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961, ತೋಟಗಾರಿಕಾ ಕಾರ್ಮಿಕರ ಕಾಯ್ದೆ-1951, ಬೀಡಿ ಮತ್ತು ಸಿಗರೇಟು ಕಾರ್ಮಿಕರ ಕಾಯ್ದೆ-1966, ಮತ್ತು ಮೋಟಾರು ವಾಹನ ಕಾರ್ಮಿಕರ ಕಾಯ್ದೆ-1961ರ ಅಡಿ ನೋಂದಣಿಯಾಗಿರುವ ಎಲ್ಲಾ ಸಂಸ್ಥೆಗಳು ಮುಟ್ಟಿನ ರಜೆ ನೀಡಬೇಕು. ಐಟಿ ಮತ್ತು ಐಟಿಇಎಸ್ ವಲಯದ ಕಂಪನಿಗಳು ಸಹ ಈ ವ್ಯಾಪ್ತಿಗೆ ಒಳಪಡುತ್ತವೆ.
ಪ್ರತಿ ತಿಂಗಳ ಮುಟ್ಟಿನ ರಜೆಯನ್ನು ಅದೇ ತಿಂಗಳಿನಲ್ಲಿಯೇ ಬಳಸಿಕೊಳ್ಳಬೇಕು. ಅದನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ಮುಖ್ಯವಾಗಿ ಮಹಿಳಾ ನೌಕರರು ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮುಟ್ಟಿನ ರಜೆ ನೀತಿಗೆ ರಾಜ್ಯ ಸಚಿವ ಸಂಪುಟವು ಕಳೆದ ತಿಂಗಳು ಅನುಮೋದನೆ ನೀಡಿತ್ತು, ಅದರಂತೆ ಇದೀಗ ಕಾರ್ಮಿಕ ಇಲಾಖೆಯು ಅಧಿಕೃತ ಆದೇಶ ಜಾರಿಗೊಳಿಸಿದೆ.